[ಮಾದಕ ವಸ್ತು ನಿಯಂತ್ರಣ] ವಿಶೇಷ ನ್ಯಾಯಾಲಯದಲ್ಲಿ ಅಪಾರ ಪ್ರಕರಣಗಳು ಬಾಕಿ; ಕಾಲಮಿತಿಯಲ್ಲಿ ಇತ್ಯರ್ಥ ಕಷ್ಟ: ಹೈಕೋರ್ಟ್‌

ವಿಚಾರಣಾಧೀನ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಎಲ್ಲಾ 1,308 ಪ್ರಕರಣಗಳಲ್ಲಿನ ಆರೋಪಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇದು ನಾಗರಿಕ ಸಮಾಜದ ಹಿತದೃಷ್ಟಿಯಿಂದ ಸೂಕ್ತ ಕ್ರಮವಾಗುವುದಿಲ್ಲ ಎಂದಿರುವ ನ್ಯಾಯಾಲಯ.
Karnataka High Court and NDPS Act
Karnataka High Court and NDPS Act

ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್‌) ಅಡಿ ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯದಲ್ಲಿ ಅಪಾರ ಪ್ರಮಾಣದಲ್ಲಿ ಬಾಕಿ ಪ್ರಕರಣಗಳು ಉಳಿದಿವೆ. ಇವುಗಳ ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸುವುದು ಅಸಾಧ್ಯ ಎಂದಿರುವ ಕರ್ನಾಟಕ ಹೈಕೋರ್ಟ್‌ ಕೀನ್ಯಾ ಮೂಲದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.

2020ರಲ್ಲಿ ಬಂಧಿತನಾಗಿರುವ ಕೀನ್ಯಾದ ಇಮಾನ್ಯುವಲ್‌ ಮೈಕಲ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಎಲ್ಲಾ ಪ್ರಕರಣಗಳಲ್ಲೂ ಸಾಕಷ್ಟು ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್‌ ಹಾಜರುಪಡಿಸಬೇಕಿದೆ. ಅಲ್ಲದೇ, ಆ ಎಲ್ಲಾ ಸಾಕ್ಷ್ಯಗಳನ್ನು ಪಾಟೀ ಸವಾಲಿಗೆ ಒಳಪಡಿಸಬೇಕಿದೆ. ಹೀಗಾಗಿ, ನಿಗದಿತ ಕಾಲಾವಧಿಯಲ್ಲಿ ಈ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಮಾನವ ಸಹಜವಾಗಿ ಅಸಾಧ್ಯ ಕಾರ್ಯವಾಗಿದೆ. ಈ ನಡುವೆ, ಜಾಮೀನು ಅರ್ಜಿ ಮತ್ತು ಅರ್ಹತೆಯ ಮೇಲೆ ವಿಸ್ತೃತವಾದ ವಾದ ಮಂಡನೆಯಾಗುತ್ತದೆ. ಪರಿಸ್ಥಿತಿ ಹೀಗಿರುವುದರಿಂದ ವಾಸ್ತವಿಕವಾಗಿ ಕೆಲವೇ ತಿಂಗಳಲ್ಲಿ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಅಸಾಧ್ಯವಾದ ಕೆಲಸ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಸಂವಿಧಾನದ 21ನೇ ವಿಧಿಯಡಿ ಆರೋಪಿಯ ಹಕ್ಕನ್ನು ಪರಿಗಣಿಸಿ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಾದರೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಎಲ್ಲಾ 1,308 ಪ್ರಕರಣಗಳಲ್ಲಿನ ಆರೋಪಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇದು ನಾಗರಿಕ ಸಮಾಜದ ಹಿತದೃಷ್ಟಿಯಿಂದ ಸೂಕ್ತ ಕ್ರಮವಾಗುವುದಿಲ್ಲ. ಆರೋಪಿಯ ವೈಯಕ್ತಿಕ ಹಕ್ಕಿಗಿಂತ ಸಮಾಜದ ಹಿತಾಸಕ್ತಿ ಅತಿ ಮುಖ್ಯ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ವಿದೇಶದಿಂದ ತರಿಸಿದ ಮಾದಕ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಕೀನ್ಯಾದ ಪ್ರಜೆಯನ್ನು 2020ರ ಡಿಸೆಂಬರ್‌ನಲ್ಲಿ ಬಂಧಿಸಲಾಗಿತ್ತು. 2021ರಲ್ಲಿ ಆತ ಸಲ್ಲಿಸಿದ್ದ ಜಾಮೀನು ಅರ್ಜಿಯು ತಿರಸ್ಕೃತಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಮೂರು ತಿಂಗಳಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಕೋರಿ ಆರೋಪಿಯು 2022ರ ನವೆಂಬರ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಆದೇಶದ ಹೊರತಾಗಿಯೂ ಈ ಅವಧಿಯು 2023ರ ಫೆಬ್ರವರಿ 6ರಂದು ಮುಕ್ತಾಯವಾಗಿದ್ದರಿಂದ ಕಾಲಮಿತಿ ಹೆಚ್ಚಿಸುವಂತೆ ವಿಚಾರಣಾಧೀನ ನ್ಯಾಯಾಲಯವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದನ್ನು ಹೈಕೋರ್ಟ್‌ ಮಾನ್ಯ ಮಾಡಿ, ಮತ್ತೆ ಮೂರು ತಿಂಗಳು ವಿಸ್ತರಿಸಿತ್ತು. ಈಗ ಇನ್ನೂ ನಾಲ್ಕು ಸಾಕ್ಷಿಗಳನ್ನು ವಿಚಾರಣೆಗೆ ನಡೆಸಲು ಬಾಕಿ ಇದೆ” ಎಂದು ಹೇಳಲಾಗಿದೆ.

ಆರೋಪಿಯು ತನ್ನ ವಿರುದ್ಧದ ಆರೋಪ ಸಾಬೀತುಪಡಿಸಲು ಯಾವುದೇ ದಾಖಲೆಗಳು ಇಲ್ಲ ಎಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಹಿಂದೆ ವಜಾ ಮಾಡಿದೆ. ಹೈಕೋರ್ಟ್‌ ವಿಚಾರಣೆಗೆ ಕಾಲಾವಕಾಶ ನೀಡಿರುವ ಅವಧಿ ಮುಗಿಯುವುದರ ಒಳಗೆ ಎರಡನೇ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರ ವಿರುದ್ಧ ವಿದೇಶಿಯರ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಭಾರತದಲ್ಲಿ ಉಳಿಯಲು ಸೂಕ್ತ ಪಾಸ್‌ಪೋರ್ಟ್‌ ಮತ್ತು ವೀಸಾ ಹೊಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅವರನ್ನು ಜೈಲಿನಿಂದ ಬಿಡುಗಡೆಯಾಗಲು ಅನುಮತಿಸಲಾಗದು. ಒಂದೊಮ್ಮೆ ಅವರನ್ನು ಬಿಡುಗಡೆ ಮಾಡಿದರೂ ಬಂಧನ ಕೇಂದ್ರದಲ್ಲಿ ಇಡಬೇಕು ಎಂದು ಪ್ರಾಸಿಕ್ಯೂಷನ್‌ ವಿರೋಧ ದಾಖಲಿಸಿತ್ತು. ಇದನ್ನು ಪುರಸ್ಕರಿಸಿರುವ ಹೈಕೋರ್ಟ್‌ ಆರೋಪಿಯ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.

Attachment
PDF
Emmanuel Michael Vs Union of India.pdf
Preview

Related Stories

No stories found.
Kannada Bar & Bench
kannada.barandbench.com