
ಬೆಂಗಳೂರಿನ ವಕೀಲರ ಸಂಘದ (ಎಎಬಿ) ಆಡಳಿತ ಮಂಡಳಿಯಲ್ಲಿ ಖಜಾಂಚಿ ಹುದ್ದೆಯನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡುವಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ಮಾಡಿದ ಬೆನ್ನಿಗೇ ಫೆಬ್ರವರಿ 2ರಂದು ನಡೆಯಬೇಕಿದ್ದ ಎಎಬಿ ಚುನಾವಣೆಯು ರದ್ದುಗೊಂಡಿದೆ.
ಈ ಕುರಿತು ಚುನಾವಣೆಯ ಉಸ್ತುವಾರಿ ಹೊತ್ತಿರುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಮತ್ತು ಮುಖ್ಯ ಚುನಾವಣಾಧಿಕಾರಿ ಕೆ ಎನ್ ಫಣೀಂದ್ರ ಅವರು ಪ್ರಕಟಣೆ ಹೊರಡಿಸಿದ್ದು, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2025ರ ಜನವರಿ 8ರಂದು ಪ್ರಕಟಿಸಿರುವ ಚುನಾವಣಾ ವೇಳಾಪಟ್ಟಿಯನ್ನು ಅಮಾನತುಗೊಳಿಸಲಾಗಿದೆ. ಫೆಬ್ರವರಿ 2ರಂದು ನಿಗದಿಯಾಗಿದ್ದ ಬೆಂಗಳೂರು ವಕೀಲರ ಸಂಘದ ಚುನಾವಣೆಯನ್ನು ರದ್ದುಪಡಿಸಲಾಗಿದ್ದು, ಮರು ಚುನಾವಣಾ ಪ್ರಕ್ರಿಯೆಯನ್ನು ತಿಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿಯು ಪ್ರಕರಣವನ್ನು ಪರಿಶೀಲಿಸುತ್ತಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಂವಿಧಾನದ 142ನೇ ವಿಧಿಯಡಿ ಅಧಿಕಾರ ಚಲಾಯಿಸಿ, ಎಎಬಿಯ ಖಜಾಂಚಿ ಹುದ್ದೆಯನ್ನು ಮಹಿಳಾ ವಕೀಲರಿಗೆ ಮೀಸಲಿಡಬೇಕು. ಈ ಹಿನ್ನೆಲೆಯಲ್ಲಿ ಅಗತ್ಯಬಿದ್ದರೆ ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿಯು ನಾಮಪತ್ರ ಸ್ವೀಕಾರ ದಿನಾಂಕ ಮತ್ತು ಚುನಾವಣೆಯನ್ನು ಮುಂದೂಡಬಹುದು. ಎಎಬಿ ಆಡಳಿತ ಮಂಡಳಿಯ ಸದಸ್ಯತ್ವದಲ್ಲಿ ಕನಿಷ್ಠ ಪಕ್ಷ ಶೇ. 30ರಷ್ಟು ಪ್ರಾತಿನಿಧ್ಯವನ್ನು ಮಹಿಳೆಯರಿಗೆ ನೀಡಬೇಕು ಎಂದು ಆದೇಶಿಸಿದೆ.
ಎಎಬಿ ಚುನಾವಣೆಯ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದು, ಜನವರಿ 20ರಂದು ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಗಿದಿತ್ತು. ಒಟ್ಟಾರೆ 140 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದರು.