ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ - ಎಚ್‌ಎಸ್‌ಆರ್‌ಪಿ) ಅಳವಡಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿಯ ಕುರಿತು ಸೆಪ್ಟೆಂಬರ್ 19ರಂದು ಪರಿಗಣಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದ್ದು, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರದ ಅಧಿಸೂಚನೆಗೆ ತಡೆ ನೀಡುವಂತೆ ಕೋರಿ ಅತಿ ಸುರಕ್ಷಿತ ನೋಂದಣಿ ಫಲಕಗಳ ಭಾರತೀಯ ಉತ್ಪಾದಕರ ಒಕ್ಕೂಟ ಸೇರಿದಂತೆ ಅವಕಾಶ ವಂಚಿತ ಕೆಲ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರದ ಅಧಿಸೂಚನೆಗೆ ತಡೆ ನೀಡುವಂತೆ ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ. ಇದರ ಬಗ್ಗೆ ಸೆಪ್ಟೆಂಬರ್ 19ರಂದು ಪರಿಗಣಿಸಲಾಗುವುದು. ಅಷ್ಟರೊಳಗೆ ಅರ್ಜಿದಾರರ ಮಧ್ಯಂತರ ಮನವಿ ಬಗ್ಗೆ ರಾಜ್ಯ ಸರ್ಕಾರ ತನ್ನ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಮೂಲ ಉಪಕರಣ ತಯಾರಕ (ಓಇಎಂ) ಅಧಿಕೃತ ಡೀಲರ್‌ಗಳ ಮೂಲಕ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ಮೀರಿ ಅರ್ಜಿದಾರ ಸಂಸ್ಥೆಯನ್ನು ಅಧಿಸೂಚನೆಯಿಂದ ಹೊರಗಿಡಲಾಗಿದೆ. ಕೆಲವು ಪ್ರಭಾವಿ ಸಂಸ್ಥೆಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಆದಿತ್ಯ ಸೋಂಧಿ ಅಧಿಕೃತ ಡೀಲರ್‌ಗಳ ಪರವಾಗಿ ಹಿರಿಯ ವಕೀಲರಾದ ಸಜ್ಜನ್ ಪೂವಯ್ಯ, ದೇವದತ್ ಕಾಮತ್ ವಾದ ಮಂಡಿಸಿದರು. ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಂ ಹುಯಿಲಗೋಳ ವಾದಿಸಿದರು.