ಎಎಬಿ ಸಿದ್ಧಪಡಿಸಿರುವ ಕರ್ನಾಟಕ ವಕೀಲರ ರಕ್ಷಣಾ ಕರಡು ಮಸೂದೆಯ ವಿಶೇಷಗಳೇನು?

ವಕೀಲರಲ್ಲದವರು ವಕೀಲರ ವಿರುದ್ಧ ಯಾವುದೇ ಹಿಂಸೆ ನಡೆಸಿದರೆ ಅಥವಾ ಬೆಂಬಲಿಸಿದರೆ ಅವರಿಗೆ ಒಂದು ವರ್ಷ ಅಥವಾ ರೂ 1 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸತಕ್ಕದ್ದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಎಎಬಿ ಸಿದ್ಧಪಡಿಸಿರುವ ಕರ್ನಾಟಕ ವಕೀಲರ ರಕ್ಷಣಾ ಕರಡು ಮಸೂದೆಯ ವಿಶೇಷಗಳೇನು?
Published on

ಕರ್ನಾಟಕ ವಕೀಲರ (ರಕ್ಷಣೆ ಮತ್ತು ಹಿಂಸೆ ತಡೆ) ಕರಡು ಮಸೂದೆ – 2021ರ ಕರಡು ಪ್ರತಿಯನ್ನು ಬುಧವಾರ ಕಾನೂನು ಕಾರ್ಯದರ್ಶಿಗಳಿಗೆ ಸಲ್ಲಿಸಿರುವ ಬೆಂಗಳೂರು ವಕೀಲರ ಸಂಘ ಸುಗ್ರೀವಾಜ್ಞೆ ಮೂಲಕ ಕಾಯಿದೆ ಜಾರಿಗೆ ತರಬೇಕು ಎಂದು ಮನವಿ ಮಾಡಿದೆ.

ಕರಡು ಮಸೂದೆ ಸಿದ್ಧಪಡಿಸುವ ಕುರಿತಂತೆ ಕಳೆದ ಮಾರ್ಚ್‌ನಲ್ಲಿ ಸಂಘದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಹಿರಿಯ ವಕೀಲರಾದ ಉದಯ್ ಹೊಳ್ಳ, ಸಿ ಹೆಚ್ ಹನುಮಂತರಾಯ, ಎ ಎಸ್ ಪೊನ್ನಣ್ಣ ಮತ್ತು ಡಿ ಆರ್ ರವಿಶಂಕರ್ ಅವರನ್ನು ಒಳಗೊಂಡ ಸಮಿತಿ ವಕೀಲರ ರಕ್ಷಣಾ ಮಸೂದೆಯ ಕರಡು ಪ್ರತಿಯನ್ನು ಸಿದ್ದಪಡಿಸಿ ಸಂಘಕ್ಕೆ ನೀಡಿತ್ತು. ಆ ಪ್ರತಿಯನ್ನು ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಅವರ ನೇತೃತ್ವದಲ್ಲಿ ಕಾನೂನು ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ.

ಕರಡು ಮಸೂದೆಯ ಏಕೆ ಭಿನ್ನವಾಗಿದೆ, ಇದರ ಮಹತ್ವವವೇನು, ಕಾಯಿದೆ ರೂಪುಗೊಂಡ ಹಿನ್ನೆಲೆಯೇನು? ಶಿಕ್ಷೆಯ ಪ್ರಮಾಣ ಎಷ್ಟು ಇತ್ಯಾದಿ ಅಂಶಗಳು ಇಲ್ಲಿವೆ.

ಹಿನ್ನೆಲೆ

ಕೆಲ ತಿಂಗಳುಗಳ ಹಿಂದೆ ವಕೀಲರ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ, ದೆಹಲಿ, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ನಡೆದ ಹಲ್ಲೆ, ದೌರ್ಜನ್ಯ ಹಾಗೂ ಕೊಲೆ ಹಿನ್ನೆಲೆಯಲ್ಲಿ ವಕೀಲರ ರಕ್ಷಣಾ ಕಾಯಿದೆ ರೂಪುಗೊಳ್ಳಬೇಕು ಎಂಬ ಬಲವಾದ ಕೂಗು ನ್ಯಾಯವಾದಿ ಸಮುದಾಯದಲ್ಲಿ ಎದ್ದಿತ್ತು. ವಿವಿಧ ವಕೀಲ ಸಂಘಟನೆಗಳು ಈ ಕುರಿತು ಗಮನ ಸೆಳೆದಿದ್ದವು. ಅದರಂತೆ ರಾಜ್ಯದಲ್ಲಿಯೂ ವಕೀಲರ ರಕ್ಷಣಾ ಕಾಯಿದೆ ರೂಪುಗೊಳ್ಳಬೇಕೆಂಬ ಕೂಗು ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಕರಡು ಮಸೂದೆ ರಚನೆಗೆ ಬೆಂಗಳೂರು ವಕೀಲರ ಸಂಘ ಕೂಡ ಸಿದ್ಧತೆ ನಡೆಸಿತ್ತು.

ಉದ್ದೇಶಗಳು

  • ಅಪರಾಧ ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕುರಿತಂತೆ ಕ್ಯೂಬಾದಲ್ಲಿ ನಡೆದಿದ್ದ ಎಂಟನೇ ವಿಶ್ವಸಂಸ್ಥೆ ಸಮಾವೇಶದಲ್ಲಿ ಭಾರತ ಕೂಡ ಪಾಲ್ಗೊಂಡಿತ್ತು. ಆಗ ವಕೀಲರು ತಮ್ಮ ವೃತ್ತಿಪರ ಸೇವೆಗಳು ಮತ್ತು ಕಾರ್ಯಗಳನ್ನು ಯಾವುದೇ ಬೆದರಿಕೆ, ಅಡೆತಡೆ, ಕಿರುಕುಳ ಅಥವಾ ಅನುಚಿತ ಹಸ್ತಕ್ಷೇಪವಿಲ್ಲದೆ ನಿರ್ವಹಿಸುವ ಕುರಿತಂತೆ ಭರವಸೆ ನೀಡಿದ್ದಂತೆ ಸರ್ಕಾರ ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು.

  • ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ 35ನೇ ಅಧಿವೇಶನ ಕೂಡ ಸರ್ಕಾರಗಳು ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ನಿರ್ಣಯ ಕೈಗೊಂಡಿತ್ತು.

  • ವಕೀಲರ ಮೇಲೆ ಇತ್ತೀಚೆಗೆ ನಡೆದ ದಾಳಿಗಳು ವಕೀಲ ಸಮುದಾಯದಲ್ಲಿ ಅಶಾಂತಿ ಮತ್ತು ಭಯ ಉಂಟು ಮಾಡುತ್ತಿವೆ ಮಾತ್ರವಲ್ಲ ವಂಚನೆಗೊಳಗಾದ ಸಾರ್ವಜನಿಕರು ತಮ್ಮ ವಕೀಲರನ್ನು ಆಯ್ಕೆ ಮಾಡುವುದನ್ನು ಕೂಡ ಇದು ತಡೆಯುತ್ತದೆ. ಅಪರಾಧಗಳನ್ನು ಪತ್ತೆ ಹಚ್ಚುವಾಗಲೂ ವಕೀಲರಿಗೆ ತೊಂದರೆಗಳಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕೂಡ ಕರಡು ಮಸೂದೆ ಅಗತ್ಯವಾಗಿದೆ ಎಂದು ಕರಡು ಮಸೂದೆ ಸಿದ್ಧಪಡಿಸಿರುವ ಸಮಿತಿ ತಿಳಿಸಿದೆ.

ಕರಡು ಮಸೂದೆಯ ಪ್ರಮುಖಾಂಶಗಳು

  • ವಕೀಲರಲ್ಲದವರು ವಕೀಲರ ವಿರುದ್ಧ ಯಾವುದೇ ಹಿಂಸೆ ನಡೆಸಿದರೆ ಅಥವಾ ಬೆಂಬಲಿಸಿದರೆ ಅವರಿಗೆ ಒಂದು ವರ್ಷದವರೆಗೆ ಸಜೆ ಅಥವಾ ರೂ 1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು.

  • ಈ ಕಾಯಿದೆಯಡಿ ಈಗಾಗಲೇ ಎರಡನೇ ಬಾರಿ ಅಥವಾ ಪುನರಾವರ್ತಿತ ಅಪರಾಧ ಎಸಗಿದವರಿಗೆ ಆರು ತಿಂಗಳಿಗಿಂತ ಕಡಿಮೆ ಇಲ್ಲದಂತೆ ಎರಡು ವರ್ಷಗಳವರೆಗೆ ಸೆರೆವಾಸ ಹಾಗೂ ರೂ 10 ಲಕ್ಷದ ವರೆಗೆ ದಂಡ ವಿಧಿಸಬಹುದು.

  • ವಕೀಲರ ಆಸ್ತಿಗೆ ನಷ್ಟ ಉಂಟಾಗಿದ್ದರೆ ದೌರ್ಜನ್ಯ ಎಸಗಿದ ವ್ಯಕ್ತಿಯಿಂದಲೇ ಪರಿಹಾರ ಕೊಡಿಸುವುದು.

  • ಈ ಕಾಯಿದೆ ಮತ್ತು ಇತರೆ ಯಾವುದೇ ದಂಡ ವಿಧಿಸುವಿಕೆಗೆ ಸಂಬಂಧಿಸಿದಂತೆ ಡಿವೈಎಸ್‌ಪಿ ಹುದ್ದೆಗಿಂತ ಕಡಿಮೆ ಇಲ್ಲದ ಪೊಲೀಸ್‌ ಅಧಿಕಾರಿ ತನಿಖೆ ನಡೆಸಬೇಕು.

  • ಎಫ್‌ಐಆರ್‌ ದಾಖಲಿಸಿದ ದಿನದಿಂದ 90 ದಿನದ ಒಳಗಾಗಿ ಈ ಕಾಯಿದೆಯಡಿಯ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಬೇಕು.

  • ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಶ್ರೇಣಿಗಿಂತ ಕಡಿಮೆ ಇಲ್ಲದಂತೆ, ವಿಚಾರಣೆ ನಡೆಸಬೇಕು.

  • ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ನಿರಂತರವಾಗಿ ಪ್ರತಿನಿತ್ಯ ವಿಚಾರಣೆ ನಡೆಸಿ ಆರು ತಿಂಗಳಲ್ಲಿ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಬೇಕು.

  • ವಕೀಲರ ಅಕ್ರಮ ಬಂಧನ ಮತ್ತು ದುರುದ್ದೇಶಪೂರ್ವಕ ವಿಚಾರಣೆಯನ್ನು ತಡೆಯಲು ಮಸೂದೆಯಲ್ಲಿ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ.

ಕರಡು ಮಸೂದೆಯ ಪೂರ್ಣ ವಿವರಗಳನ್ನು ಇಲ್ಲಿ ಓದಿ:

Attachment
PDF
Advocates Protection Bill 2021 (1).pdf
Preview
Kannada Bar & Bench
kannada.barandbench.com