ಇಸ್ಲಾಂ ಅಡಿ ಹಿಜಾಬ್ ಧಾರಣೆಯು ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ವಿಶೇಷ ಮನವಿ ಸಲ್ಲಿಸಲಾಗಿದೆ.
“ಅಭಿವ್ಯಕ್ತಿ ವ್ಯಾಪ್ತಿಯ ಅಡಿ ಹಿಜಾಬ್ ಧಾರಣೆ ಹಕ್ಕು ಬರುತ್ತದೆ ಎಂಬುದನ್ನು ಪರಿಗಣಿಸುವಲ್ಲಿ ಕರ್ನಾಟಕ ಹೈಕೋರ್ಟ್ ವಿಫಲವಾಗಿದೆ. ಹಿಜಾಬ್ ಧಾರಣೆಗೆ ಸಂವಿಧಾನದ 19(1)(ಎ) ವಿಧಿ ಅಡಿ ರಕ್ಷಣೆ ಇದೆ” ಎಂದು ವಕೀಲ ಅನಸ್ ತನ್ವೀರ್ ಎಂಬವರ ಮೂಲಕ ಕರ್ನಾಟಕದ ವಿದ್ಯಾರ್ಥಿನಿ ನಿಬಾ ನಾಜ್ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಖಾಸಗಿ ಹಕ್ಕಿನ ವ್ಯಾಪ್ತಿಗೆ ಹಿಜಾಬ್ ಧಾರಣೆ ಹಕ್ಕು ಬರುತ್ತದೆ ಎಂಬದನ್ನು ಪರಿಗಣಿಸುವಲ್ಲಿಯೂ ಕರ್ನಾಟಕ ಹೈಕೋರ್ಟ್ ಎಡವಿದೆ ಎಂದು ಹೇಳಲಾಗಿದೆ.
ಕರ್ನಾಟಕ ಶಿಕ್ಷಣ ಕಾಯಿದೆ 1983ರ ಮತ್ತು ಅದರ ಅಡಿ ರೂಪಿಸಲಾಗಿರುವ ನಿಯಮಗಳ ಅಡಿ ಕಡ್ಡಾಯವಾಗಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು ಎಂಬ ನಿಯಮವಿಲ್ಲ. “ಶಿಕ್ಷಣ ಕಾಯಿದೆಯು ವಿದ್ಯಾರ್ಥಿಗಳಿಗೆ ಬದಲಾಗಿ ಸಂಸ್ಥೆಗಳಲ್ಲಿ ಸುಧಾರಣೆ ತರುವ ಉದ್ದೇಶ ಹೊಂದಿದೆ. ಕಾಯಿದೆ ಸೆಕ್ಷನ್ 3 ಮತ್ತು 7ರಲ್ಲಿ ಶಿಕ್ಷಣ, ಪಠ್ಯಕ್ರಮ, ಭಾಷಾ ಮಾಧ್ಯಮ ಇತ್ಯಾದಿ ಸುಧಾರಣೆಗೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಕಲ್ಪಿಸಲಾಗಿದೆ. ಅದಾಗ್ಯೂ, ಈ ಯಾವುದೇ ನಿಬಂಧನೆಗಳು ವಿದ್ಯಾರ್ಥಿಗಳಿಗೆ ಸಮವಸ್ತ್ರ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿಲ್ಲ” ಎಂದು ಮನವಿಯಲ್ಲಿ ಹೇಳಲಾಗಿದೆ.
ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ರಚಿಸಲು ಕಾಯಿದೆಯ ನಿಯಮದ ಅಡಿ ಅವಕಾಶ ಕಲ್ಪಿಸಲಾಗಿಲ್ಲ. ಒಂದೊಮ್ಮೆ ಸಿಡಿಸಿ ರಚಿಸಿದರೂ ಅದಕ್ಕೆ ಸಮವಸ್ತ್ರ ಸೂಚಿಸುವ ಅಥವಾ ಶೈಕ್ಷಣಿಕ ಸಂಸ್ಥೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ ಎಂದು ಮನವಿಯಲ್ಲಿ ತಕರಾರು ಎತ್ತಲಾಗಿದೆ.