ಹಿಜಾಬ್‌ ತೀರ್ಪು: ಸಿಎಫ್‌ಐ ಅಧ್ಯಕ್ಷ ಅತಾವುಲ್ಲಾ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಹೈಕೋರ್ಟ್‌ಗೆ ಮನವಿ

ನ್ಯಾಯಾಲಯದ ತೀರ್ಪಿನ ವಿರುದ್ಧ ಮಾತನಾಡುತ್ತಿರುವ ಇವರು ಯುವಜನರ ಮನಸ್ಸುಗಳನ್ನು ಕೆಡಿಸುತ್ತಿದ್ದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ಮಾಡುತ್ತಿರುವ ಹಲ್ಲೆ ಎಂದು ಮನವಿಯಲ್ಲಿ ಆಪಾದನೆ.
Karnataka High Court, Hijab

Karnataka High Court, Hijab

ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೂರ್ಣಪೀಠದ ತೀರ್ಪನ್ನು ಅಸಾಂವಿಧಾನಿಕ ಎಂದಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಅತ್ತಾವುಲ್ಲಾ ಪುಂಜಾಲಕಟ್ಟೆ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬೇಕು ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಭಾರದ್ವಾಜ್ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಗುರುವಾರ ಲಿಖಿತ ದೂರು ಸಲ್ಲಿಸಿರುವ ಗಿರೀಶ್‌ ಭಾರದ್ವಾಜ್, ಹಿಜಾಬ್‌ ನಿಷೇಧ ಎತ್ತಿಹಿಡಿದಿರುವ ಹೈಕೋರ್ಟ್‌ ತೀರ್ಪು ಸಂವಿಧಾನಬಾಹಿರವಾಗಿದೆ ಎಂದು ಮಾಧ್ಯಮಗಳ ಮುಂದೆ ಸಿಎಫ್‌ಐ ಅಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ಟೀಕೆ ಮಾಡಿದ್ದಾರೆ. ಈ ಪ್ರಕರಣದ ಆರು ಜನ ವೈಯಕ್ತಿಕ ಅರ್ಜಿದಾರರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಅಲಿಯಾ ಅಸಾದಿ, ನಮ್ಮ ವಿರುದ್ಧ ಸರ್ಕಾರ ತನ್ನ ನಿಯಂತ್ರಣದ ಮೂಲಕ ಹೈಕೋರ್ಟ್ ಇಂತಹ ತೀರ್ಪು ನೀಡುವಂತೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಸಮಾಜದಲ್ಲಿ ಅರಾಜಕತೆ ಹರಡಲು ಮುಂದಾದಂತಾಗಿದೆ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಕಾನೂನಿನ ಮೇಲೆ ಮಾಡುತ್ತಿರುವ ಹಲ್ಲೆ ಎಂದು ಆಪಾದಿಸಿದ್ದಾರೆ.

ಇವರೆಲ್ಲಾ ಈ ರೀತಿ ನ್ಯಾಯಾಲಯದ ತೀರ್ಪಿನ ವಿರುದ್ಧ ಮಾತನಾಡುತ್ತಾ ಯುವಜನರ ಮನಸ್ಸುಗಳನ್ನು ಕೆಡಿಸುತ್ತಿದ್ದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇವರುಗಳ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com