ಬಳೆ, ಶಿಲುಬೆಗೆ ನಿಷೇಧವಿಲ್ಲ; ಮುಸ್ಲಿಮ್‌ ವಿದ್ಯಾರ್ಥಿನಿಯರನ್ನೇ ಏಕೆ ಗುರಿಯಾಗಿಸಲಾಗಿದೆ: ಪ್ರೊ. ರವಿವರ್ಮ ಕುಮಾರ್‌

ಒಬ್ಬ ಶಾಸಕ ಅವರು ಯಾರೇ ಆಗಿರಲಿ ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ. ವಿದ್ಯಾರ್ಥಿಗಳ ಕಲ್ಯಾಣವನ್ನು ನೀವು ರಾಜಕೀಯ ಪಕ್ಷ ಅಥವಾ ರಾಜಕೀಯ ಸಿದ್ಧಾಂತಕ್ಕೆ ಒಪ್ಪಿಸಬಹುದೇ? ಎಂದ ಪ್ರೊ. ಕುಮಾರ್‌
Hijab, Karnataka High Court

Hijab, Karnataka High Court

ರಾಜ್ಯದ ಕಾಲೇಜುಗಳು ಸೂಚಿಸಿರುವ ಸಮವಸ್ತ್ರ ನಿಯಮ ಪಾಲಿಸದಿರುವುದಕ್ಕೆ ಮುಸ್ಲಿಮ್ ವಿದ್ಯಾರ್ಥಿನಿಯರನ್ನೇ ಏಕೆ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಪ್ರಶ್ನಿಸಿದರು.

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಬುಧವಾರವ ಸಹ ಮುಂದುವರೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಪ್ರೊ. ರವಿವರ್ಮ ಕುಮಾರ್‌ ಅವರು, "ಇತರೆ ಧರ್ಮಗಳ ಧಾರ್ಮಿಕ ಸಂಕೇತಗಳಿಗೆ ನಿರ್ಬಂಧ ವಿಧಿಸದಿರುವಾಗ ಮುಸ್ಲಿಮ್‌ ಹೆಣ್ಣು ಮಕ್ಕಳನ್ನು ಮಾತ್ರ ಗುರಿಯಾಗಿಸಲಾಗಿದೆ. ನೂರಾರು ಧಾರ್ಮಿಕ ಸಂಕೇತಗಳಿರುವಾಗ ಸರ್ಕಾರವು ಹಿಜಾಬ್‌ ಅನ್ನೇ ಏಕೆ ಆಯ್ಕೆ ಮಾಡಿಕೊಂಡಿದೆ. ಬಳೆಗಳನ್ನೂ ಧರಿಸಲಾಗುತ್ತದೆ. ಬಡ ಮುಸ್ಲಿಮ್‌ ವಿದ್ಯಾರ್ಥಿಯರನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ” ಎಂದರು.

ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುವುದನ್ನು ನಿಷೇಧಿಸುವ ಸಂವಿಧಾನದ 15ನೇ ವಿಧಿಯನ್ನು ಉಲ್ಲೇಖಿಸಿದ ಕುಮಾರ್‌ ಅವರು “ಗೂಂಗಟ್‌ ಧರಿಸಲು ಅನುಮತಿ ಇದೆ, ಬಳೆ ಧರಿಸಲು ಅನುಮತಿ ಇದೆ. ಕ್ರಿಶ್ಚಿಯನ್ನರ ಶಿಲುಬೆಗೇಕೆ ನಿಷೇಧವಿಲ್ಲ? ಸಿಖ್ಖರ ಪಗಡಿಗೇಕೆ ನಿಷೇಧವಿಲ್ಲ?” ಎಂದು ಸರ್ಕಾರದ ನಡೆಯ ಬಗ್ಗೆ ಪೀಠದ ಮುಂದೆ ಪ್ರಶ್ನಿಸಿದರು.

ಕರ್ನಾಟಕ ಶಿಕ್ಷಣ ನಿಯಮಗಳು 1995ರಲ್ಲಿನ ನಿಯಮ 11 ಅನ್ನು ನೋಡಿ. ಈ ನಿಯಮದ ಪ್ರಕಾರ ಶಿಕ್ಷಣ ಸಂಸ್ಥೆ ಸಮವಸ್ತ್ರ ಬದಲಿಸಬೇಕಾದರೆ ಆ ಸಂಸ್ಥೆಯು ಒಂದು ವರ್ಷ ಮುಂಚಿತವಾಗಿ ಪೋಷಕರಿಗೆ ನೋಟಿಸ್‌ ನೀಡಬೇಕು. ಯಾವುದೇ ಪ್ರಾಂಶುಪಾಲರು ಸಮವಸ್ತ್ರ ಅನುಮೋದಿಸಬಾರದು ಮತ್ತು ಪ್ರಾಂಶುಪಾಲರು ಸಮವಸ್ತ್ರವನ್ನು ಒತ್ತಾಯಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳಬಹುದು ಎಂದು ಸ್ವತಃ ಇಲಾಖೆಯೇ ಹೇಳಿದೆ. “ಕಾಯಿದೆ ಅಥವಾ ನಿಯಮಗಳ ಅಡಿ ಹಿಜಾಬ್‌ ಧರಿಸುವುದಕ್ಕೆ ನಿಷೇಧ ವಿಧಿಸಲಾಗಿಲ್ಲ” ಎಂದರು.

ಇದಕ್ಕೆ ನ್ಯಾ. ದೀಕ್ಷಿತ್‌ ಅವರು “ಕಾಯಿದೆಯಲ್ಲಿ ಅವುಗಳ ಬಗ್ಗೆ ಉಲ್ಲೇಖಿಸಿಲ್ಲ ಎಂದ ಮಾತ್ರಕ್ಕೆ ಅದಕ್ಕೆ ಅನುಮತಿಸಬೇಕು ಎಂದು ಅರ್ಥವಲ್ಲ. ಹಿಜಾಬ್‌ಗೆ ಅವಕಾಶ ನೀಡಬೇಕು ಅಥವಾ ನೀಡಬಾರದು ಎಂಬುದರ ಬಗ್ಗೆ ಅಲ್ಲಿ ಉಲ್ಲೇಖಿಸಿಲ್ಲ ಎಂಬುದು ಸತ್ಯ. ಆದರೆ, ಆ ಕುರಿತು ಸ್ವತಂತ್ರವಾಗಿ ವಾದಿಸಿಬೇಕು” ಎಂದರು.

ಇದಕ್ಕೆ ಪ್ರೊ. ಕುಮಾರ್‌ ಅವರು “ಹಿಜಾಬ್‌ ನಿಷೇಧಿಸಿಲ್ಲ ಎಂದಷ್ಟೇ ನಾನು ಹೇಳುತ್ತಿದ್ದೇನೆ. ಹೀಗಾಗಿ, ಕಾನೂನಿನ ಯಾವ ನಿಯಮದಡಿ ನನ್ನನ್ನು ತರಗತಿಯಿಂದ ಹೊರಗಿಡಲಾಗಿದೆ? ಯಾವ ನಿಯಮದಡಿ? ಇದಕ್ಕೆ ಅನುಮತಿಸಿದವರು ಯಾರು?” ಎಂದರು.

ಬಳಿಕ ಪ್ರೊ. ಕುಮಾರ್‌ ಅವರು “ವಿದ್ಯಾರ್ಥಿಗಳ ಕಲ್ಯಾಣ ಅಥವಾ ಶಿಸ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ರಚಿಸಲಾಗಿಲ್ಲ. ಇದು ಶೈಕ್ಷಣಿಕ ಗುಣಮಟ್ಟಕ್ಕೆ ಮಾತ್ರ ಸೀಮಿತವಾಗಿದೆ” ಎಂದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು “ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಕಾಲೇಜುಗಳು ಸಮವಸ್ತ್ರ ಸೂಚಿಸಬಾರದೇ? ಏಕರೂಪತೆ, ಶಿಸ್ತು ಕಾಪಾಡಿಕೊಳ್ಳಲು ಸಮವಸ್ತ್ರ ಸೂಚಿಸಬಾರದೇ? ಇದು ಶೈಕ್ಷಣಿಕ ಮಾನದಂಡಗಳ ಭಾಗವಾಗಿರಬಹುದು” ಎಂದರು.

ಅದಕ್ಕೆ ಪ್ರೊ. ಕುಮಾರ್‌ ಅವರು “ಇದು ಶೈಕ್ಷಣಿಕ ಮಾನದಂಡಕ್ಕೆ ಸಂಬಂಧಿಸಿಲ್ಲ. ಶೈಕ್ಷಣಿಕ ಗುಣಮಟ್ಟವನ್ನು ಶಿಕ್ಷಕರು-ವಿದ್ಯಾರ್ಥಿಗಳ ಅನುಪಾತ, ಪಠ್ಯಕ್ರಮ, ತರಗತಿ ನಡೆಸುವ ವಿಧಾನ ಇತ್ಯಾದಿ ಅಂಶಗಳು ನಿರ್ಧರಿಸುತ್ತವೆ. ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ಅಧಿಕಾರ ಶಕ್ತಿಯನ್ನು ವಿಧಿಸುವುದನ್ನು ಯಾವುದೇ ದಿಕ್ಕಿನಿಂದ ನೋಡಿದರೂ ಊಹಿಸುವುದಕ್ಕೆ ಸಾಧ್ಯವಿಲ್ಲ” ಎಂದರು.

ಆಗ ಮಧ್ಯಪ್ರವೇಶಿಸಿದ ನ್ಯಾ. ದೀಕ್ಷಿತ್‌ ಅವರು “ಈ ಪೊಲೀಸ್‌ ಅಧಿಕಾರ ಎಂದರೇನು. ಶೈಕ್ಷಣಿಕ ಸಂಸ್ಥೆಯಲ್ಲಿ ಸಮವಸ್ತ್ರ ಸೂಚಿಸುವುದನ್ನು ಪೊಲೀಸ್‌ ಅಧಿಕಾರ ಎನ್ನಲಾಗದು. ಇದು ಪಾಲನೆಯ ಅಧಿಕಾರ. ನೀವು ಹೇಳುತ್ತಿರುವುದಕ್ಕೆ ನ್ಯಾಯಾಂಗದ ಅಭಿಪ್ರಾಯವೂ ವಿರುದ್ಧವಾಗಿದೆ” ಎಂದರು.

ಆಗ ಪ್ರೊ. ಕುಮಾರ್‌ ಅವರು “ಕಾಲೇಜು ಅಭಿವೃದ್ಧಿ ಸಮಿತಿಗೆ (ಸಿಡಿಸಿ) ಸಮವಸ್ತ್ರ ಸೂಚಿಸುವ ಅಧಿಕಾರವಿಲ್ಲ ಎಂಬ ವಿಚಾರವನ್ನು ನಾನು ಹೇಳಲು ಪ್ರಯತ್ನಿಸುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಸಿಡಿಸಿಯ ನೇತೃತ್ವವನ್ನು ಶಾಸಕರು ವಹಿಸಿರುವುದನ್ನು ಉಲ್ಲೇಖಿಸಿದ ಪ್ರೊ. ಕುಮಾರ್‌ ಅವರು “ಶಾಸಕರಿಗೆ ಆಡಳಿತಾತ್ಮಕ ಅಧಿಕಾರ ನೀಡುವುದು ಅಪಾಯಕಾರಿ (ಡೆತ್‌ಬ್ಲೊ) ನಿರ್ಧಾರ. ಒಬ್ಬ ಶಾಸಕ, ಅವರು ಯಾರೇ ಆಗಿರಲಿ, ಅವರು ಒಂದು ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ. ವಿದ್ಯಾರ್ಥಿಗಳ ಕಲ್ಯಾಣವನ್ನು ನೀವು ರಾಜಕೀಯ ಪಕ್ಷ ಅಥವಾ ರಾಜಕೀಯ ಸಿದ್ಧಾಂತಕ್ಕೆ ಒಪ್ಪಿಸಬಹುದೇ?” ಎಂದರು.

ಸರ್ಕಾರ ಆದೇಶ ಹೊರಡಿಸಿರುವುದನ್ನು ಉಲ್ಲೇಖಿಸಿದ ಪ್ರೊ. ಕುಮಾರ್‌ ಅವರು “ಇಲ್ಲಿ ಧರ್ಮದ ಕಾರಣದಿಂದಾದ ಪೂರ್ವಾಗ್ರಹ ತುಂಬಿದೆ. ಯಾವುದೇ ಸೂಚನೆ ನೀಡಲಾಗಿಲ್ಲ. ಕಾಯಿದೆಯ ಅಡಿಯಲ್ಲಿ ಯಾವುದೇ ಅಧಿಕಾರವನ್ನು ಹೊಂದಿರದ ವ್ಯಕ್ತಿಗಳಿಂದಾಗಿ ನಾವು (ವಿದ್ಯಾರ್ಥಿಗಳು) ತರಗತಿಯಿಂದ ಹೊರಗೆ ಕುಳಿತುಕೊಳ್ಳುವಂತೆ ಮಾಡಲಾಗಿದೆ” ಎಂದರು.

ನ್ಯಾ. ದೀಕ್ಷಿತ್‌ ಅವರು ಯಾವುದೇ ತೆರನಾದ ಸಮವಸ್ತ್ರ ಸೂಚಿಸಬಾರದು ಎಂಬುದು ನಿಮ್ಮ ಅಭಿಪ್ರಾಯವೇ ಎಂದಾಗ “ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ಗುರಿಯಾಗಿರಬೇಕು. ಬಹುತ್ವವನ್ನು ಸಂರಕ್ಷಿಸಬೇಕು… ಪಗಡಿ ಧರಿಸುವವರು ಸೇನೆಯಲ್ಲಿ ಇರಬಹುದಾದರೆ, ತನ್ನ ಧಾರ್ಮಿಕ ಚಿಹ್ನೆ ಧರಿಸಿರುವ ವಿದ್ಯಾರ್ಥಿನಿಗೆ ತರಗತಿಗಳಿಗೆ ಹಾಜರಾಗಲು ಏಕೆ ಅವಕಾಶ ನೀಡಬಾರದು? ಇದು ಕಠಿಣವಾದ ಕ್ರಮವಾಗಿದೆ” ಎಂದರು.

“ಮುಸ್ಲಿಂ ಹುಡುಗಿಯರು ತರಗತಿಗಳಲ್ಲಿ ಕನಿಷ್ಠ ಪ್ರಾತಿನಿಧ್ಯ ಹೊಂದಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಬೇಕು. ಈ ಆಧಾರದ ಮೇಲೆ ಅವರನ್ನು ತರಗತಿಯಿಂದ ಹೊರಗೆ ಹಾಕಿದರೆ ಅವರ ಭವಿಷ್ಯಕ್ಕೆ ಕತ್ತಲು ಕವಿಯಲಿದೆ” ಎಂದು ಹೇಳಿ ಪ್ರೊ. ಕುಮಾರ್‌ ತಮ್ಮ ವಾದ ಪೂರ್ಣಗೊಳಿಸಿದರು.

Also Read
ಸಾರ್ವಜನಿಕವಾಗಿ ಧಾರ್ಮಿಕ ಚಿಹ್ನೆ ಪ್ರದರ್ಶಿಸದಿರುವ ಟರ್ಕಿ ಮಾದರಿ ಜಾತ್ಯತೀತತೆ ನಮ್ಮದಲ್ಲ: ಹಿರಿಯ ವಕೀಲ ಕಾಮತ್‌

ಮುಂಬೈ ಮೂಲದ ಹಿರಿಯ ವಕೀಲ ಯೂಸಫ್‌ ಮುಚ್ಚಾಲ ಅವರು “ನ್ಯಾಯಸಮ್ಮತವಾಗಿ ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಬೇಕಿತ್ತು. ಇದು ನ್ಯಾಯಸಮ್ಮತವೇ? ನ್ಯಾಯಯುತವಾಗಿ ಅವರ ವಾದವನ್ನು ಮೊದಲು ಆಲಿಸಬೇಕಿತ್ತು” ಎಂದರು.

“ಸಂವಿಧಾನದ 25(1)ನೇ ವಿಧಿಯಡಿ ಪ್ರತಿಯೊಬ್ಬ ವ್ಯಕ್ತಿಗೂ ಆತ್ಮಸಾಕ್ಷಿಯ ಹಕ್ಕಿದೆ. ಹೀಗಾಗಿ, ವ್ಯಕ್ತಿಯೊಬ್ಬರು ಹೊಂದಿರುವ ನಂಬಿಕೆಯು ಅಗತ್ಯವಾದ ಧಾರ್ಮಿಕ ಆಚರಣೆಯ ಭಾಗವಾಗಿದೆಯೇ ಎಂಬ ಪ್ರಶ್ನೆಗೆ ಹೋಗುವುದು ಅನಿವಾರ್ಯವಲ್ಲ” ಎಂದು ವಾದಕ್ಕೆ ವಿರಾಮ ನೀಡಿದರು. ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com