ಸುಪ್ರೀಂಕೋರ್ಟ್ ಅಂಗಳ ತಲುಪಿದ ಹಿಜಾಬ್ ವಿವಾದ: ಹೈಕೋರ್ಟ್ ಮೊದಲು ನಿರ್ಧರಿಸಲಿ ಎಂದ ಸಿಜೆಐ ರಮಣ

"ಸಮಸ್ಯೆ ಏನೆಂದರೆ, ನಾವು ಈಗ ಪ್ರಕರಣವನ್ನು ಪಟ್ಟಿ ಮಾಡಿದರೆ ಹೈಕೋರ್ಟ್ ಅದನ್ನು ಎಂದಿಗೂ ಆಲಿಸುವುದಿಲ್ಲ, ಒಂದೆರಡು ದಿನ ಕಾಯಿರಿ" ಎಂದು ಸಿಜೆಐ ಎನ್‌ ವಿ ರಮಣ ಹೇಳಿದರು.
ಸುಪ್ರೀಂಕೋರ್ಟ್ ಅಂಗಳ ತಲುಪಿದ ಹಿಜಾಬ್ ವಿವಾದ: ಹೈಕೋರ್ಟ್ ಮೊದಲು ನಿರ್ಧರಿಸಲಿ ಎಂದ ಸಿಜೆಐ ರಮಣ

Hijab, Supreme Court

ದೇಶದಾದ್ಯಂತ ಪ್ರತಿಭಟನೆಗೆ ಕಾರಣವಾಗಿದ್ದ ಕರ್ನಾಟಕದ ಹಿಜಾಬ್‌ ನಿಷೇಧ ವಿವಾದ ಇದೀಗ ಸುಪ್ರೀಂಕೋರ್ಟ್‌ ಅಂಗಳ ತಲುಪಿದೆ.

ಕರ್ನಾಟಕದಲ್ಲಿ ನಡೆಯುತ್ತಿರುವುದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಪ್ರಕರಣವನ್ನು ತುರ್ತಾಗಿ ಆಲಿಸಲು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರನ್ನು ಕೋರಿದರು. “ಇದು (ಅರ್ಜಿ) ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದ್ದಾಗಿದೆ. ಇದು (ವಿವಾದ) ದೇಶದೆಲ್ಲೆಡೆ ಹರಡುತ್ತಿದೆ. ಈ ಮಧ್ಯೆ (ಶಾಲಾ ವಿದ್ಯಾರ್ಥಿಗಳಿಗೆ) ಪರೀಕ್ಷೆಗಳಿಗೆ ಇನ್ನು ಎರಡು ತಿಂಗಳಷ್ಟೇ ಇದೆ” ಎಂದರು.

Also Read
[ಹಿಜಾಬ್‌ ವಿವಾದ] ಮಂಗಳೂರು ವಿವಿ ರಿಜಿಸ್ಟ್ರಾರ್‌, ಭಂಡಾರ್ಕಾರ್ಸ್‌ ಕಾಲೇಜಿನ ಪ್ರಾಂಶುಪಾಲರಿಗೆ ನೋಟಿಸ್‌ ಜಾರಿ

ಆದರೆ ಸಿಜೆಐ ರಮಣ “ಕಾಯೋಣ ಮಿಸ್ಟರ್‌ ಸಿಬಲ್‌. ಹೈಕೋರ್ಟ್ ನಿರ್ಧರಿಸಲಿ. ನೀವು ವಿಷಯವನ್ನು ವರ್ಗಾಯಿಸಲು ಬಯಸುತ್ತೀರಾ?” ಎಂದು ಪ್ರಶ್ನಿಸಿದರು. ಆಗ “ಪ್ರಕರಣವನ್ನು ಪಟ್ಟಿ ಮಾಡಿ, ಆದರೆ ಸದ್ಯಕ್ಕೆ ಯಾವುದೇ ಆದೇಶ ನೀಡುವುದು ಬೇಡ” ಎಂದು ಸಿಬಲ್‌ ಸಲಹೆ ಇತ್ತರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, "ಸಮಸ್ಯೆ ಏನೆಂದರೆ, ನಾವು ಈಗ ಪ್ರಕರಣವನ್ನು ಪಟ್ಟಿ ಮಾಡಿದರೆ ಹೈಕೋರ್ಟ್ ಅದನ್ನು ಎಂದಿಗೂ ಆಲಿಸುವುದಿಲ್ಲ, ಒಂದೆರಡು ದಿನ ಕಾಯಿರಿ" ಎಂದರು.

Also Read
ಹಿಜಾಬ್‌ ನಿಷೇಧ ಪ್ರಕರಣದ ವಿಚಾರಣೆ: ಸಿಜೆ ಅವಸ್ಥಿ ನೇತೃತ್ವದಲ್ಲಿ ತ್ರಿಸದಸ್ಯ ಪೀಠ ರಚನೆ, ನಾಳೆ ಮಧ್ಯಾಹ್ನ ವಿಚಾರಣೆ

ಈ ಮಧ್ಯೆ ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವುದರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠ ಇಂದು ಕೈಗೆತ್ತಿಕೊಳ್ಳಲಿದೆ. ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದ ನ್ಯಾ. ದೀಕ್ಷಿತ್‌ ಅವರು ಬುಧವಾರ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು. ಮಂಗಳವಾರ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ ವಿದ್ಯಾರ್ಥಿ ಸಮುದಾಯ ಮತ್ತು ಸಾರ್ವಜನಿಕರು ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ಕೇಳಿತ್ತು.

ಇದೇ ವೇಳೆ ರಾಜ್ಯ ಸರ್ಕಾರ ನಿಷೇಧವನ್ನು ಸಮರ್ಥಿಸಿಕೊಂಡಿದ್ದು ಧಾರ್ಮಿಕ ನಂಬಿಕೆಗಳಿಗೆ ತಾನು ಅಡ್ಡಿಪಡಿಸುವುದಿಲ್ಲ ಮತ್ತು ಶಿಕ್ಷಣ ಸಂಸ್ಥೆಗಳು ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರತಿಪಾದಿಸುವ ಸ್ಥಳಗಳಲ್ಲ ಎಂದು ಹೇಳಿದೆ.

Related Stories

No stories found.
Kannada Bar & Bench
kannada.barandbench.com