[ಹಿಜಾಬ್‌ ಪ್ರಕರಣ] ವಿಸ್ತೃತ ಪೀಠದ ಮುಂದೆ ವಿಚಾರಣೆಗಿರಿಸಲು ಮುಖ್ಯ ನ್ಯಾಯಮೂರ್ತಿಯವರನ್ನು ಕೋರಿದ ನ್ಯಾ. ದೀಕ್ಷಿತ್‌

ಹಿಬಾಜ್‌ ನಿಷೇಧವನ್ನು ಪ್ರಶ್ನಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಯನ್ನು ವಿಸ್ತೃತ ಪೀಠದ ಮುಂದೆ ಇಡುವುದು ಅಗತ್ಯ ಎಂದು ಭಾವಿಸಿ ಪ್ರಕರಣವನ್ನು ನ್ಯಾ. ದೀಕ್ಷಿತ್‌ ಅವರು ಆದೇಶ ಮಾಡಿದ್ದಾರೆ.
Hijab and Karnataka HC

Hijab and Karnataka HC

Published on

ಹಿಜಾಬ್‌ ಧರಿಸಿ ಕಾಲೇಜಿಗೆ ಪ್ರವೇಶಿಸುವುದನ್ನು ನಿಷೇಧಿಸಿ ಕೆಲ ಕಾಲೇಜು ಅಡಳಿತ ಮಂಡಳಿ ಹೇರಿರುವ ನಿಷೇಧ ಹಾಗೂ ರಾಜ್ಯ ಸರ್ಕಾರ ಈ ಕುರಿತು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮುಸ್ಲಿಮ್‌ ಸಮುದಾಯದ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

ಉಡುಪಿ, ಕುಂದಾಪುರ ಕಾಲೇಜುಗಳ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಪ್ರತ್ಯೇಕ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಈ ಪ್ರಕರಣವನ್ನು ವಿಸ್ತೃತ ಪೀಠ ಪರಿಗಣಿಸುವ ಅಗತ್ಯವಿದೆ ಎಂದು ನನಗೆ ಅನ್ನಿಸುತ್ತಿದೆ. ನೆರೆಯ ಹೈಕೋರ್ಟ್‌ನ ತೀರ್ಪುಗಳಿಂದ ಹೊರಬಂದಿರುವ ವಿಚಾರಗಳನ್ನು ಪರಿಗಣಿಸಬೇಕಿದೆ” ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.

“ಈ ಎಲ್ಲಾ ವಿಚಾರಗಳು ಬಹುಮುಖ್ಯವಾದ ಸಾಂವಿಧಾನಿಕ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿವೆ. ವೈಯಕ್ತಿಕ ಕಾನೂನಿನ ಕೆಲವು ವಿಚಾರಗಳ ಹಿನ್ನೆಲೆಯಲ್ಲಿ ಮೂರು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ಅರ್ಧ ಡಜನ್‌ಗೂ ಹೆಚ್ಚು ತೀರ್ಪುಗಳನ್ನೂ ಉಲ್ಲೇಖಿಸಲಾಗಿದೆ. ನಿನ್ನೆ ಪಕ್ಷಕಾರರು ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ಕಟತೆಯಿಂದ ವಾದಿಸಿದ್ದು, ಇದರಿಂದ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳಿಗೆ ಅನುಕೂಲವಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಪ್ರಶ್ನೆಗಳ ಪ್ರಾಮುಖ್ಯತೆಯ ಚರ್ಚೆಯ ಹಿನ್ನೆಲೆಯಲ್ಲಿ ಸದರಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇರಿಸಲಾಗುವುದು ಅವರು ಈ ಪ್ರಕರಣವನ್ನು ನಿರ್ಧರಿಸಲು ವಿಸ್ತೃತ ಪೀಠದ ರಚನೆಯ ಅಗತ್ಯತೆಯನ್ನು ತೀರ್ಮಾನಿಸಲಿದ್ದಾರೆ” ಎಂದು ನ್ಯಾ. ದೀಕ್ಷಿತ್‌ ಆದೇಶದಲ್ಲಿ ಹೇಳಿದ್ದಾರೆ.

ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದರ ಜೊತೆಗೆ ವಿದ್ಯಾರ್ಥಿಗಳ ದೃಷ್ಟಿಯಿಂದ ಮಧ್ಯಂತರ ಆದೇಶ ಮಾಡಬೇಕು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ್‌ ಹೆಗಡೆ ಕೋರಿದರು.

“ಶೈಕ್ಷಣಿಕ ವರ್ಷ ಪೂರ್ಣಗೊಳ್ಳಲು ಎರಡು ತಿಂಗಳು ಬಾಕಿ ಇದೆ. ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗಿಡಲಾಗದು. ಯಾವುದೇ ಹುಡುಗಿಯನ್ನು ಶಿಕ್ಷಣದಿಂದ ದೂರ ಇಡದಂತೆ ಮಾಡಲು ದಾರಿ ಕಂಡುಕೊಳ್ಳಬೇಕಿದೆ. ಶಾಂತಿ, ಸಾಂವಿಧಾನಿಕ ಭ್ರಾತೃತ್ವ ಕಾಲೇಜಿಗೆ ಮರಳುವಂತೆ ಮಾಡುವುದು ಬಹುಮುಖ್ಯವಾಗಿದೆ. ಎರಡು ತಿಂಗಳಿಗೆ ಆಕಾಶವೇನೂ ಕಳಚಿ ಬೀಳುವುದಿಲ್ಲ” ಎಂದು ಪೀಠದ ಗಮನಸೆಳೆದರು.

Also Read
ಹಿಜಾಬ್‌ ವಿವಾದ: ಶಾಂತಿ, ನೆಮ್ಮದಿ ಕಾಪಾಡಲು ವಿದ್ಯಾರ್ಥಿಗಳು, ಜನತೆಗೆ ಕರ್ನಾಟಕ ಹೈಕೋರ್ಟ್‌ ಮನವಿ

ಕಾಲೇಜು ಅಭಿವೃದ್ಧಿ ಸಮಿತಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಅವರು “ಮನವಿಯಲ್ಲಿ ಎತ್ತಲಾಗಿರುವ ವಿಚಾರಗಳು ಈ ಪೀಠಕ್ಕೆ ಒಳಪಡುತ್ತವೆ. ಹೀಗಾಗಿ, ಪಕ್ಷಕಾರರ ವಾದ ಆಲಿಸಿ ಮನವಿಗಳನ್ನು ನಿರ್ಧರಿಸಬೇಕು” ಎಂದು ನ್ಯಾ. ದೀಕ್ಷಿತ್‌ ಅವರಿಗೆ ಕೋರಿದರು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಮಧ್ಯಂತರ ಆದೇಶ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. “ಅರ್ಜಿದಾರರ ಪರವಾಗಿ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ವಾದ ಪೂರ್ಣಗೊಳಿಸಿದ್ದಾರೆ. ಈಗ ರಾಜ್ಯ ಸರ್ಕಾರವು ವಾದ ಮಂಡಿಸಬೇಕಿದೆ. ಆ ಬಳಿಕ ನ್ಯಾಯಾಲಯ ತನ್ನ ನಿರ್ಧಾರ ಹೊರಡಿಸಬಹುದು. ಅರ್ಜಿಗಳನ್ನು ತಪ್ಪಾಗಿ ಸಲ್ಲಿಸಲಾಗಿದೆ. ಅರ್ಜಿದಾರರು ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದಾರೆ. ಪ್ರತಿ ಶಿಕ್ಷಣ ಸಂಸ್ಥೆಗೆ ಸ್ವಾಯತ್ತತೆ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುವುದಿಲ್ಲ” ಎಂದರು.

Kannada Bar & Bench
kannada.barandbench.com