ಸಿಖ್ಖರ ಪೇಟಕ್ಕೆ ಹಿಜಾಬ್‌ ಹೋಲಿಸುವುದು ತಪ್ಪಾಗುತ್ತದೆ: ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಕಿವಿಮಾತು

ಸಿಖ್ಖರು ಧರಿಸುವ ಪೇಟಗಳು ಸಿಖ್ ಧರ್ಮದ ಐದು ಕಡ್ಡಾಯ ಅಂಶಗಳ ಭಾಗವಾಗಿದ್ದು ಅದನ್ನು ಸುಪ್ರೀಂ ಕೋರ್ಟ್ ಕೂಡ ಗುರುತಿಸಿದೆ ಎಂದು ತಿಳಿಸಿದ ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ಪೀಠ.
Supreme Court, Hijab and Turban
Supreme Court, Hijab and Turban

ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಸಿಖ್ಖರ ಪೇಟಕ್ಕೆ ಹಿಜಾಬ್‌ ಹೋಲಿಸುವುದು ತಪ್ಪಾಗುತ್ತದೆ ಎಂದು ಹೇಳಿದೆ.

ಸಿಖ್ಖರು ಧರಿಸುವ ಪೇಟಗಳು ಸಿಖ್ ಧರ್ಮದ ಐದು ಕಡ್ಡಾಯ ಅಂಶಗಳ ಭಾಗವಾಗಿದ್ದು ಅದನ್ನು ಸುಪ್ರೀಂ ಕೋರ್ಟ್ ಕೂಡ ಗುರುತಿಸಿದೆ ಎಂದು ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ಪೀಠ ತಿಳಿಸಿತು.

"ಈ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳ ಪೀಠ ಸಿಖ್ಖರಿಗೆ ಪೇಟ ಮತ್ತು ಕಿರ್ಪಾನ್ ಧರಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದೆ. ಅದಕ್ಕಾಗಿಯೇ ನಾವು ಸಿಖ್ಖರೊಂದಿಗೆ ಹೋಲಿಕೆ ಸರಿಯಾಗಿಲ್ಲ ಎಂದು ಹೇಳುತ್ತಿದ್ದೇವೆ. ಸಿಖ್ಖರ 5ಕೆ ಅಂಶಗಳನ್ನು ಕಡ್ಡಾಯ ಎಂದು ನಿರ್ಣಯಿಸಲಾಗಿದೆ" ಎಂಬುದಾಗಿ ನ್ಯಾ. ಗುಪ್ತಾ ಹೇಳಿದರು.

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲ ನಿಜಾಮ್ ಪಾಷಾ, ಮುಸ್ಲಿಂ ಮಹಿಳೆಯರಿಗೆ ಹಿಜಾಬ್‌ ಕೂಡ ಇದೇ ರೀತಿ ಇದೆ ಎಂದರು.

ಆಗ ನ್ಯಾ. ಗುಪ್ತಾ "ದಯವಿಟ್ಟುಸಿಖ್‌ ಧರ್ಮದೊಂದಿಗೆ ಹೋಲಿಕೆ ಮಾಡಬೇಡಿ. ಅದು ಸಂಪೂರ್ಣವಾಗಿ ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿದೆ" ಎಂದು ಹೇಳಿದರು. ಆದರೆ ಪಾಷಾ “ಅದೇ ರೀತಿ ಇಸ್ಲಾಂ ಕೂಡ 1400 ವರ್ಷಗಳಿಂದ ಇದ್ದು ಹಿಜಾಬ್ ಕೂಡ ಪ್ರಸ್ತುತ. ಹಿಜಾಬ್‌ ನಿಷೇಧ ಎತ್ತಿ ಹಿಡಿಯುವ ಕರ್ನಾಟಕ ಹೈಕೋರ್ಟ್‌ ತೀರ್ಪು ಧರ್ಮ ನಿಂದೆಯಾಗುತ್ತದೆ” ಎಂದು ವಿವರಿಸಿದರು. ಕುರಾನ್‌ನ ಸ್ತೋತ್ರಗಳು 1500 ವರ್ಷಗಳಿಗಿಂತಲೂ ಹಿಂದಿನದಾಗಿದ್ದು, ಧರ್ಮ ನಿಂದನೆಯ ವಿಚಾರದಲ್ಲಿ ಈಗ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಸಹ ಹೈಕೋರ್ಟ್‌ ಹೇಳಿರುವುದಾಗಿ ಅವರು ತಿಳಿಸಿದರು.

ಪ್ರಕರಣದ ವಿಚಾರಣೆ ಸೆಪ್ಟೆಂಬರ್ 12 ರಂದು ಮುಂದುವರೆಯಲಿದ್ದು ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಅಂದು ತಮ್ಮ ವಾದ ಮಂಡಿಸಲಿದ್ದಾರೆ.

Kannada Bar & Bench
kannada.barandbench.com