ಸಂಚಿನ ಬಳಿಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ತೆರಳಲಾರಂಭಿಸಿದರು: ಸುಪ್ರೀಂನಲ್ಲಿ ಎಸ್‌ಜಿ ವಾದ

ಪಿಎಫ್ಐ ಸಾಮಾಜಿಕ ಮಾಧ್ಯಮದಲ್ಲಿ ಆಂದೋಲನ ಆರಂಭಿಸುವ 2021ರವರೆಗೂ ಕರ್ನಾಟಕದಲ್ಲಿ ಕಾಲೇಜುಗಳು ಸೂಚಿಸಿದ ಸಮವಸ್ತ್ರವನ್ನು ಎಲ್ಲಾ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು ಎಂದು ಎಸ್‌ಜಿ ಪ್ರತಿಪಾದಿಸಿದ್ದಾರೆ.
Solicitor General Tushar Mehta, Hijab & Supreme Court
Solicitor General Tushar Mehta, Hijab & Supreme Court

ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿರುವ ಮುಸ್ಲಿಂ ವಿದ್ಯಾರ್ಥಿನಿಯರು 2021ರವರೆಗೂ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸುತ್ತಿರಲಿಲ್ಲ. ಆದರೆ ಯಾರದೋ ಸಲಹೆ ಮೇರೆಗೆ ಇದ್ದಕ್ಕಿದ್ದಂತೆ ಅವರು ಈ ಅಭ್ಯಾಸ ಆರಂಭಿಸಿದರು ಎಂದು ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು [ಫಾತಿಮಾ ಬುಶ್ರಾ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಾಮಾಜಿಕ ಮಾಧ್ಯಮದಲ್ಲಿ ಆಂದೋಲನ ಆರಂಭಿಸುವ 2021ರವರೆಗೂ ಕರ್ನಾಟಕದಲ್ಲಿ ಕಾಲೇಜುಗಳು ಸೂಚಿಸಿದ ಸಮವಸ್ತ್ರವನ್ನು ಎಲ್ಲಾ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು ಎಂದು ಎಸ್‌ಜಿ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠಕ್ಕೆ ತಿಳಿಸಿದರು.

ಯಾವುದೇ ವಿದ್ಯಾರ್ಥಿನಿ 2021ರವರೆಗೆ, ಹಿಜಾಬ್ ಧರಿಸುತ್ತಿರಲೂ ಇಲ್ಲ ಈ ಪ್ರಶ್ನೆ ಉದ್ಭವಿಸಲೂ ಇಲ್ಲ....ಹಿಜಾಬ್ ಧರಿಸಲು ಆರಂಭಿಸುವಂತೆ ನಿರಂತರ ಸಾಮಾಜಿಕ ಮಾಧ್ಯಮ ಸಂದೇಶಗಳು ಮೂಡತೊಡಗಿದವು. ಇದಕ್ಕೆ ದಾಖಲೆ ಇದೆ. ನಾನು ಅದರ ವಿವರಗಳನ್ನು ಸಲ್ಲಿಸಿದ್ದೇನೆ. ಇದು ಸ್ವಯಂಪ್ರೇರಿತವಲ್ಲ. ಇದೊಂದು ದೊಡ್ಡ ಪಿತೂರಿಯ ಭಾಗವಾಗಿತ್ತು. ಮಕ್ಕಳು ತಮಗೆ ನೀಡಲಾದ ಸಲಹೆಯಂತೆ ವರ್ತಿಸುತ್ತಿದ್ದರು ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.

ಆ ಮೂಲಕ ಕಾಲೇಜು ಕ್ಯಾಂಪಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಲು ಕರ್ನಾಟಕದ ಸರ್ಕಾರಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಪರಿಣಾಮಕಾರಿಯಾಗಿ ಅಧಿಕಾರ ನೀಡುವ ರಾಜ್ಯ ಸರ್ಕಾರದ ಆದೇಶವನ್ನು ಹಿಜಾಬ್‌ ವಿಚಾರಣೆಯ ಎಂಟನೇ ದಿನವಾದ ಮಂಗಳವಾರ ಅವರು ಸಮರ್ಥಿಸಿಕೊಂಡರು.

Also Read
[ಹಿಜಾಬ್ ಪ್ರಕರಣ] ಸಂವಿಧಾನ ಅರ್ಥೈಸಲು ಸಂವಿಧಾನ ರಚನಾ ಸಭೆಯ ಚರ್ಚೆ ಇಂದು ಎಷ್ಟು ಪ್ರಸ್ತುತ: ಸುಪ್ರೀಂ ಪ್ರಶ್ನೆ

ಎಸ್‌ಜಿ ವಾದದ ಪ್ರಮುಖಾಂಶಗಳು

  • ಸರ್ಕಾರ ಈಗ ನಡೆದುಕೊಂಡ ರೀತಿಯಲ್ಲಿ ನಡೆದುಕೊಳ್ಳದಿದ್ದರೆ, ಅದು ತನ್ನ ಸಾಂವಿಧಾನಿಕ ಕರ್ತವ್ಯಕ್ಕೆ ಲೋಪ ಎಸಗುತ್ತಿತ್ತು . ಸರ್ಕಾರ ಮಧ್ಯಪ್ರವೇಶಿಸದಿದ್ದರೆ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ಎದುರಾಗುತ್ತಿತ್ತು.

  • ಸರ್ಕಾರ ಅಲ್ಪಸಂಖ್ಯಾತರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂಬ ಆರೋಪ  ಕಪೋಲಕಲ್ಪಿತವಾಗಿದ್ದು ಕಾಲೇಜುಗಳಲ್ಲಿ ಕೇಸರಿ ಶಾಲುಗಳನ್ನು ಧರಿಸಲು ಕೂಡ ಅವಕಾಶ ನೀಡಿಲ್ಲ.

  • ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಉಂಟಾಗುತ್ತಿದ್ದುದರಿಂದ ಸರ್ಕಾರ ಆ ಸ್ಥಿತಿಯಲ್ಲಿ ಮಧ್ಯಪ್ರವೇಶಿಸಬೇಕಾಯಿತು. ವಿದ್ಯಾರ್ಥಿಗಳು ಹಿಜಾಬ್‌ನೊಂದಿಗೆ ಬರುತ್ತೇವೆ ಎಂದು ಕಾಲೇಜುಗಳ ಗೇಟ್‌ ಬಡಿಯುತ್ತಿದ್ದರು. ಬಳಿಕ ಬೇರೆಯವರು ಕೇಸರಿ ಶಾಲುಗಳೊಂದಿಗೆ ಬರಲಾರಂಭಿಸಿದರು.

  • ಸರ್ಕಾರಿ ಆದೇಶ ವಾಸ್ತವವಾಗಿ, ʼಧರ್ಮ-ನಿರಪೇಕ್ಷವಾಗಿದ್ದುʼ ಯಾವುದೇ ನಿರ್ದಿಷ್ಟ ಸಮುದಾಯ ನಿರ್ದಿಷ್ಟ ಉಡುಪು ಧರಿಸುವುದನ್ನು ತಡೆಯುವುದಿಲ್ಲ.

  • ಸುತ್ತೋಲೆಯು ಹಿಜಾಬ್ ಮಾತ್ರ ನಿಷೇಧಿಸುತ್ತದೆ ಎಂದು ವಾದಿಸುವುದು ಅಪಚಾರ. ಬೇರೆ ಸಮುದಾಯದವರು ಕೇಸರಿ ಶಾಲುಗಳೊಂದಿಗೆ ಬಂದಾಗ, ಅದನ್ನು ಸಹ ನಿಷೇಧಿಸಲಾಗಿದೆ. ಆದೇಶ ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿ ನಿರ್ದಿಷ್ಟ ಉಡುಪೊಂದನ್ನು ಧರಿಸದಂತೆ ತಡೆಯುವುದಿಲ್ಲ. ಬದಲಿಗೆ ಸಮವಸ್ತ್ರ ಏಕರೂಪವಾಗಿರಬೇಕು ಎಂದು ಹೇಳುತ್ತದೆ.

  • ಕುರಾನ್‌ ಹಿಜಾಬ್‌ಗೆ ಅನುಮತಿ ನೀಡಬಹುದು ಎನ್ನುತ್ತದೆಯೇ ಹೊರತು ಅದು ಅಗತ್ಯ ಧಾರ್ಮಿಕ ಆಚರಣೆ (ಇಆರ್‌ಪಿ) ಎನ್ನುವುದಿಲ್ಲ.

  • ಧರ್ಮದ ಸ್ಥಾಪನೆಯೊಂದಿಗೇ ಹಿಜಾಬ್‌ ಧರಿಸುವುದು ಆರಂಭವಾಯಿತು ಎನ್ನುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. ಹಿಜಾಬ್‌ ಧರಿಸುವ ಆಚರಣೆ ತುಂಬಾ ಬಲವಂತದಿಂದ ಕೂಡಿರಬೇಕು. ಶೇ 90ರಷ್ಟು ಮಂದಿ ಹಿಜಾಬ್‌ ಧರಿಸುತ್ತಾರೆ ಎಂದು ಪ್ರತಿವಾದಿಗಳು ವಾದಿಸಬಹುದು. ಆದೆ ಹಾಗೆ ಮಾಡದಿದ್ದರೆ ಬಹಿಷ್ಕಾರಕ್ಕೆ ಒಳಗಾಗಬೇಕಾಗುತ್ತದೆ.

  •  ಸಮವಸ್ತ್ರವನ್ನು ಯಾವುದೇ ಸೇರ್ಪಡೆ ಅಥವಾ ಪರ್ಯಾಯ ಉಡುಪಿಗೆ ಅವಕಾಶವಿಲ್ಲದೆ ಅದು ಇರುವಂತೆಯೇ ಸರಳವಾಗಿ ಧರಿಸಬೇಕು.

  • ಜಾತ್ಯತೀತ ಶಿಕ್ಷಣದಲ್ಲಿ ಉಡುಗೆಯೊಂದು ತನ್ನ ಧಾರ್ಮಿಕ ಅಸ್ಮಿತೆಯನ್ನು ಸಾರುವಂತಿಲ್ಲ. ನಾಳೆ ವಕೀಲರ ಪರಿಷತ್ತು ತಿಲಕ ನಿಷೇಧಿಸಿದರೆ, ಅದನ್ನು ಪಾಲಿಸಬೇಕಾಗುತ್ತದೆ. ನಾವು ಅದನ್ನು ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ತೋರಿಸದಿದ್ದರೆ ಅದು ಅಂತಹ ಆಚರಣೆ ಆಗಿರುವುದಿಲ್ಲ.

  • ಆದೇಶವನ್ನು ಹೊರಡಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂಬ ಅರ್ಜಿದಾರರ ವಾದ ಕೂಡ ಸೂಕ್ತವಲ್ಲ. ವಿದ್ಯಾರ್ಥಿಗಳು ಧರಿಸುವ ಉಡುಪುಗಳ ನಡುವೆ ಯಾವುದೇ ವ್ಯತ್ಯಾಸ ಬಾರದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ  ಶಾಲೆಗಳಿಗೆ ಸೂಚಿಸಿದೆ  ಇದು ಸಂಪೂರ್ಣವಾಗಿ ಶಾಸನಬದ್ಧ ಅಧಿಕಾರವಾಗಿದೆ.

ಮೆಹ್ತಾ ಅವರ ವಾದದ ಬಳಿಕ ತಮ್ಮ ವಾದ ಆರಂಭಿಸಿದ ಕರ್ನಾಟಕದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ ನಾವದಗಿ ಇಂದು (ಬುಧವಾರ) ಅದನ್ನು ಮುಂದುವರೆಸಿದ್ದಾರೆ.

Related Stories

No stories found.
Kannada Bar & Bench
kannada.barandbench.com