ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧ ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ತೀರ್ಪು ಇಸ್ಲಾಂ ಧರ್ಮವನ್ನು ಅನುಸರಿಸುವವರಿಗೆ ನೋವುಂಟುಮಾಡುತ್ತದೆ ಮತ್ತು ಅದು ತೀವ್ರ ಆಕ್ರಮಣಕಾರಿಯಾಗಿದೆ ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು [ಫಾತಿಮಾ ಬುಶ್ರಾ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ]
ಇದೇ ವೇಳೆ ಮತ್ತೊಬ್ಬ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ವಿದ್ಯಾರ್ಥಿನಿ ಶಾಲೆ ಪ್ರವೇಶಿಸಿದಾಕ್ಷಣ ತನ್ನ ಮೂಲಭೂತ ಹಕ್ಕನ್ನು ಬಿಟ್ಟುಕೊಡಲಾಗದು ಎಂದು ಪ್ರತಿಪಾದಿಸಿದರು.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠದೆದುರು ಗುರುವಾರ ಇಬ್ಬರೂ ನ್ಯಾಯವಾದಿಗಳು ಅರ್ಜಿದಾರರ ಅಹವಾಲುಗಳನ್ನು ತಿಳಿಸಿಕೊಟ್ಟರು. ಇವರಲ್ಲದೆ ಹಿರಿಯ ವಕೀಲರಾದ ಜಯ್ನಾ ಕೊಠಾರಿ, ಎ ಎಂ ದರ್, ಮಿನಾಕ್ಷಿ ಅರೋರಾ, ಶೋಯೆಬ್ ಆಲಂ ಕೂಡ ವಾದ ಮಂಡಿಸಿದರು.
ಹೆಣ್ಣುಮಕ್ಕಳನ್ನು ತಮ್ಮ ಧರ್ಮ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಇದು ಕೇವಲ ಧರ್ಮಾಧಾರಿತ ತಾರತಮ್ಯ ಮಾತ್ರವಲ್ಲ ಲಿಂಗಾಧಾರಿತ ಭೇದ ಕೂಡ ಎಂದು ಜಯ್ನಾ ಹೇಳಿದರು. ಹಿಜಾಬ್ ಕಡ್ಡಾಯವಲ್ಲ ಎಂಬ ಹೈಕೋರ್ಟ್ ತರ್ಕವನ್ನು ನಿರಾಕರಿಸುವ ಭಾಗವಾಗಿ ದರ್ ಅವರು ಕುರಾನ್ ಶ್ಲೋಕಗಳನ್ನು ಉಲ್ಲೇಖಿಸಿದರು. ಮೀನಾಕ್ಷಿ ಅರೋರಾ ವಾದ ಮಂಡಿಸಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಧರ್ಮಾಧಾರದಲ್ಲಿ ಅವರಿಗೆ ತಾರತಮ್ಯ ಉಂಟುಮಾಡುವುದನ್ನು ತಡೆಯುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಶಾಸನದ ವಿರುದ್ಧ ಆದೇಶ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದರು. ಮೂಲಭೂತ ಹಕ್ಕಿನ ಶರಣಾಗತಿ ಎಂದಿಗೂ ಸಾಧ್ಯವಿಲ್ಲ ಎಂದು ವಕೀಲ ಶೋಯೆಬ್ ಆಲಂ ವಾದ ಮಂಡಿಸಿದರು.
ಗೊನ್ಸಾಲ್ವೆಸ್ ಅವರ ವಾದದ ಪ್ರಮುಖಾಂಶಗಳು
ಹಿಜಾಬ್ ಮಹಿಳೆಯರ ವಿಮೋಚನೆಗೆ ಅಡ್ಡಿ ಉಂಟು ಮಾಡಿ ಮತ್ತು ವೈಜ್ಞಾನಿಕ ಮನೋಧರ್ಮವನ್ನು ಅಭಿವೃದ್ಧಿಪಡಿಸುತ್ತದೆ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪಿನ ಕೆಲ ಭಾಗ ಆಕ್ರಣಕಾರಿಯಾಗಿದೆ. ಇದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಕನಿಷ್ಠ ಮೂರು ತೀರ್ಪುಗಳಿಗೆ ವ್ಯತಿರಿಕ್ತವಾಗಿದೆ.
ತೀರ್ಪು ಬಹುಸಂಖ್ಯಾತರ ಪರವಾಗಿ ಇದೆ. ಇಲ್ಲಿ ಅಲ್ಪಸಂಖ್ಯಾತರ ದೃಷ್ಟಿಕೋನವನ್ನು ತಪ್ಪಾಗಿ ಗ್ರಹಿಸಲಾಗಿದೆ. ಇದು ಮೂಲಭೂತವಾಗಿ ಬಹುಸಂಖ್ಯಾತವಾದಿ ತೀರ್ಪು.
ಶಾಲೆಗಳನ್ನು ಅರ್ಹತೆಯ ಸಾರ್ವಜನಿಕ ಸ್ಥಳ ಎಂಬ ಹೈಕೋರ್ಟ್ ತೀರ್ಪು ಆಕ್ಷೇಪಾರ್ಹ. ನ್ಯಾಯಾಲಯವನ್ನೂ ಅರ್ಹತೆಯ ಸಾರ್ವಜನಿಕ ಸ್ಥಳ ಎಂದು ಕರೆದು ಹಿಜಾಬ್ ಧರಿಸುವ ವಕೀಲರನ್ನು ನಿರ್ಬಂಧಿಸಲಾಗುತ್ತದೆ. ಈ ಬಗ್ಗೆ ದೂರುಗಳು ಬಂದಿವೆ. ಇದು ಗುಂಬಾ ಅಪಾಯಕಾರಿ.
ಸಿಖ್ ಪೇಟವನ್ನು ಶಾಲೆಗಳಲ್ಲಿ ಅನುಮತಿಸಬಹುದಾದರೆ ಹಿಜಾಬ್ ಏಕೆ ಬೇಡ? ಇದರಲ್ಲಿ ವ್ಯತ್ಯಾಸ ಏನಿದೆ? ನೀವೆಂದೂ ಸಿಖ್ ಬಾಲಕನಿಗೆ ನಿನ್ನ ಪೇಟ ತೆಗೆ ಎಂದು ಹೇಳುವುದಿಲ್ಲ.
ಭಾರತದಲ್ಲಿನ ಮಕ್ಕಳಿಗೆ ಧರ್ಮಗಳ ಬಗ್ಗೆ ಕಲಿಯಲು ಶಾಲೆಗಳಲ್ಲಿನ ವೈವಿಧ್ಯತೆ ಮತ್ತು ಧಾರ್ಮಿಕ ಅಭಿವ್ಯಕ್ತಿ ಅತ್ಯುತ್ತಮ ಮಾರ್ಗ ಎಂದು ಪರಿಗಣಿಸಬೇಕು.
ಈಗಿನ ರೀತಿಯ ಪರಿಸ್ಥಿತಿ ಬಂದಾಗಿ ಇಸ್ಲಾಂ ಧರ್ಮದಲ್ಲಿ ಏನೋ ದೋಷ ಇದೆ ಎಂದು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ.
ಕಪಿಲ್ ಸಿಬಲ್ ವಾದ ಸರಣಿ
ವಿದ್ಯಾರ್ಥಿನಿ ಶಾಲೆ ಪ್ರವೇಶಿಸಿದಾಕ್ಷಣ ತನ್ನ ಮೂಲಭೂತ ಹಕ್ಕನ್ನು ಬಿಟ್ಟುಕೊಡಲಾಗದು.
ಹುಡುಗಿಯರು ತಮ್ಮ ಇಡೀ ಜೀವನದಲ್ಲಿ ಹಿಜಾಬ್ ಧರಿಸಿದ್ದಾಗ ಅದು ಅವರ ವ್ಯಕ್ತಿತ್ವ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗುತ್ತದೆ. ಅದನ್ನು ನಾಶಪಡಿಸಲಾಗದು. ನನ್ನ ಹಕ್ಕು ಕಾಲೇಜಿನ ಗೇಟಿನ ಬಳಿ ಕೊನೆಗೊಳ್ಳುತ್ತದೆಯೇ?
ಸಂವಿಧಾನದ 21 ನೇ ಪರಿಚ್ಛೇದದ ಭಾಗವಾಗಿರುವ ಖಾಸಗಿತನದ ಹಕ್ಕಿನ ಭಾಗವಾಗಿ ಉಡುಗೆ ಇದೆ.
ಕಾನೂನು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಅಥವಾ ಸಭ್ಯತೆಗೆ ವಿರುದ್ಧವಾಗದ ಹೊರತು ಅಭಿವ್ಯಕ್ತಿಯನ್ನು ನಿಷೇಧಿಸಲು ಸಾಧ್ಯವಿಲ್ಲ.
ಯಾವುದೇ ಮಗು ಶಾಲಾ ಸಮವಸ್ತ್ರವನ್ನು ನಿರಾಕರಿಸಿಲ್ಲ, ಆದರೆ ಸಮವಸ್ತ್ರದ ಜೊತೆಗೆ ತಮ್ಮ ಸಂಸ್ಕೃತಿಯ ಭಾಗವನ್ನು ಸೇರಿಸಲು ಬಯಸಿದೆ.
ಹೆಣ್ಣುಮಕ್ಕಳನ್ನು ತಮ್ಮ ಧರ್ಮ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ.