ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಹಿಜಾಬ್ ಪ್ರಕರಣ, ಕಪ್ಪನ್ ಜಾಮೀನು ಅರ್ಜಿ, ನವಲಖಾ ಮೇಲ್ಮನವಿಗಳ ವಿಚಾರಣೆ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯು ಯು ಲಲಿತ್ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಈ ಪ್ರಕರಣಗಳ ಪಟ್ಟಿ ಮೊದಲ ಬೆಳವಣಿಗೆಯಾಗಿದೆ.
Supreme Court of India
Supreme Court of India
Published on

ಎರಡು ಮಹತ್ವದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಆಗಸ್ಟ್ 29, ಸೋಮವಾರದಂದು ಆಲಿಸಲಿದೆ. ಹಿಜಾಬ್‌ ಧರಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳು ಮತ್ತು ಕೇರಳದ ಪತ್ರಕರ್ತ, ಯುಎಪಿಎ ಅಡಿ ಆರೋಪ ಎದುರಿಸುತ್ತಿರುವ ಸಿದ್ದಿಕ್ ಕಪ್ಪನ್ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಸಿದ್ದಿಕ್ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರಿರುವ ಪೀಠ ವಿಚಾರಣೆ ನಡೆಸಲಿದ್ದು, ಹಿಜಾಬ್ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿರುವ ಪೀಠ ಆಲಿಸಲಿದೆ.

ಅಲ್ಲದೆ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಗೌತಮ್‌ ನವಲಖಾ ಅವರನ್ನು ತಲೋಜಾ ಜೈಲಿನಿಂದ ವರ್ಗಾಯಿಸಿ ಗೃಹಬಂಧನದಲ್ಲಿ ಇರಿಸುವಂತೆ ಮಾಡಿದ ಮನವಿ ತಿರಸ್ಕರಿಸಿದ್ದ ಬಾಂಬೆ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯೂ ಸೋಮವಾರ ವಿಚಾರಣೆಗೆ ಬರಲಿದೆ. ಪ್ರಕರಣವನ್ನು ಸಿಜೆಐ ಯು ಯು ಲಲಿತ್ ಮತ್ತು ನ್ಯಾ. ಭಟ್ ಅವರಿರುವ ಪೀಠ ವಿಚಾರಣೆ ನಡೆಸಲಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಯು ಯು ಲಲಿತ್ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಈ ಪ್ರಕರಣಗಳ ಪಟ್ಟಿ ಮೊದಲ ಬೆಳವಣಿಗೆಯಾಗಿದೆ.

ಆಗಸ್ಟ್ 26ರಂದು ನಿವೃತ್ತ ಸಿಜೆಐ ಎನ್‌ ವಿ ರಮಣ ಅವರಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ, ನ್ಯಾ. ಲಲಿತ್ ಅವರು ಮೂರು ಪ್ರಮುಖ ವಿಚಾರಗಳಾದ ಪ್ರಕರಣಗಳ ಪಟ್ಟಿ ಮಾಡುವಿಕೆ, ತುರ್ತು ಪ್ರಕರಣಗಳ ಉಲ್ಲೇಖಕ್ಕಾಗಿ ವ್ಯವಸ್ಥೆ, ಸಂವಿಧಾನ ಪೀಠಗಳ ಸ್ಥಾಪನೆಗೆ ಸಿಜೆಐ ಆಗಿ ಆದ್ಯತೆ ನೀಡುವೆ ಎಂದು ಹೇಳಿದ್ದರು.

ಹಿಜಾಬ್ ಪ್ರಕರಣ: ಕಾಲೇಜು ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಿ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಇದೆ ಎಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್‌ ಮಾರ್ಚ್ 15ರಂದು ಎತ್ತಿ ಹಿಡಿದಿತ್ತು. ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅರ್ಜಿ ಸೇರಿದಂತೆ ಕನಿಷ್ಠ ಮೂರು ಮೇಲ್ಮನವಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿವೆ.

ಸಿದ್ದಿಕ್ ಕಪ್ಪನ್ ಜಾಮೀನು ಅರ್ಜಿ: ಹಾಥ್‌ರಸ್‌ ದಲಿತ ಬಾಲಕಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗೆಂದು ತೆರಳಿದ್ದ ಮಲಯಾಳಂ ಸುದ್ದಿತಾಣ ಅಳಿಮುಖಂ ವರದಿಗಾರ ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ದೆಹಲಿ ಘಟಕದ ಕಾರ್ಯದರ್ಶಿ ಸಿದ್ದಿಕ್‌ ಕಪ್ಪನ್ ಸೇರಿದಂತೆ ಮೂವರನ್ನು 2020ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು. ಸೌಹಾರ್ದತೆಗೆ ಭಂಗ ತರುವ ಉದ್ದೇಶದಿಂದ ಕಪ್ಪನ್ ಆ ಪ್ರದೇಶಕ್ಕೆ ತೆರಳುತ್ತಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿತ್ತು. ತಪ್ಪು ಮಾಹಿತಿಗಳಿಂದ ಕೂಡಿದ ಜಾಲತಾಣ ನಡೆಸಲು ಮತ್ತು ಹಿಂಸಾಚಾರ ಪ್ರಚೋದನೆಗೆ ಅವರು ಹಣ ಸಂಗ್ರಹಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿತ್ತು.

ಹೀಗಾಗಿ ದೇಶದ್ರೋಹ, ಯುಎಪಿಎ ಕಾಯಿದೆ, ಐಪಿಸಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು. ಮಥುರಾ ನ್ಯಾಯಾಲಯ ಕಪ್ಪನ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮಾಧ್ಯಮದವರಲ್ಲದ ಸಹ ಆರೋಪಿಗಳೊಂದಿಗೆ ವರದಿ ಮಾಡಲು ಹೋಗುವ ಸಂದರ್ಭದಲ್ಲಿ ಕಾನೂನು ಭಂಗಕ್ಕೆ ಯತ್ನಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಮತ್ತು ಅವರು ದೋಷಯುಕ್ತ ಹಣದ ಮೂಲವನ್ನು ಬಳಸಿದ್ದಾರೆ ಎಂದು ಹೇಳಿ ಹೈಕೋರ್ಟ್‌ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಗೌತಮ್‌ ನವಲಖಾ ಮನವಿ: ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿಯಾಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್‌ ನವಲಖಾ ಅವರು ತಮ್ಮನ್ನು ತಲೋಜಾ ಜೈಲಿನಿಂದ ವರ್ಗಾಯಿಸಿ ಗೃಹಬಂಧನದಲ್ಲಿರಿಸುವಂತೆ ಮಾಡಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com