ಹಿಜಾಬ್ ಪ್ರಕರಣ: ವಿಚಾರಣಾ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್

ಮುಂದಿನ ತಿಂಗಳು ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು ತಮಗೆ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುವಾಗುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Supreme Court and Hijab Ban Case
Supreme Court and Hijab Ban Case

ಹಿಜಾಬ್ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದ್ದು ಶೀಘ್ರದಲ್ಲೇ ವಿಚಾರಣೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಭರವಸೆ ನೀಡಿದೆ.

ಅರ್ಜಿ ಸಲ್ಲಿಸಿದ್ದ ಕರ್ನಾಟಕದ ವಿದ್ಯಾರ್ಥಿನಿಯರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ಇಂದು ಸಿಜೆಐ ಅವರ ಮುಂದೆ ಪ್ರಕರಣವನ್ನು ಉಲ್ಲೇಖಿಸಿದರು.

ಮುಂದಿನ ತಿಂಗಳು ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು ತಮಗೆ ಹಿಜಾಬ್‌ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುವಾಗುವಂತೆ ಮಧ್ಯಂತರ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.   

“ಇದು ಶಿರವಸ್ತ್ರಕ್ಕೆ ಸಂಬಂಧಿಸಿದ ಪ್ರಕರಣ. ವಿದ್ಯಾರ್ಥಿನಿಯರು ಫೆಬ್ರವರಿ 6, 2023 ರಿಂದ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬೇಕಿದ್ದು ಮಧ್ಯಂತರ ನಿರ್ದೇಶನ ನೀಡುವುದಕ್ಕಾಗಿ ಪ್ರಕರಣವನ್ನು ಪಟ್ಟಿ ಮಾಡಬೇಕಿದೆ. ಪರೀಕ್ಷೆಗೆ ವಿದ್ಯಾರ್ಥಿನಿಯರು ಹಾಜರಾಗಬೇಕಿದೆ” ಎಂದು ಅರೋರಾ ನ್ಯಾಯಾಲಯಕ್ಕೆ ತಿಳಿಸಿದರು.

Also Read
ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣ: ಭಿನ್ನ ತೀರ್ಪು ನೀಡಿದ ಸುಪ್ರೀಂ; ವಿಸ್ತೃತ ಪೀಠಕ್ಕೆ ಪ್ರಕರಣ

ಆಗ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು " ಪ್ರಕರಣವನ್ನು ರಿಜಿಸ್ಟ್ರಾರ್‌ ಮುಂದೆ ಪ್ರಸ್ತಾಪಿಸಿ, ನಾವು ದಿನಾಂಕ ನಿಗದಿಪಡಿಸುತ್ತೇವೆ. ಇದು ತ್ರಿಸದಸ್ಯ ಪೀಠ ವಿಚಾರಣೆ ನಡೆಸಬೇಕಾದ ಪ್ರಕರಣವಾಗಿದೆ. ನ್ಯಾಯಾಲಯ ವಿಚಾರಣೆ ನಡೆಸಲಿದೆ” ಎಂದು ಪ್ರತಿಕ್ರಿಯಿಸಿದರು.

ಕಾಲೇಜು ಕ್ಯಾಂಪಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸುಪ್ರೀಂ ಕೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನ ತೀರ್ಪು ನೀಡಿದ ಬಳಿಕ ವಿದ್ಯಾರ್ಥಿನಿಯರು ಸರ್ಕಾರಿ ಕಾಲೇಜುಗಳ ಬದಲಿಗೆ ಖಾಸಗಿ ಕಾಲೇಜುಗಳಿಗೆ ತೆರಳುತ್ತಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದರು.

ಆದರೆ ಪರೀಕ್ಷೆಗಳು ಸರ್ಕಾರಿ ಕಾಲೇಜುಗಳಲ್ಲಷ್ಟೇ ನಡೆಯುವುದರಿಂದ ಫೆಬ್ರವರಿಯಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ಹಿಜಾಬ್‌ ಧರಿಸಿ ಹಾಜರಾಗಲು ಅನುಮತಿ ನೀಡುವಂತೆ ಸೂಚಿಸಬೇಕು ಎಂದು ಕೋರಲಾಗಿತ್ತು.

ಹಿಜಾಬ್‌ಗೆ ನಿಷೇಧ ಹೇರಿದ್ದನ್ನು ಈ ಮೊದಲು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಸರ್ಕಾರ ನಿಷೇಧ ಹೇರಿದ್ದನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು ಇದರ ಬೆನ್ನಲ್ಲೇ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠ ಭಿನ್ನ ತೀರ್ಪು ನೀಡಿತು. ಆಗ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಹೇಮಂತ್‌ ಗುಪ್ತಾ ಅವರು ನಿಷೇಧವನ್ನು ಎತ್ತಿ ಹಿಡಿದರೆ ನ್ಯಾ. ಸುಧಾಂಶು ಧುಲಿಯಾ ನಿಷೇಧ ತೆರವು ಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.

Related Stories

No stories found.
Kannada Bar & Bench
kannada.barandbench.com