[ಹಿಜಾಬ್ ವಿವಾದ] ಧರ್ಮದೊಳಗಿನ ಅಗತ್ಯ ಆಚರಣೆ ಯಾವುದು ಎನ್ನುವುದನ್ನು ಸರ್ಕಾರ ನಿರ್ಧರಿಸಲಾಗದು: ಕಾಮತ್ ವಾದ

ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ನನ್ನ ಪುತ್ರ ನಾಮ ಹಾಕಿಕೊಂಡು ಶಾಲೆಗೆ ಹೋಗುತ್ತಾನೆ. ನಾಮ ಉಲ್ಲೇಖಿಸಿ ಶಾಲೆಯು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಹೇಳಬಹುದೇ? ಎಂದು ಪ್ರಶ್ನಿಸಿದ ಹಿರಿಯ ವಕೀಲ ದೇವದತ್‌ ಕಾಮತ್.
Karnataka HC and Senior Advocate Devadutt Kamat

Karnataka HC and Senior Advocate Devadutt Kamat

Published on

ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ದೇಶದ ಚಿತ್ತ ಮಂಗಳವಾರ ಕರ್ನಾಟಕ ಹೈಕೋರ್ಟ್‌ನತ್ತ ನೆಟ್ಟಿತ್ತು. ಕುಂದಾಪುರದ ಭಂಡಾರ್ಕಾರ್ಸ್‌ ಕಾಲೇಜಿನ ವಿದ್ಯಾರ್ಥಿನಿಯರಾದ ಐಶತ್‌ ಶಿಫಾ ಮತ್ತು ತೈರಿನ್ ಬೇಗಂ ಅವರು ತಮ್ಮ ಪೋಷಕರ ಮೂಲಕ ಸಲ್ಲಿಸಿದ್ದ ಅರ್ಜಿ ಮತ್ತು ಸಂಬಂಧಿತ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ತಮ್ಮ ವಾದದ ವೇಳೆ ಧರ್ಮ ಮತ್ತು ಆಚರಣೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಧಾರ್ಮಿಕ ಆಚರಣೆ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯದ ಸುತ್ತ ತಮ್ಮ ವಾದವನ್ನು ವಿಷದವಾಗಿ ಮಂಡಿಸಿದರು.

ಕಾಮತ್‌ ಅವರು ಮಂಡಿಸಿದ ವಾದದ ಪ್ರಮುಖ ಸಾರ ಮೂರು ಅಂಶಗಳ ಸುತ್ತವಿತ್ತು. ಮೊದಲನೆಯದು, ಹಿಜಾಬ್‌ ಧರಿಸುವುದು ಇಸ್ಲಾಂನ ಅತಿಮುಖ್ಯ ಭಾಗ ಎನ್ನುವುದು. ಎರಡನೆಯದು ಸಾರ್ವಜನಿಕ ಸುವ್ಯವಸ್ಥೆಯ ಪ್ರಶ್ನೆಯು ಸಾಂವಿಧಾನಿಕ ಶಕ್ತಿಯನ್ನು ದಾಟಲಾಗದು ಎನ್ನುವುದು. ಮೂರನೆಯದು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕೆಲಸ. ಇದರಲ್ಲಿ ವಿಫಲವಾಗಿ, ಸಂವಿಧಾನದ 25ನೇ ವಿಧಿಯಡಿ ಹಕ್ಕು ಚಲಾಯಿಸದಂತೆ ಜನರಿಗೆ ಸರ್ಕಾರ ಹೇಳಲಾಗದು ಎಂಬುದು.

ಸುದೀರ್ಘ ಕಾಲ ವಿಸ್ತೃತವಾಗಿ ತಮ್ಮ ವಾದ ಮಂಡಿಸಿದ ದೇವದತ್‌ ಕಾಮತ್‌ ಅವರು ಈ ಹಿಂದೆ ಹಿಜಾಬ್‌ ವಿಚಾರವಾಗಿ, ವಿವಿಧ ಧಾರ್ಮಿಕ ಆಚರಣೆಗಳ ವಿಚಾರವಾಗಿ ನ್ಯಾಯಾಲಯಗಳು ನೀಡಿರುವ ಪ್ರಮುಖ ತೀರ್ಪುಗಳನ್ನು ಹಾಗೂ ಅವುಗಳ ನಿರ್ದಿಷ್ಟ ಹಿನ್ನೆಲೆಯನ್ನು ನ್ಯಾಯಾಲಯದ ಮುಂದಿಟ್ಟರು.

ಹಿರಿಯ ವಕೀಲ ದೇವದತ್‌ ಕಾಮತ್‌ ಅವರ ವಾದದ ಪ್ರಮುಖ ಅಂಶಗಳು ಹೀಗಿವೆ:

  • ಹಿಜಾಬ್‌ ಧರಿಸುವುದು ಇಸ್ಲಾಮ್‌ ಧರ್ಮದ ಸಂಪ್ರದಾಯ. ಶಿರವಸ್ತ್ರ ಅಥವಾ ಹಿಜಾಬ್‌ ಧರಿಸುವುದು ಪವಿತ್ರ ಕುರಾನ್‌ ಪ್ರಕಾರ ಇಸ್ಲಾಂ ಆಚರಣೆಯ ಅಗತ್ಯ ಭಾಗವಾಗಿದೆ.

  • ಇಷ್ಟವಿರುವ ಬಟ್ಟೆ ಧರಿಸುವುದು ಸಂವಿಧಾನದ 19(ಎ) ವಿಧಿಯಡಿರುವ ಹಕ್ಕಾಗಿದ್ದು, 19(6) ಅಡಿ ಮಾತ್ರವೇ ಅದನ್ನು ನಿರ್ಬಂಧಿಸಬಹುದು. ಅಭಿವ್ಯಕ್ತಿಯ ಸ್ವಾತಂತ್ರ್ಯವು ಏನನ್ನು ಧರಿಸಬಹುದು ಎನ್ನುವುದನ್ನು ಒಳಗೊಳ್ಳುತ್ತದೆ. ಸಾರ್ವಜನಿಕ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಮಾತ್ರವೇ ಪ್ರಭುತ್ವ ಇದನ್ನು ನಿರ್ಬಂಧಿಸಬಹುದು.

  • ಪುಟ್ಟಸ್ವಾಮಿ ಅವರ ಪ್ರಕರಣದಲ್ಲಿ 21ನೇ ವಿಧಿಯಡಿ ಇರುವ ಖಾಸಗಿ ಹಕ್ಕನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು, ವಸ್ತ್ರಧರಿಸುವ ಹಕ್ಕು ಖಾಸಗಿ ಹಕ್ಕಿನ ಭಾಗವಾಗಿದೆ.

  • ಸರ್ಕಾರದ ಆದೇಶವು ಕರ್ನಾಟಕ ಶಿಕ್ಷಣ ನಿಯಮಾವಳಿಗಳಿಂದ ಹೊರಗಿದ್ದು, ಆ ಆದೇಶ ಹೊರಡಿಸಲು ಸರ್ಕಾರಕ್ಕೆ ಯಾವುದೇ ವ್ಯಾಪ್ತಿ ಇಲ್ಲ.

  • ಸರ್ಕಾರವು ಯಾವುದು ಧರ್ಮದೊಳಗಿನ ಅಗತ್ಯ ಆಚಾರ, ಯಾವುದಲ್ಲ ಎನ್ನುವುದನ್ನು ಹೇಳಲಾಗದು. ಅದು ನ್ಯಾಯಾಂಗದ ಪರಿಮಿತಿಗೆ ಬರುವ ವಿಚಾರ.

  • ಕೇರಳ ಹೈಕೋರ್ಟ್‌ ತೀರ್ಪನ್ನು ಆಧರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಆ ತೀರ್ಪು ಅನ್ವಯಿಸುವುದಿಲ್ಲ. ಸರ್ಕಾರಿ ಸಂಸ್ಥೆಯಲ್ಲಿ ಹಿಜಾಬ್‌ ಧರಿಸುವುದಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ತೀರ್ಪು ಪ್ರಕಟಿಸಿರಲಿಲ್ಲ. ಅಲ್ಲಿ, ಖಾಸಗಿಯವರಿಗೆ ಸೇರಿದ ಕ್ರಿಶ್ಚಿಯನ್‌ ಸಮುದಾಯದ ಸಂಸ್ಥೆಯಲ್ಲಿ ಆ ಹಕ್ಕಿನ ಚಲಾವಣೆಯನ್ನು ಪೀಠವು ನಿರ್ಧರಿಸಿತ್ತು.

  • ಯಾವುದೇ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಸಾರ್ವಜನಿಕ ಸುವ್ಯವಸ್ಥೆ ಪ್ರಶ್ನೆಯನ್ನು ಮುಂದುಮಾಡಬಹುದು. ಸಾರ್ವಜನಿಕ ಸುವ್ಯವಸ್ಥೆ ನೆಪವೊಡ್ಡಿ ಸರ್ಕಾರವು ಎಲ್ಲಾ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸಬಹುದು. ಆದರೆ, ಜೊಳ್ಳಿನಿಂದ ಕಾಳನ್ನು ಬೇರ್ಪಡಿಸುವುದನ್ನು ನ್ಯಾಯಾಲಯ ಮಾಡಬೇಕು.

  • ಸರ್ಕಾರದ ಆದೇಶವು ಕರ್ನಾಟಕ ಶಿಕ್ಷಣ ನಿಯಮಾವಳಿಗಳ ವ್ಯಾಪ್ತಿಯ ಅಚೆಗಿದೆ. ಹಾಗಾಗಿ ಅದು ಇಂತಹ ಆದೇಶ ಹೊರಡಿಸುವ ವ್ಯಾಪ್ತಿಯನ್ನು ಹೊಂದಿಲ್ಲ.

  • ಧಾರ್ಮಿಕ ಆಚರಣೆಗಳನ್ನು ಧಾರ್ಮಿಕ ಅಧಿಕಾರದಿಂದ ಹೊರತಾದ ಜಾತ್ಯತೀತ ತತ್ವಗಳಿಂದ ಪರೀಕ್ಷಿಸಲಾಗದು. ಹಾಗಾಗಿ, ಧರ್ಮಕ್ಕೆ ಏನು ಅಗತ್ಯ ಏನಲ್ಲ ಎನ್ನುವುದನ್ನು ನಮ್ಮ ಜಾತ್ಯತೀತ ಆಲೋಚನೆಗಳು ನಿರ್ಧರಿಸಲಾಗದು.

  • ಋತುಮತಿಯಾದ ನಂತರ ಹೆಣ್ಣು ತನ್ನ ಮುಖ ಹಾಗೂ ಕೈಗಳ ಹೊರತಾಗಿ ಇತರ ಭಾಗಗವನ್ನು ಅಪರಿಚಿತರಿಗೆ ತೋರುವುದು ಸರಿಯಲ್ಲ ಎನ್ನುವುದನ್ನು ಕೇರಳ ಹೈಕೋರ್ಟ್‌ ತೀರ್ಪಿನ ಹಾದಿತ್‌ನಲ್ಲಿ ಉಲ್ಲೇಖಿಸಲಾಗಿದೆ.

  • ಕರ್ನಾಟಕ ಸರ್ಕಾರದ ಆದೇಶವು ಕೇರಳ ಹೈಕೋರ್ಟ್‌ನ ತೀರ್ಪಿನಲ್ಲಿ ಹೇಳಿರುವ ಧರ್ಮಕ್ಕೆ ಯಾವುದು ಅಗತ್ಯವಲ್ಲ ಎನ್ನುವ ಅಂಶದಿಂದ ಕೂಡಿದ್ದು ಹಿಜಾಬ್‌ ಅಗತ್ಯವಲ್ಲ ಎನ್ನುತ್ತದೆ. ಆದರೆ, ಈ ತೀರ್ಪು ಇಲ್ಲಿ ಅನ್ವಯವಾಗದು. ಅದು ಏಕೆ ಅನ್ವಯವಾಗುವುದಿಲ್ಲ ಎಂದರೆ ಆ ಪ್ರಕರಣ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಬಗ್ಗೆ ಅಗಿರಲಿಲ್ಲ. ಬದಲಿಗೆ ಖಾಸಗಿ ಕ್ರಿಶ್ಚಿಯನ್‌ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ್ದಾಗಿತ್ತು.

  • ವೈಯಕ್ತಿಕವಾಗಿ ಹೇಳಬೇಕೆಂದರೆ ಮಕ್ಕಳು ತಮ್ಮ ತಲೆ ಮುಚ್ಚಿಕೊಳ್ಳುವುದಕ್ಕೆ ಸಂಬಂಧಿಸಿದ ನಿಲುವಿಗೆ ನನ್ನ ಬೆಂಬಲ ಇಲ್ಲದಿರಬಹುದು. ಆದರೆ, ನಾವು ಮತ್ತೊಬ್ಬರ ನಿರ್ಧಾರದಲ್ಲಿ ತೀರ್ಪು ನೀಡಲು ಕೂರಲಾಗದು ಎಂದು ನ್ಯಾಯಾಲಯಗಳು ಹೇಳಿವೆ.

  • ಇದು ಸಾರ್ವಜನಿಕ ಸುವ್ಯವಸ್ಥೆಯ ವಿಷಯವೇ ಆದರೆ ಅವರು ಹಿಜಾಬ್‌ ಧರಿಸಿ ಶಾಲೆಗೆ ಬರುವಾಗ ಮಾತ್ರವೇ ಏಕೆ ಸಮಸ್ಯೆಯಾಗುತ್ತದೆ. ಹೊರಗಡೆ ಇರುವಾಗ ಏಕೆ ಸಮಸ್ಯೆಯಾಗುವುದಿಲ್ಲ?

  • ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ನನ್ನ ಪುತ್ರ ನಾಮ ಹಾಕಿಕೊಂಡು ಶಾಲೆಗೆ ಹೋಗುತ್ತಾನೆ. ನಾಮ ಉಲ್ಲೇಖಿಸಿ ಶಾಲೆಯು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಹೇಳಬಹುದೇ? ಅರ್ಜಿದಾರರು ಹಿಜಾಬ್‌ ಧರಿಸಿದ್ದು, ಅವರು ಯಾರಿಗೂ ಸಮಸ್ಯೆ ಉಂಟು ಮಾಡುತ್ತಿಲ್ಲ.

  • ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಸರ್ಕಾರ ಹೇಳಿದರೆ ಸಾಕಾಗದು. ನಮ್ಮ ಧಾರ್ಮಿಕ ನಂಬಿಕೆಯನ್ನು ಪಾಲಿಸುತ್ತಿದ್ದು, ಹಿಜಾಬ್‌ ಧರಿಸಿ ಕಾಲೇಜಿಗೆ ಹೋಗುತ್ತಿದ್ದೇವೆ. ಇದಕ್ಕೆ ಸಾರ್ವಜನಿಕ ಸುವ್ಯವಸ್ಥೆಯ ಧಕ್ಕೆಯ ಬಣ್ಣ ಕೊಡುವುದು ಚಕ್ಕಡಿಯ ಹಿಂದೆ ಎತ್ತು ಹೂಡಿದಂತೆ.

  • ಸಾರ್ವಜನಿಕ ಸುವ್ಯವಸ್ಥೆಯ ನೆಪವೊಡ್ಡಿ ಜನರ ಮೂಲಭೂತ ಹಕ್ಕನ್ನು ಸರ್ಕಾರ ಕಸಿಯಲಾಗದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸಿದ ಕಾಮತ್‌.

  • ಜನರು ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಅವುಗಳನ್ನು ಕಡಿತ ಮಾಡಲು ಅಲ್ಲ. ಗೂಂಡಾಗಳು ಅಡ್ಡಿಪಡಿಸುತ್ತಿದ್ದರೆ, ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಚಲಾಯಿಸಲು ಸರ್ಕಾರ ಕ್ರಮವಹಿಸಬೇಕು. ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಅವರು ಯಾವ ರೀತಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾಗಿದ್ದಾರೆ?

  • ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಆಚರಣೆಯನ್ನು ಮನೆಗೆ ಏಕೆ ಸೀಮಿತಗೊಳಿಸಬಾರದು ಎಂಬ ವಾದವಿರಬಹುದು. ಭಾರತದಲ್ಲಿ ಜಾತ್ಯತೀತತೆ ಭಿನ್ನವಾಗಿದೆ. ನಮ್ಮ ದೇಶದಲ್ಲಿ ಸಕಾರಾತ್ಮಕವಾದ ಜಾತ್ಯತೀತವಾದವನ್ನು ಪಾಲಿಸುತ್ತಿದ್ದೇವೆ.

  • ಧಾರ್ಮಿಕ ಚಟುವಟಿಕೆಗಳಿಂದ ದೂರ ಇರುವ ಬೇರೆ ದೇಶಗಳಲ್ಲಿನ ಜಾತ್ಯತೀತವಾದವನ್ನು ನಾವು ಪಾಲಿಸುವುದಿಲ್ಲ. ನಮ್ಮಲ್ಲಿ ವಿದ್ಯಾರ್ಥಿಗಳು ನಾಮ ಹಾಕಿಕೊಳ್ಳಲು, ಹಿಜಾಬ್‌ ಧರಿಸಲು ಅವಕಾಶವಿದೆ.

  • ಹಿಜಾಬ್‌ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳಿರಿಸಲಾಗಿದೆ. ಇದು ಧಾರ್ಮಿಕ ತಾರತಮ್ಯದ ವಿಧಾನವಾಗಿದೆ.

Also Read
ಹಿಜಾಬ್‌ ವಿವಾದ: ಶಾಂತಿ, ನೆಮ್ಮದಿ ಕಾಪಾಡಲು ವಿದ್ಯಾರ್ಥಿಗಳು, ಜನತೆಗೆ ಕರ್ನಾಟಕ ಹೈಕೋರ್ಟ್‌ ಮನವಿ
Kannada Bar & Bench
kannada.barandbench.com