ಶಾಲಾ ಆವರಣದ ಗೋಡೆಯ ಮೇಲೆ 'ಹಿಜಾಬ್‌ ನಮ್ಮ ಘನತೆʼ ಬರಹ: ಇಬ್ಬರು ಮುಸ್ಲಿಮ್‌ ಯುವಕರ ವಿರುದ್ಧದ ಎಫ್‌ಐಆರ್‌ ರದ್ದು

ಹೊಸಪೇಟೆಯನ್ನು ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ನಿಷೇಧ) ಕಾಯಿದೆಯ ವ್ಯಾಪ್ತಿಗೆ ತರುವ ಸಂಬಂಧ ಯಾವುದೇ ಅಧಿಸೂಚನೆ ಹೊರಡಿಸುವ ಅಗತ್ಯವಿಲ್ಲ ಎಂದು ವಾದಿಸಿದ್ದ ಸರ್ಕಾರದ ಪರ ವಕೀಲರು.
Hijab and Karnataka HC, Dharwad Bench
Hijab and Karnataka HC, Dharwad Bench

ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಿಎಂಸಿ ಸರ್ಕಾರಿ ಪ್ರೌಢಶಾಲೆಯ ಆವರಣದ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ “ಹಿಜಾಬ್‌ ನಮ್ಮ ಘನತೆ” ಎಂದು ಬರೆದಿದ್ದ ಆರೋಪದ ಮೇಲೆ ಇಬ್ಬರು ಮುಸ್ಲಿಮ್‌ ಯುವಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ರದ್ದುಪಡಿಸಿದೆ.

ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ನಿಷೇಧ) ಕಾಯಿದೆ ಸೆಕ್ಷನ್‌ 3ರ ಅಡಿ ಪ್ರಕ್ರಿಯೆ ವಜಾ ಮಾಡುವಂತೆ ಕೋರಿ ವಿಜಯನಗರದ ಮುಜಾಮಿಲ್‌ ಮತ್ತು ಮೊಹಮ್ಮದ್‌ ಜಮೌಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಹೊಸಪೇಟೆಗೆ ಕಾಯಿದೆಯ ಸೆಕ್ಷನ್‌ 3 ಅನ್ವಯಿಸುವುದಿಲ್ಲ. ಸೆಕ್ಷನ್‌ 3 ಅನ್ನು ಅನ್ವಯಿಸಬೇಕಾದರೆ ಸೆಕ್ಷನ್‌ 1 ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸೆಕ್ಷನ್‌ 1ರ ಪ್ರಕಾರ ನಿರ್ದಿಷ್ಟ ಸ್ಥಳ/ಸ್ಥಳೀಯ ಪ್ರದೇಶವನ್ನು ಕಾಯಿದೆಯ ವ್ಯಾಪ್ತಿಗೆ ಒಳಪಡಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವುದು ಕಡ್ಡಾಯ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮೊಹಮ್ಮದ್‌ ಅಜರುದ್ದೀನ್‌ ಅವರು “ಕಾನೂನಿನ ಅನ್ವಯ ವಿಜಯನಗರ ಜಿಲ್ಲೆಯು ಕಾಯಿದೆಗೆ ಒಳಪಟ್ಟಿಲ್ಲ. ಆದ್ದರಿಂದ, ಕಾಯಿದೆಯ ಸೆಕ್ಷನ್‌ ಅನ್ವಯಿಸಲಾಗದು” ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಕೀಲರ ವಾದವನ್ನು ತಿರಸ್ಕರಿಸಿದ್ದ ಸರ್ಕಾರದ ವಕೀಲ ವಿ ಎಸ್‌ ಕಳಸೂರಮಠ ಅವರು “ಹೊಸಪೇಟೆಯನ್ನು ಕಾಯಿದೆಯ ವ್ಯಾಪ್ತಿಗೆ ತರುವ ಸಂಬಂಧ ಯಾವುದೇ ಅಧಿಸೂಚನೆ ಹೊರಡಿಸುವ ಅಗತ್ಯವಿಲ್ಲ” ಎಂದಿದ್ದರು.

ಪ್ರಕರಣದ ಹಿನ್ನೆಲೆ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿ ರಾಜ್ಯ ಸರ್ಕಾರ ಮಾಡಿದ್ದ ಆದೇಶ ಪ್ರಶ್ನಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾ ಮಾಡಿದ ಮಾರನೆಯ ದಿನ ಅಂದರೆ 2022ರ ಮಾರ್ಚ್‌ 16ರಂದು ಶಾಲೆಯ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ 'ಹಿಜಾಬ್‌ ನಮ್ಮ ಘನತೆ' ಎಂದು ಬರೆದಿರುವುದು ಕಂಡು ಬಂದಿತ್ತು. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ದೂರು ನೀಡಿದ್ದರು. ಇದನ್ನು ಆಧರಿಸಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Attachment
PDF
Muzammil and other Vs State of Karnataka and other.pdf
Preview
Kannada Bar & Bench
kannada.barandbench.com