ಅಗತ್ಯ ಧಾರ್ಮಿಕ ಆಚರಣೆ ಪರೀಕ್ಷೆಗೆ ಸಂಬಂಧಿಸಿದ ಶಬರಿಮಲೆ ತೀರ್ಪು ಈ ನೆಲದ ಕಾನೂನು: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಹಿಜಾಬ್‌ ಧಾರಣೆ ಅಗತ್ಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಯಾವುದೇ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಾದಿಸಿದರು.
Hijab Row, Karnataka High Court

Hijab Row, Karnataka High Court

ಹಿಜಾಬ್‌ ಧಾರಣೆ ಅಗತ್ಯ ಧಾರ್ಮಿಕ ಆಚರಣೆ ಎಂದು ಅರ್ಜಿದಾರರು ವಾದಿಸುವ ಮೂಲಕ ಎಲ್ಲಾ ಮುಸ್ಲಿಮ್‌ ಮಹಿಳೆಯರನ್ನೂ ಒಂದು ನಿರ್ದಿಷ್ಟ ವಸ್ತ್ರ ಸಂಹಿತೆಗೆ ಸೀಮಿತಗೊಳಿಸುವ ದೃಷ್ಟಿ ಹೊಂದಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರವು ಸೋಮವಾರ ತಿಳಿಸಿದೆ.

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಏಳನೇ ದಿನವಾದ ಸೋಮವಾರ ಸಹ ಮುಂದುವರೆಸಿತು.

“ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ಪ್ರತಿಯೊಬ್ಬ ಮಹಿಳೆಯನ್ನು ಧಾರ್ಮಿಕ ಅನುಮೋದನೆಗೆ ಒಳಪಡಿಸುವ ನಿರ್ದಿಷ್ಟ ಸ್ವರೂಪದ ಉಡುಗೆಯೊಂದರ ಘೋಷಣೆಯನ್ನು ಅರ್ಜಿದಾರರು ಕೋರುತ್ತಿದ್ದಾರೆ. ಈ ಹಕ್ಕೊತ್ತಾಯ ಗಂಭೀರಸ್ವರೂಪದ್ದಾಗಿದೆ” ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹೇಳಿದರು.

ಹಿಜಾಬ್‌ ಅಗತ್ಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಯಾವುದೇ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟಿಲ್ಲ. 2018ರಲ್ಲಿನ ಸುಪ್ರೀಂ ಕೋರ್ಟ್‌ ಶಬರಿಮಲೆ ತೀರ್ಪಿನಲ್ಲಿ ಧಾರ್ಮಿಕ ಆಚರಣೆಯ ಅಗತ್ಯತೆಯನ್ನು ನಿರ್ಧರಿಸುವುದು ಹೇಗೆ ಎಂದು ಹೇಳಿದೆ. ಅದು ಈಗ ಈ ನೆಲದ ಕಾನೂನಾಗಿದೆ. “ಅಗತ್ಯ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಶಬರಿಮಲೆ ತೀರ್ಪು ಈಚೆಗೆ ಬಂದಿರುವ ಕೊನೆಯ ತೀರ್ಪಾಗಿದ್ದು, ಇಂದಿಗೂ ಅದು ಪ್ರಸ್ತುತವಾಗಿರುವುದರಿಂದ ಅದನ್ನು ನೆಲದ ಕಾನೂನು ಎಂದು ಪರಿಗಣಿಸಬಹುದು” ಎಂದರು.

ವಿಚಾರಣೆ ಆರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ನಾವದಗಿ ಅವರಿಗೆ “ನಿಮ್ಮ ನಿಲುವೇನು? ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಅವಕಾಶವಿದೆಯೇ? ಶೈಕ್ಷಣಿಕ ಸಂಸ್ಥೆಗಳು ಅವಕಾಶ ಮಾಡಿದರೆ ನಿಮ್ಮ ಆಕ್ಷೇಪಣೆ ಇಲ್ಲವೇ?” ಎಂದು ಕೇಳಿದರು. ಇದಕ್ಕೆ ನಾವದಗಿ ಅವರು “ಅಂಥ ಪರಿಸ್ಥಿತಿ ನಿರ್ಮಾಣವಾದಾಗ ನಾವು ನಿಲುವು ಕೈಗೊಳ್ಳುತ್ತೇವೆ” ಎಂದು ಪ್ರತಿಕ್ರಿಯಿಸಿದರು.

ಆಗ ಪೀಠವು ಕಾಲೇಜಿನಲ್ಲಿ ಸಮವಸ್ತ್ರದ ಜೊತೆಗೆ ಒಂದು ಬಣ್ಣದ ಹಿಜಾಬ್‌ ಧರಿಸಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ ಎಂದರು. ಇದಕ್ಕೆ ನಾವದಗಿ ಅವರು “ನಾವು ಯಾವುದನ್ನೂ ಸೂಚಿಸಿಲ್ಲ. ಕರ್ನಾಟಕ ಶಿಕ್ಷಣ ಕಾಯಿದೆಯ ಪೀಠಿಕೆಯಲ್ಲಿ ಉತ್ತರವಿದ್ದು, ಜಾತ್ಯತೀತವಾದ ವಾತಾವರಣ ನಿರ್ಮಿಸಬೇಕು ಎಂದು ಹೇಳಲಾಗಿದೆ. ಧಾರ್ಮಿಕ ವಿಚಾರಕ್ಕೆ ನಾಂದಿಯಾಗುವ ಯಾವುದೂ ಬೇಡ ಎಂಬುದು ರಾಜ್ಯ ಸರ್ಕಾರದ ನಿಲುವು” ಎಂದರು.

ಆಗ ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ರಾಜ್ಯ ಸರ್ಕಾರದ ನಿಲುವು ಇದಾದರೆ ನ್ಯಾಯಾಲಯವು ಸಂವಿಧಾನದ 25ನೇ ವಿಧಿಯ ಉಲ್ಲಂಘನೆ ವಿಚಾರಕ್ಕೆ ಹೋಗಬೇಕೆ? ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ನಿರ್ಧರಿಸುತ್ತದೆ ಎಂದು ನೀವು ಹೇಳುತ್ತಿದ್ದೀರಿ. ಸಿಡಿಸಿ ಏನು ಮಾಡಿದ್ದಾರೆ ಎಂಬುದನ್ನು ನಾವು ಪರಿಶೀಲಿಸಬೇಕೆ? ಸಿಡಿಸಿಗಳು ಶಾಸನಬದ್ಧ ಸಂಸ್ಥೆಗಳಲ್ಲವಾದ್ದರಿಂದ ನ್ಯಾಯಾಲಯದ ಆದೇಶದಿಂದ ಅವುಗಳನ್ನು ನಿಯಂತ್ರಿಸಬಹುದೇ?” ಎಂದರು.

ಸಂವಿಧಾನದ 25ನೇ ವಿಧಿಗೆ ಸಂಬಂಧಿಸಿದಂತೆ ಪೀಠವು ಅದನ್ನು ನಿರ್ಧರಿಸಬೇಕಿದೆ. ಭವಿಷ್ಯದಲ್ಲಿ ವೈಯಕ್ತಿಕ ಪ್ರಕರಣಗಳು ಬಂದರೆ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯಾಗಿದೆ ಎಂದು ಹೇಳಬಹುದು ಎಂದರು. ಆಗ ನ್ಯಾಯಮೂರ್ತಿ ಜೆ ಎಂ ಖಾಜಿ ಅವರು “ಅಗತ್ಯ ಧಾರ್ಮಿಕ ಆಚರಣೆ ಆತ್ಮಸಾಕ್ಷಿ ಸ್ವಾತಂತ್ರ್ಯಕ್ಕೂ ಅನ್ವಯಿಸುತ್ತದೆಯೇ?” ಎಂದರು. ಇದಕ್ಕೆ ನಾವದಗಿ ಅವರು “ಆತ್ಮಸಾಕ್ಷಿಯ ಹಕ್ಕಿನ ವಿಚಾರವು ನಂಬಿಕೆ ಅಥವಾ ನಂಬದಿರುವುದಕ್ಕೆ ಸಂಬಂಧಿಸಿದ್ದಾಗಿದೆ. ನಿಮ್ಮ ಆತ್ಮಸಾಕ್ಷಿಯನ್ನು ನೀವು ಏನು ತೋರಿಸುತ್ತೀರೋ ಅದು ಧಾರ್ಮಿಕ ಆಚರಣೆಗೆ ಕಾರಣವಾಗುತ್ತದೆ” ಎಂದರು.

ಸಂವಿಧಾನದ 28ನೇ ವಿಧಿಗೆ ಸಂಬಂಧಿಸಿದಂತೆ ಸಂವಿಧಾನ ರಚನಾ ಸಭೆಯಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಭಾಷಣವನ್ನು ಉಲ್ಲೇಖಿಸಿದ ನಾವದಗಿ ಅವರು ರಾಜ್ಯದ ಅನುದಾನದಿಂದ ನಿರ್ವಹಿಸಲ್ಪಡುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಧರ್ಮದ ನಿರ್ದೇಶನಗಳನ್ನು ನೀಡಬಾರದು ಎಂದು ಹೇಳಿದ್ದಾರೆ. ಕೆ ಎಂ ಮುನ್ಷಿ ಅವರು ಭಾರತವು ತನ್ನನ್ನು ತಾನು ಜಾತ್ಯತೀತ ದೇಶ ಎಂದು ಹೇಳಿಕೊಳ್ಳಬೇಕಾದರೆ ಧರ್ಮವನ್ನು ಹಕ್ಕಾಗಿ ಪರಿಗಣಿಸಬೇಕೆ ಎಂದು ಚರ್ಚೆಯ ಸಮಯದಲ್ಲಿ ಕೇಳಿದ್ದನ್ನು ಎಜಿ ಉಲ್ಲೇಖಿಸಿದರು.

ಇದಕ್ಕೆ ನ್ಯಾಯಮೂರ್ತಿ ದೀಕ್ಷಿತ್‌ ಅವರು “ನಮ್ಮ ಸಂವಿಧಾನದ ನಿರ್ಮಾತೃಗಳು ಹೇಳಿರುವ ಜಾತ್ಯತೀತತೆಯು ಅಮೆರಿಕದ ಸಂವಿಧಾನದ ಜಾತ್ಯತೀತತೆಯಂತಹುದಲ್ಲ. ಅದು ಚರ್ಚ್ ಮತ್ತು ಸರ್ಕಾರದ ನಡುವಿನ ಗೋಡೆಯಂತಲ್ಲ. ಬದಲಿಗೆ ನಾವು ಸರ್ವಧರ್ಮ ಸಮಭಾವ ಮತ್ತು ಧರ್ಮ ನಿರಪೇಕ್ಷಯತೆಯ ನಡುವೆ ಅತ್ತಿತ್ತ ತೂಗುತ್ತೇವೆ.” ಎಂದರು.

ಸಂವಿಧಾನದ 25ನೇ ವಿಧಿಯಡಿ ಆಚರಣೆಯು ರಕ್ಷಣೆ ಪಡೆಯಬೇಕಾದರೆ:

- ಅದು ಧಾರ್ಮಿಕ ಆಚರಣೆಯಾಗಿರಬೇಕು.

- ಬಳಿಕ ಅಗತ್ಯ ಧಾರ್ಮಿಕ ಆಚರಣೆಯಾಗಿರಬೇಕು.

- ಅದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ವಿರುದ್ಧವಾಗಿರಬಾರದು.

- ಯಾರೊಬ್ಬರ ಮೂಲಭೂತ ಹಕ್ಕುಗಳಿಗೂ ವಿರುದ್ಧವಾಗಿರಬಾರದು ಎಂದು ನಾವದಗಿ ಹೇಳಿದರು.

ಬಳಿಕ ಶಬರಿಮಲೆ ತೀರ್ಪನ್ನು ಉಲ್ಲೇಖಿಸಿದ ನಾವದಗಿ ಅವರು ಶಿರೂರ ಮಠ ಪ್ರಕರಣದಲ್ಲಿ ಅಗತ್ಯ ಧಾರ್ಮಿಕ ಆಚರಣೆಯ ತತ್ವದ ಬಳಿಕ ಯಾವುದು ಅಗತ್ಯ ಧಾರ್ಮಿಕತೆ ಎಂಬ ಪ್ರಶ್ನೆ ಹಿಂದೆ ಇತ್ತು. ಆನಂತರ ನ್ಯಾಯಾಂಗ ಧೋರಣೆಯಲ್ಲಿ ಬದಲಾವಣೆಯಾಯಿತು. ಈಗ (ಆಚರಣೆಯೊಂದು) 'ಅಗತ್ಯವಾಗಿ ಧಾರ್ಮಿಕವಾಗಿದ್ದರೂ' ಅದು 'ಧರ್ಮಕ್ಕೆ ಅಗತ್ಯವೇ' ಎನ್ನುವುದನ್ನು ನಿರೂಪಿಸಬೇಕಿದೆ ಎಂದರು.

ಇತ್ತೀಚೆಗೆ ಶಬರಿಮಲೆ ತೀರ್ಪು ಕೊನೆಯದಾಗಿದ್ದು, ಅದನ್ನು ನೆಲದ ಕಾನೂನಾಗಿ ಪರಿಣಿಸಿಬಹುದು ಎಂದು ನಾವದಗಿ ಹೇಳಿದರು. ಅದು ಅಗತ್ಯ ಎಂದು ಎನಿಸಿಕೊಳ್ಳಲು ಧಾರ್ಮಿಕ ಆಚರಣೆಯನ್ನು ಪೂರೈಸಬೇಕು. ಅವುಗಳೆಂದರೆ:

- ಆಚರಣೆಯು ಆ ಧರ್ಮಕ್ಕೆ ಮೂಲಭೂತವಾಗಿರಬೇಕು.

- ಆಚರಣೆಯನ್ನು ಪಾಲಿಸುತ್ತಿಲ್ಲ ಎಂದಾದರೆ ಇದು ಧರ್ಮದಲ್ಲೇ ಬದಲಾವಣೆಯಾಗುತ್ತಿರುವುದಾಗಿರುತ್ತದೆ.

- ಆಚರಣೆಯು ಧರ್ಮದ ಹುಟ್ಟಿಗಿಂತ ಮುಂಚಿತವಾಗಿರಬೇಕು. ಧರ್ಮದ ಅಡಿಪಾಯವು ಅದರ ಆಧಾರದ ಮೇಲೆ ಇರಬೇಕು ಅಥವಾ ಧರ್ಮದ ಹುಟ್ಟಿನ ಜೊತೆಗೆ ಏಕಕಾಲದಲ್ಲಿ ಇರಬೇಕು. ಅದು ಆ ಧರ್ಮದೊಂದಿಗೆ ಸಹ ವಿಸ್ತೃತವಾಗಿರಬೇಕು.

- ಐಚ್ಛಿಕವಾಗಿರಲು ಸಾಧ್ಯವಾಗದಿದ್ದರೆ. ಒಂದು ವೇಳೆ ಅವಿಧೇಯರಾದರೆ ಆತ/ಅವಳು ಆ ಧರ್ಮದ ಭಾಗವಾಗುವುದನ್ನು ನಿಲ್ಲಿಸುವಂತೆ ಅದು ಕಡ್ಡಾಯವಾಗಿರಬೇಕು ಎಂದರು.

ಕೆಲವು ಆಚರಣೆಗಳು ಅಗತ್ಯ ಎಂದು ಸಾಬೀತುಪಡಿಸಲು ಕುರಾನ್‌ ಅನ್ನು ಆಧರಿಸಿದಾಗ ಕನಿಷ್ಠ ನಾಲ್ಕು ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನಕಾರಾತ್ಮಕ ನಿರ್ಧಾರ ಕೈಗೊಂಡಿದೆ ಎಂದು ನಾವದಗಿ ಹೇಳಿದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ.

Related Stories

No stories found.
Kannada Bar & Bench
kannada.barandbench.com