
ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಲು ಅನುಮತಿ ನೀಡದ ಎರ್ನಾಕುಲಂ ಜಿಲ್ಲೆಯ ಸಿಬಿಎಸ್‌ಇ ಶಾಲೆ ವಿರುದ್ಧ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಶಾಲೆಗೆ ಪೊಲೀಸ್ ರಕ್ಷಣೆ ನೀಡಿದೆ [ಸೇಂಟ್ ರೀಟಾ ಪಬ್ಲಿಕ್ ಸ್ಕೂಲ್ ಮತ್ತು ಕೇರಳ ಪೊಲೀಸ್ ಮಹಾನಿರ್ದೇಶಕರು ಇನ್ನಿತರರ ನಡುವಣ ಪ್ರಕರಣ ].
ಸೋಮವಾರ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿದ ಬಳಿಕ ನ್ಯಾಯಮೂರ್ತಿ ಎನ್ ನಾಗರೇಶ್ ಅವರು ಶಾಲೆಗೆ ಪೊಲೀಸ್ ರಕ್ಷಣೆ ನೀಡಿ ಆದೇಶ ಹೊರಡಿಸಿದರು.
ಶಾಲೆಯನ್ನು 1998ರಲ್ಲಿ ಆರಂಭಿಸಲಾಗಿದ್ದು ಅಂದಿನಿಂದಲೂ ಸಂಪೂರ್ಣ ಜಾತ್ಯತೀತವಾಗಿ ನಡೆಸಿಕೊಂಡು ಹೋಗುತ್ತಿದ್ದೇವೆ. ಶಾಲಾ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಪೋಷಕರು ಲಿಖಿತ ಘೋಷಣೆ ಮಾಡಿದ್ದರೂ ಹಿಜಾಬ್ ಧರಿಸಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಬರುತ್ತಿರುವುದು ಶಾಲೆಯ ಸಮವಸ್ತ್ರ ನೀತಿ ಉಲ್ಲಂಘನೆಯಾಗಿದೆ ಎಂದು ಸೇಂಟ್ ರೀಟಾ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಲಿಖಿತ ವಿವರಣೆನೀಡುವಂತೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯ ಪೋಷಕರಿಗೆ ಸೂಚಿಸಿದ್ದರೂ ಅಕ್ಟೋಬರ್ 10 ರಂದು, ವಿದ್ಯಾರ್ಥಿಯ ಪೋಷಕರು ಆರಕ್ಕೂ ಹೆಚ್ಚು ವ್ಯಕ್ತಿಗಳೊಂದಿಗೆ ಶಾಲೆಗೆ ನುಗ್ಗಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಶಾಲೆಯ ದ್ವಾರಗಳ ಹೊರಗೆ ಜಮಾಯಿಸಿದ್ದ ಮತ್ತೊಂದು ಗುಂಪಿನ ವ್ಯಕ್ತಿಗಳು ಘೋಷಣೆ ಕೂಗಲು ಆರಂಭಿಸಿದರು.
ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಅವರು ಸೂಕ್ತ ರಕ್ಷಣೆ ನೀಡಲಿಲ್ಲ. ಹೀಗಾಗಿ ಹೈಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಶಾಲೆ ಕೋರಿತು.
ಫಾತಿಮಾ ತಸ್ನೀಮ್ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ತೀರ್ಪಿನಂತೆ ವಿದ್ಯಾರ್ಥಿಯ ಹಕ್ಕುಗಳು ಶಿಕ್ಷಣ ಸಂಸ್ಥೆಯ ವ್ಯಾಪಕ ಆಸಕ್ತಿ, ಶಿಸ್ತು ಮತ್ತು ಏಕರೂಪದ ನಿಯಮಗಳನ್ನು ಅತಿಕ್ರಮಿಸುವಂತಿಲ್ಲ ಎಂದು ಅದು ಹೇಳಿತು.
ಆ ವಿದ್ಯಾರ್ಥಿನಿಯ ಪೋಷಕರು ಇತರ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರನ್ನು ಸಂಪರ್ಕಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೇಳುತ್ತಿದ್ದಾರೆ. ಇದರಿಂದಾಗಿ ಶಾಲೆಗೆ ಅಕ್ಟೋಬರ್ 13 ಮತ್ತು 14ರಂದು ಶಾಲೆಗೆ ರಜೆ ಘೋಷಿಸಬೇಕಾಯಿತು ಎಂದು ಅದು ತಿಳಿಸಿತು.
ವಾದ ಆಲಿಸಿದ ನ್ಯಾಯಾಲಯ ನವೆಂಬರ್ 10ರಂದು ಪ್ರಕರಣದ ವಿಚಾರಣೆ ನಡೆಸಲಾಗುವುದು. ಅಲ್ಲಿಯವರೆಗೆ ಪೊಲೀಸ್ ರಕ್ಷಣೆ ಮುಂದುವರೆಯಬೇಕು ಎಂದಿತು ಇದೇ ವೇಳೆ ವಿದ್ಯಾರ್ಥಿನಿಯ ಪೋಷಕರಿಗೆ ನ್ಯಾಯಾಲಯ ಸ್ಪೀಡ್ ಪೋಸ್ಟ್ ಮೂಲಕ ನೋಟಿಸ್ ನೀಡಿತು.