ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಹಿಮಾಚಲ ಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು

ಇತ್ತೀಚಿನ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದ ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ ಹಿಮಾಚಲ ಪ್ರದೇಶ ವಿಧಾನಸಭಾ ಸ್ಪೀಕರ್ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಾರ್ಚ್‌ನಲ್ಲಿ ನಿರಾಕರಿಸಿತ್ತು.
Supreme Court with Congress and BJP symbols
Supreme Court with Congress and BJP symbols
Published on

ಬಿಜೆಪಿಗೆ ಸೇರ್ಪಡೆಗೊಂಡಿದ್ದ ಕಾಂಗ್ರೆಸ್‌ನ ಆರು ಮಾಜಿ ಶಾಸಕರು ಶುಕ್ರವಾರ ಹಿಮಾಚಲ ಪ್ರದೇಶ ವಿಧಾನಸಭೆಯಿಂದ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮನವಿಯನ್ನು ಹಿಂಪಡೆದಿದ್ದಾರೆ [ಚೈತನ್ಯ ಶರ್ಮಾ ಮತ್ತಿತರರು ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್‌ ನಡುವಣ ಪ್ರಕರಣ].

ಇತ್ತೀಚಿನ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಬದಲು ಬಿಜೆಪಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿದ ಆರು ರಾಜಕಾರಣಿಗಳನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.

ಕುತೂಹಲಕಾರಿ ಎಂದರೆ, ರಾಜ್ಯಸಭಾ ಚುನಾವಣೆಗೆ ಪಕ್ಷಾಂತರ ವಿರೋಧಿ ಕಾಯಿದೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ಹೇಳಿರುವುದರಿಂದ , ರಾಜ್ಯಸಭಾ ಚುನಾವಣೆಯಲ್ಲಿ ಮಾಡಲಾದ ಅಡ್ಡ ಮತದಾನ ಸಂವಿಧಾನದ ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಪಕ್ಷಾಂತರ ವಿರೋಧಿ ಕಾಯಿದೆಗೆ ಅನ್ವಯಿಸದು ಎಂದು ಸ್ಪೀಕರ್‌ ಹೇಳಿದ್ದರು.

ಆದ್ದರಿಂದ, ವಿಪ್ (ರಾಜಕೀಯ ಪಕ್ಷದ ಅಧಿಕೃತ ಸೂಚನೆಯು ಹಾಜರಿರಲು ಅಥವಾ ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸಲು ಸೂಚಿಸುವ ಆದೇಶ)  ಜಾರಿಯ ಹೊರತಾಗಿಯೂ ಸದನದಲ್ಲಿ ಹಾಜರಿರಲು ವಿಫಲವಾದ ಕಾರಣಕ್ಕೆ ಸ್ಪೀಕರ್ ಅವರು ಅನರ್ಹತೆ ಆದೇಶ ಹೊರಡಿಸಿದ್ದರೇ ವಿನಾ ಅಡ್ಡ ಮತದಾನಕ್ಕಾಗಿ ಅಲ್ಲ.

ಚೈತನ್ಯ ಶರ್ಮಾ, ದೇವೀಂದರ್ ಕುಮಾರ್ (ಭುಟ್ಟೋ), ಇಂದರ್ ದತ್ ಲಖನ್‌ಪಾಲ್‌, ರಾಜೀಂದರ್‌ ರಾಣಾ, ರವಿ ಠಾಕೂರ್ ಮತ್ತು ಸುಧೀರ್ ಶರ್ಮಾ ತಮ್ಮ ಅನರ್ಹತೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಜಂಟಿ ಅರ್ಜಿಯನ್ನು ಕಳೆದ ಶುಕ್ರವಾರ ಹಿಂಪಡೆಯಲು ಮುಂದಾಗಿದ್ದರು.

ಮಾರ್ಚ್ 18 ರಂದು ಸ್ಪೀಕರ್ ತೀರ್ಮಾನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರೆಲ್ಲಾ ಮಾರ್ಚ್ 23ರಂದು  ಬಿಜೆಪಿಗೆ ಸೇರಿದ್ದರು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಶುಕ್ರವಾರ ಬಂಡಾಯ ಶಾಸಕರ ಮನವಿಗೆ ಸಮ್ಮತಿಸಿ ಅವರ ಮನವಿಯನ್ನು ಹಿಂಪಡೆಯಲು ಅನುವಾಗುವಂತೆ ವಜಾಗೊಳಿಸಿತು.

Kannada Bar & Bench
kannada.barandbench.com