ಬಿಜೆಪಿ ಅಭ್ಯರ್ಥಿಗೆ ಮತ: ಅನರ್ಹತೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಹಿಮಾಚಲ ಪ್ರದೇಶದ ಕಾಂಗ್ರೆಸ್ ಶಾಸಕರು

ಫೆಬ್ರವರಿ 27ರಂದು ನಡೆದ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನ ಆರು ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಸೋತಿದ್ದರು.
ಕಾಂಗ್ರೆಸ್ ಮತ್ತು ಬಿಜೆಪಿ ಚಿಹ್ನೆ ಹಾಗೂ ಸುಪ್ರೀಂ ಕೋರ್ಟ್
ಕಾಂಗ್ರೆಸ್ ಮತ್ತು ಬಿಜೆಪಿ ಚಿಹ್ನೆ ಹಾಗೂ ಸುಪ್ರೀಂ ಕೋರ್ಟ್

ಹಿಮಾಚಲ ಪ್ರದೇಶ ವಿಧಾನಸಭೆಯ ಸ್ಪೀಕರ್‌ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಇತ್ತೀಚೆಗೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಚೈತನ್ಯ ಶರ್ಮಾ, ದವೀಂದರ್ ಕುಮಾರ್ (ಭುಟ್ಟೋ), ಇಂದರ್ ದತ್ ಲಖನ್‌ಪಾಲ್‌, ರಾಜೀಂದರ್‌ ರಾಣಾ, ರವಿ ಠಾಕೂರ್ ಮತ್ತು ಸುಧೀರ್ ಶರ್ಮಾ ತಮ್ಮ ಅನರ್ಹತೆಯ ವಿರುದ್ಧ ಜಂಟಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣ ಬಾಕಿ ಇರುವಾಗ ಸ್ಪೀಕರ್ ನಿರ್ಧಾರಕ್ಕೆ ತಡೆ ನೀಡುವಂತೆ ಅವರು ಪ್ರಾರ್ಥಿಸಿದ್ದಾರೆ. ಮಾರ್ಚ್ 5ರಂದು ಅರ್ಜಿ ಸಲ್ಲಿಸಲಾಗಿದ್ದು ರಿಜಿಸ್ಟ್ರಿ ಇನ್ನೂ ಅದನ್ನು ವಿಚಾರಣೆಗೆ ಪಟ್ಟಿ ಮಾಡಿಲ್ಲ.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರ ಸೋಲಿಗೆ ಅಡ್ಡ ಮತದಾನವಾದ ಕೂಡಲೇ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಹರ್ಷವರ್ಧನ್ ಚೌಹಾಣ್ ಅವರು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಆರು ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.

ಸ್ಪೀಕರ್ ಕುಲದೀಪ್ ಪಠಾನಿಯಾ ಅವರು ಶಾಸಕರನ್ನು ಅಡ್ಡ ಮತದಾನಕ್ಕಾಗಿ ಅನರ್ಹಗೊಳಿಸದೆ, ಪಕ್ಷ ವಿಪ್ ನೀಡಿದ್ದರೂ ಸದನಕ್ಕೆ ಗೈರು ಹಾಜರಾಗಿದ್ದಕ್ಕಾಗಿ ಶಾಸಕರನ್ನು ಅನರ್ಹಗೊಳಿಸಿದ್ದರು.

ಹಿಮಾಚಲ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ "ಅಸಾಧಾರಣ ಪರಿಸ್ಥಿತಿ" ಯನ್ನು ಗಮನದಲ್ಲಿಟ್ಟುಕೊಂಡು ಅನರ್ಹತೆ ಅರ್ಜಿಯ ಬಗ್ಗೆ ತುರ್ತು ನೋಟಿಸ್ ನೀಡುವುದು ಸೂಕ್ತವೆಂದು ಪರಿಗಣಿಸಲಾಗಿದೆ ಎಂದು ಸ್ಪೀಕರ್ ಫೆಬ್ರವರಿ 29ರ ಆದೇಶದಲ್ಲಿ ದಾಖಲಿಸಿದ್ದರು. ಅರ್ಜಿಗೆ ಪ್ರತಿಕ್ರಿಯಿಸಲು ಆರು ಶಾಸಕರು ಹೆಚ್ಚುವರಿ ಸಮಯವನ್ನು ಕೋರಿದ ಮನವಿಯನ್ನು ತಿರಸ್ಕರಿಸಲಾಗಿತ್ತು.

ಫೆಬ್ರವರಿ 27 ಮತ್ತು 28 ರಂದು ಶಾಸಕರು ಸದನದಿಂದ ಗೈರುಹಾಜರಾದ ಬಗ್ಗೆ, ಅವರು ವಿಪ್ ಪಡೆದಿಲ್ಲ ಎಂದು ಭಾವಿಸಿದರೂ, ಕಾಂಗ್ರೆಸ್ ಟಿಕೆಟ್‌ ಪಡೆದು ಆಯ್ಕೆಯಾದ ಶಾಸಕರು ಬಜೆಟ್ ಮೇಲಿನ ಮತದಾನದಲ್ಲಿ ಸರ್ಕಾರವನ್ನು ಬೆಂಬಲಿಸಲು ಬದ್ಧರಾಗಿದ್ದಾರೆ ಎಂದು ಸ್ಪೀಕರ್ ಅಭಿಪ್ರಾಯಪಟ್ಟಿದ್ದರು. 

"ಆಯವ್ಯಯದ (ಬಜೆಟ್‌) ಮೇಲಿನ ಮತದಾನ ಎನ್ನುವುದು ಸರ್ಕಾರದ ಅತ್ಯಂತ ಪ್ರಮುಖ ಕೆಲಸವಾಗಿದೆ. ಒಂದೊಮ್ಮೆ ಸರ್ಕಾರವು ಆಯವ್ಯಯಕ್ಕೆ ಅನುಮೋದನೆ ಪಡೆಯುವಲ್ಲಿ ವಿಫಲವಾದರೆ ಅದು ಸರ್ಕಾರಕ್ಕೆ ಎದುರಾಗಿರುವ ವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ಇತರೆ ಶಬ್ಧಗಳಲ್ಲಿ ವಿವರಿಸುವುದಾದರೆ, ಬಜೆಟ್‌ ಮೇಲಿನ ಮತದಾನ ಎನ್ನುವುದು ವಿಶ್ವಾಸಯಾಚನೆಯಂತೆ," ಎಂದು ಅವರು ವಿವರಿಸಿದ್ದರು.

ಮುಂದುವರೆದು, ಆಯವ್ಯದಂತಹ ಮಹತ್ವದ ಮತದಾನದ ವಿಚಾರಗಳು ಎದುರಾದಾಗ ಪಕ್ಷವೊಂದರ ಶಾಸಕರು ವ್ಹಿಪ್‌ ನೀಡಿಕೆ ಮುಂತಾದ ಪ್ರಕ್ರಿಯಾತ್ಮಕ ವಿಧಾನಗಳ ಹಿಂದೆ ಅಡಗಿ ಕೂರಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಆರು ಶಾಸಕರು ಅನರ್ಹತೆಗೆ ಗುರಿಯಾಗುತ್ತಾರೆಯೇ ಎಂಬ ಕುರಿತಂತೆ ಸ್ಪೀಕರ್, "ಅವರ ಅನುಪಸ್ಥಿತಿ ತಮ್ಮ ರಾಜಕೀಯ ಪಕ್ಷಕ್ಕೆ ನಿಷ್ಠೆ ಹೊಂದಿಲ್ಲ ಮತ್ತು ಕಾಂಗ್ರೆಸ್ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದರು. ಹೀಗಾಗಿ, ಸಂವಿಧಾನದ ಹತ್ತನೇ ಪರಿಚ್ಛೇದದ ಅಡಿಯಲ್ಲಿ ಆರು ಶಾಸಕರನ್ನು ಅನರ್ಹಗೊಳಿಸಲಾಗಿದೆ" ಎಂದು ಸ್ಪೀಕರ್ ತೀರ್ಪು ನೀಡಿದ್ದರು.

ಶಾಸಕರ ಅಡ್ಡ ಮತದಾನದ ಬಗ್ಗೆ, ಸ್ಪೀಕರ್ ತಮ್ಮ ಆದೇಶದಲ್ಲಿ ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಪಕ್ಷಾಂತರ ವಿರೋಧಿ ಕಾನೂನು ಅನ್ವಯಿಸುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪನ್ನು ಪ್ರಶ್ನಿಸಿದ್ದರು. ಇದೇ ವೇಳೆ, ಈ ತೀರ್ಪಿನ ನಂತರ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮೂರು ಸದಸ್ಯರ ಮತ್ತೊಂದು ಪೀಠ ಹತ್ತನೇ ಷೆಡ್ಯೂಲ್‌ ರಾಜ್ಯಸಭಾ ಚುನಾವಣೆಗೆ ಅನ್ವಯಿಸುತ್ತದೆ ಎಂದು ಹೇಳಿದ್ದರೊಂದಿಗೆ ತಾವು ಹೆಚ್ಚಿನ ಸಹಮತ ಹೊಂದಿರುವುದಾಗಿ ಅವರು ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com