ಅದಾನಿ ಸಮೂಹದ ಬಗ್ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸತ್ಯ ಮರೆ ಮಾಚಿದ್ದು ಸಂಘಟಿತ ಲಾಭಕ್ಕಾಗಿ ಕಾಯಿದೆಯನ್ನು ಮಾರ್ಪಡಿಸಲಾಗಿದೆ ಎಂದು ಅದಾನಿ ಸಮೂಹದ ಕಂಪನಿಗಳ ಕುರಿತಂತೆ ನೀಡಲಾದ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಪ್ರಕರಣದ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಆದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) 2014ರಲ್ಲಿ ನೀಡಿದ್ದ ಎಚ್ಚರಿಕೆಯನ್ನು ಸೆಬಿ ನಿರ್ಲಕ್ಷಿಸಿದ ಪರಿಣಾಮ ಷೇರು ಬೆಲೆಗಳನ್ನು ಅಕ್ರಮ ಮಾರ್ಗದ ಮೂಲಕ ಹೆಚ್ಚಿಸುವ ಮೂಲಕ ಅದಾನಿ ಸಂಸ್ಥೆ ₹ 2,323 ಕೋಟಿ ರೂ ಮೊತ್ತದ ವಂಚನೆ ಎಸಗಲು ಸಾಧ್ಯವಾಯಿತು ಎಂದು ಅರ್ಜಿದಾರರಲ್ಲಿ ಒಬ್ಬರಾದ ಅನಾಮಿಕಾ ಜೈಸ್ವಾಲ್ ಅವರು ಸಲ್ಲಿಸಿರುವ ಹೊಸ ಅಫಿಡವಿಟ್‌ತಿಳಿಸಿದೆ.
ಹೊಸ ಅಫಿಡವಿಟ್‌ನ ಪ್ರಮುಖಾಂಶಗಳು
ನ್ಯಾಯಾಲಯಕ್ಕೆ ಸೆಬಿ ಪ್ರಮುಖ ಮಾಹಿತಿಗಳನ್ನು ಮರೆಮಾಚಿದೆ.
ಡಿಆರ್‌ಐ ಎಚ್ಚರಿಕೆ ಆಧರಿಸಿ ಸೆಬಿ ಎಂದಿಗೂ ತನಿಖೆ ನಡೆಸಲಿಲ್ಲ ಎಂಬುದು ಆಘಾತಕಾರಿ.
ಅದಾನಿ ವಿರುದ್ಧ ತನಿಖೆ ಮಾಡಲು ಸೆಬಿಗೆ ಹಿತಾಸಕ್ತಿ ಸಂಘರ್ಷ ಎದುರಾಗಿದೆ.
ಸಿರಿಲ್ ಅಮರ್‌ಚಂದ್ ಮಂಗಲ್‌ದಾಸ್ ಕಾನೂನು ಸಂಸ್ಥೆಯ ಸಂಸ್ಥಾಪಕರಾದ ಸಿರಿಲ್ ಶ್ರಾಫ್ ಅವರ ಮಗಳು ಗೌತಮ್ ಅದಾನಿ ಅವರ ಪುತ್ರನನ್ನು ಮದುವೆಯಾಗಿದ್ದು ಸಿರಿಲ್ ಅವರು ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿದ ಸೆಬಿ ಸಮಿತಿಯ ಭಾಗವಾಗಿದ್ದಾರೆ.
ಸೆಬಿ ಕಾಯಿದೆಗೆ ಬದಲಾವಣೆಗಳನ್ನು ತಂದಿದ್ದರಿಂದಾಗಿ ಅದಾನಿ ಸಮೂಹಕ್ಕೆ ರಕ್ಷಣೆ ಮತ್ತು ನೆವ ದೊರೆತಂತಾಗಿದೆ.
ಡಿಆರ್‌ಐ ಎಚ್ಚರಿಕೆಗಳನ್ನು 2014ರಲ್ಲಿ, ನಿರ್ಲಕ್ಷಿಸಿದ್ದ ಸೆಬಿ ಮುಖ್ಯಸ್ಥ ಉಪೇಂದ್ರ ಸಿನ್ಹಾ ಅವರು ಈಗ ಅದಾನಿ ಸಮೂಹ ಒಡೆತನದ ಸುದ್ದಿವಾಹಿನಿ ನ್ಯೂಡೆಲ್ಲಿ ಟೆಲಿವಿಷನ್ (ಎನ್‌ಡಿಟಿವಿ) ನಿರ್ದೇಶಕರಾಗಿದ್ದಾರೆ.
ಆದ್ದರಿಂದ ಅದಾನಿ ಸಮೂಹದ ವಿರುದ್ಧ ಸೆಬಿ ನೀಡಿರುವ 24 ತನಿಖಾ ವರದಿಗಳನ್ನು ಬಹಿರಂಗಗೊಳಿಸಬೇಕು.
ಷೇರು ಬೆಲೆಗಳನ್ನು ಅಕ್ರಮ ಮಾರ್ಗದ ಮೂಲಕ ಹೆಚ್ಚಿಸುವ ಮೂಲಕ ಅದಾನಿ ಸಂಸ್ಥೆ ವಂಚನೆ ಎಸಗಿದೆ ಎಂದು ಆರೋಪಿಸಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ್ದ ವರದಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಹಿಂಡೆನ್ ಬರ್ಗ್ ನೀಡಿದ ವರದಿಯಿಂದಾಗಿ ಅದಾನಿ ಕಂಪೆನಿಗಳ ಮೌಲ್ಯ 100 ಬಿಲಿಯನ್ ಡಾಲರ್ ಕುಸಿತ ಕಂಡಿತ್ತು.