ಹಿಂಡೆನ್‌ಬರ್ಗ್ ವರದಿ: ಷೇರು ಉಲ್ಲಂಘನೆಗಳು ಹೆಚ್ಚು ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಸೆಬಿ
ಅದಾನಿ ಸಮೂಹ ಸಂಸ್ಥೆಗಳ ಷೇರು ನಿಯಮ ಉಲ್ಲಂಘನೆ ಆರೋಪ ಕುರಿತು ಹಿಂಡೆನ್ ಬರ್ಗ್ ಬಹಿರಂಗಪಡಿಸಿದ್ದ ವರದಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೇಮಿಸಿದ್ದ ತಜ್ಞರ ಸಮಿತಿ ಮಾಡಿದ್ದ ವಿವಿಧ ಶಿಫಾರಸುಗಳಿಗೆ ಪ್ರತಿಕ್ರಿಯೆ ನೀಡಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿದೆ [ವಿಶಾಲ್ ತಿವಾರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ತಜ್ಞರ ಸಮಿತಿತನ್ನ ವರದಿಯಲ್ಲಿ ಸುಮಾರು ಒಂಬತ್ತು ಶಿಫಾರಸುಗಳನ್ನು ಮಾಡಿದೆ. ತಜ್ಞರ ಸಮಿತಿ ಎತ್ತಿರುವ ವಿಚಾರಗಳಿಗೆ ತಾನು ಪ್ರತಿಕ್ರಿಯೆ ನೀಡುವುದಾಗಿ ಸೆಬಿ ಸಮರ್ಥಿಸಿಕೊಂಡಿದೆ.
ಪರಿಣಾಮಕಾರಿ ಜಾರಿ ನೀತಿ, ನ್ಯಾಯಾಂಗ ಶಿಸ್ತು, ದೃಢವಾದ ಇತ್ಯರ್ಥ ನೀತಿ, ಕಣ್ಗಾವಲು ಮತ್ತು ಷೇರು ಮಾರುಕಟ್ಟೆ ಆಡಳಿತದಲ್ಲಿ ಮಾನವ ಪಕ್ಷಪಾತ ಕಡಿಮೆ ಮಾಡುವ ಅಗತ್ಯತೆ ಹಾಗೂ ಸೆಬಿಯ ಅರೆ ನ್ಯಾಯಾಂಗ ಅಂಶವನ್ನು ಇನ್ನಷ್ಟು ಸದೃಢಗಳಿಸುವುದೂ ಸೇರಿದಂತೆ ತಜ್ಞರ ಸಮಿತಿ ವಿವಿಧ ಶಿಫಾರಸುಗಳನ್ನು ಮಾಡಿತ್ತು.
ಆದರೂ ವಿಚಾರಣೆ ಅಥವಾ ತೀರ್ಪುಗಳಲ್ಲಿ ಕಾಲಮಿತಿ ಅಗತ್ಯದಂತಹ ಕೆಲವು ಶಿಫಾರಸುಗಳನ್ನು ಜಾರಿಗೊಳಿಸುವುದು ಪ್ರಾಯೋಗಿಕವಾಗಿ ಸಾಧ್ಯವಾಗಲಾರದು ಎಂದು ಷೇರುಪೇಟೆ ಮಾರುಕಟ್ಟೆ ನಿಯಂತ್ರಕವಾದ ಸೆಬಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ. ಅಲ್ಲದೆ, ತಜ್ಞರ ಸಮಿತಿಯು ಹೇಳಿರುವಂತೆ ಷೇರು ಉಲ್ಲಂಘನೆ ಪ್ರಕರಣಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿಲ್ಲ ಎಂದು ಅದು ಸಕಾರಣ ವಿವರಿಸಿದೆ.
ಹಣಕಾಸು ಪರಿಹಾರ ಏಜೆನ್ಸಿ ಮತ್ತು ಕೇಂದ್ರ ಹಕ್ಕು ಪಡೆಯದ ಆಸ್ತಿ ಏಜೆನ್ಸಿಯನ್ನು ರಚಿಸುವ ಸಲಹೆಯನ್ನು ಒಳಗೊಂಡ ಮೂರನೇ ವರ್ಗದ ಶಿಫಾರಸುಗಳಿಗೆ ಪ್ರತಿಕ್ರಿಯೆ ನೀಡಿರುವ ಸೆಬಿ ಈ ಪ್ರಸ್ತಾವನೆಗಳು ಹಿಂಡೆನ್‌ಬರ್ಗ್-ಅದಾನಿ ಪ್ರಕರಣಕ್ಕೆ ಸಂಬಂಧಿಸಿಲ್ಲ ಮತ್ತು ಬಹು ನಿಯಂತ್ರಕರನ್ನು ಒಳಗೊಂಡಿವೆ ಎಂದು ಹೇಳಿದೆ. ಹಾಗಾಗಿ, ಅಂತಹ ಸಲಹೆಗಳಿಗೆ ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆಯನ್ನು ತಾನು ನೀಡುತ್ತಿಲ್ಲ ಎಂದು ಅದು ತಿಳಿಸಿದೆ.
ಅದಾನಿ ಕಂಪೆನಿಗಳಿಗೆ ಸಂಬಂಧಿಸಿದಂತೆ ಹಿಂಡೆನ್‌ಬರ್ಗ್ ನೀಡಿದ್ದ ಸಂಶೋಧನಾ ವರದಿ ಸುತ್ತಲಿನ ವಿವಾದ ಮತ್ತು ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಅದಾನಿ ಕಂಪೆನಿ ತನ್ನ ಷೇರು ಮೌಲ್ಯ ಹೆಚ್ಚಿಸುವ ಮೂಲಕ ವಂಚಿಸಿದೆ ಎಂದು ಹಿಂಡೆನ್‌ಬವರ್ಗ್ ವರದಿ ಆರೋಪಿಸಿತ್ತು. ವರದಿ ಪರಿಣಾಮ ಅದಾನಿ ಸಮೂಹದ ಷೇರು ಮೌಲ್ಯಗಳಲ್ಲಿ ಕುಸಿತ ಉಂಟಾಗಿ ಸಮೂಹ, 100 ಶತಕೋಟಿ ಡಾಲರ್ ಹಣ ಕಳೆದುಕೊಂಡಿತ್ತು.
ಈ ಮಧ್ಯೆ ಸಾರ್ವಜನಿಕರು ತಿಳಿದುಕೊಂಡಂತೆ ಅದಾನಿ ಅವರಿಗೆ ಯಾವುದೇ ಕ್ಲೀನ್‌ಚಿಟ್ ದೊರೆತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ಹೆಚ್ಚಿನ ತನಿಖೆ ನಡೆಸಬೇಕು ಎಂದು ಅರ್ಜಿದಾರರಾಗಿರುವ ವಕೀಲ ವಿಶಾಲ್ ತಿವಾರಿ ತಿಳಿಸಿದ್ದಾರೆ.