Adani and Supreme Court
Adani and Supreme Court

ಅದಾನಿ ಸಮೂಹದ ವಿರುದ್ಧದ ಹಿಂಡೆನ್‌ಬರ್ಗ್‌ ವರದಿ: ಹೂಡಿಕೆದಾರರ ಲಕ್ಷಾಂತರ ಕೋಟಿ ನಷ್ಟಕ್ಕೆ ಸುಪ್ರೀಂ ಕೋರ್ಟ್‌ ಕಳವಳ

ಭವಿಷ್ಯದಲ್ಲಿ ಭಾರತದ ಹೂಡಿಕೆದಾರರ ಹಿತ ಕಾಯುವ ನಿಟ್ಟಿನಲ್ಲಿ ಕ್ರಮಗಳನ್ನು ಸೂಚಿಸುವಂತೆ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿದೆ.

ಅಮೆರಿಕದ ಹಿಂಡೆನ್‌ಬರ್ಗ್‌ ಸಂಸ್ಥೆಯು ಅದಾನಿ ಸಮೂಹದ ವಿರುದ್ಧ ಸಂಶೋಧನಾ ವರದಿ ಪ್ರಕಟಿಸಿದ ಬೆನ್ನಿಗೇ ಅದಾನಿ ಸಮೂಹದ ಷೇರುಗಳ ಬೆಲೆಯು ವ್ಯಾಪಕವಾಗಿ ಕುಸಿದಿದ್ದರಿಂದ ಭಾರತದ ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ [ಮನೋಹರ್‌ ಲಾಲ್‌ ಶರ್ಮಾ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು].

ಭವಿಷ್ಯದಲ್ಲಿ ಭಾರತದ ಹೂಡಿಕೆದಾರರ ಹಿತ ಕಾಯುವ ನಿಟ್ಟಿನಲ್ಲಿ ಕ್ರಮಗಳನ್ನು ಸೂಚಿಸುವಂತೆ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿಗೆ (ಸೆಬಿ) ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಆದೇಶಿಸಿದೆ.

“ಭಾರತದ ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂಪಾಯಿಗಳು ನಷ್ಟವಾಗಿದೆ ಎಂದು ಹೇಳಾಗಿದೆ… ಹತ್ತು ಲಕ್ಷ ಕೋಟಿ ರೂಪಾಯಿ ಎನ್ನಲಾಗಿದೆ… ಮುಂದೆ ಈ ರೀತಿ ಆಗದಂತೆ ಖಾತರಿಪಡಿಸುವುದು ಹೇಗೆ? ಭವಿಷ್ಯದಲ್ಲಿ ಸೆಬಿ ಪಾತ್ರ ಯಾವ ರೀತಿಯಲ್ಲಿ ಇರಲಿದೆ” ಎಂದು ಸಿಜೆಐ ಪ್ರಶ್ನಿಸಿದರು.

ಮುಂದುವರೆದು ಪೀಠವು, ಪ್ರಸಕ್ತ ಇರುವ ವ್ಯವಸ್ಥೆಯನ್ನು ಹೇಗೆ ಸದೃಢಗೊಳಿಸಬಹುದು ಎಂದು ಮುಂದಿನ ಸೋಮವಾರದೊಳಗೆ ಪ್ರತಿಕ್ರಿಯೆಯಲ್ಲಿ ಸಲ್ಲಿಸುವಂತೆ ಸೆಬಿಗೆ ಸೂಚಿಸಿತು.

“ಹಾಲಿ ಇರುವ ನಿಯಂತ್ರಣ ವ್ಯವಸ್ಥೆಯ ಚೌಕಟ್ಟು, ಸಂಬಂಧಿತ ಪರಿಣಾಮಾತ್ಮಕ ವಿಚಾರಗಳು, ಹೂಡಿಕೆದಾರರ ಹಿತ ಕಾಯುವ ನಿಟ್ಟಿನಲ್ಲಿ ದೃಢವಾದ ವ್ಯವಸ್ಥೆಯ ಅಗತ್ಯತೆಯ ಕುರಿತಾದ ವಿಷಯಗಳನ್ನು ಆಕ್ಷೇಪಣೆಯು ಒಳಗೊಳ್ಳಬಹುದು ಎಂದಿತು. ಸಲಹೆಗಳನ್ನು ಕೇಂದ್ರ ಸರ್ಕಾರವು ಒಪ್ಪಲು ಸಿದ್ಧವಾದರೆ ಸಮಿತಿಯು ಅಗತ್ಯ ಶಿಫಾರಸ್ಸುಗಳನ್ನು ಮಾಡಬಹುದು. ಮುಂದಿನ ಸೋಮವಾರದ ವೇಳೆಗೆ ಸಂಕ್ಷಿಪ್ತವಾಗಿ ಕಾನೂನು ಮತ್ತು ವಾಸ್ತವಿಕ ವಿಚಾರಗಳ ಮಾಹಿತಿಯನ್ನು ಸಾಲಿಸಿಟರ್‌ ಜನರಲ್‌ ಅವರು ಸಲ್ಲಿಸಬಹುದು” ಎಂದು ಪೀಠ ಆದೇಶಿಸಿತು.

ಸೆಬಿ ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಪ್ರಕರಣದ ಪ್ರಚೋದನಾ ಬಿಂದು ಭಾರತದ ಹೊರಗೆ ನಡೆದಿದೆ ಎಂದರು. ಇದಕ್ಕೆ ಸಿಜೆಐ ಅವರು “ಇಂದು ಅನಿಯಂತ್ರಿತವಾಗಿ ಬಂಡವಾಳ ಹರಿದುಬರುತ್ತಿದೆ. ಹೂಡಿಕೆದಾರರನ್ನು ರಕ್ಷಿಸುವುದನ್ನು ಹೇಗೆ ಖಾತರಿಪಡಿಸುತ್ತೀರಿ. ಇಂದು ಸಣ್ಣ ಅಥವಾ ದೊಡ್ಡಮಟ್ಟದಲ್ಲಿ ಎಲ್ಲರೂ ಹೂಡಿಕೆದಾರರಾಗಿದ್ದಾರೆ” ಎಂದರು.

Also Read
ಅದಾನಿ ವಿರುದ್ಧ ಹಿಂಡನ್‌ಬರ್ಗ್‌ ವರದಿ: ಆಂಡರ್ಸನ್‌ ವಿರುದ್ಧ ತನಿಖೆಗೆ ಆದೇಶಿಸಲು ಕೋರಿ ಸುಪ್ರೀಂ ಕದತಟ್ಟಿದ ಶರ್ಮಾ

ಆಗ ಎಸ್‌ಜಿ ಮೆಹ್ತಾ ಅವರು “ಘಟನೆಗೆ ಸದ್ಯಕ್ಕೆ ಉತ್ತರಿಸುವುದು ದುಡುಕಿನ ನಿರ್ಧಾರವಾಗಬಹುದು. ಆದರೆ, ಭಾರತದ ನ್ಯಾಯಿಕ ವ್ಯಾಪ್ತಿಯಿಂದ ಹೊರಗಿರುವ ಸಂಸ್ಥೆ ಪ್ರಕಟಿಸಿರುವ ವರದಿ ಪ್ರಚೋದನಾ ಬಿಂದುವಾಗಿದೆ” ಎಂದರು.

ಆಗ ಪೀಠವು, "ಪ್ರಸ್ತುತ ಇರುವ ವ್ಯವಸ್ಥೆ ಏನು, ಅದನ್ನು ಹೇಗೆ ಬಲಪಡಿಸಬಹುದು ಎನ್ನುವುದನ್ನು ನೀವು ನಮಗೆ ತೋರಿಸಬಹುದು. ತಜ್ಞರನ್ನು ಒಳಗೊಂಡ ಪರಿಣತ ಸಮಿತಿಯೊಂದರ ಬಗ್ಗೆಯೂ ನಾವು ಚಿಂತಿಸಬಹುದು. ಭದ್ರತಾ ಪತ್ರಗಳ ವ್ಯವಹಾರದಲ್ಲಿನ ತಜ್ಞರ ಅನುಭವ, ನಿವೃತ್ತ ನ್ಯಾಯಮೂರ್ತಿಗಳ ವಿವೇಕ, ಅಂತಾರಾಷ್ಟ್ರೀಯ ಹಣಕಾಸು ತಜ್ಞರ ಅಭಿಮತ ಇತ್ಯಾದಿಗಳನ್ನು ಒಳಗೊಳ್ಳಬಹುದು. ಸೆಬಿಗೆ ಇನ್ನೂ ಹೆಚ್ಚಿನ ಪಾತ್ರವನ್ನು ನೀಡಬಹುದು. ಬಂಡವಾದ ಹರಿವು ಸರಾಗಗೊಳಿಸುವ ದೃಷ್ಟಿಯಿಂದ ಸೆಬಿಯು ತನಗಿರುವ ಅಧಿಕಾರ ಹಾಗೂ ಹೇಗೆ ಅದನ್ನು ಮತ್ತಷ್ಟು ಸುಧಾರಿಸಬಹುದು ಎನ್ನುವ ಬಗ್ಗೆಯೂ ವಿಷದವಾಗಿ ತಿಳಿಸಬಹುದು," ಎಂದು ವಿವರಿಸಿತು

ಇತ್ತೀಚಿನ ಎರಡು ವಾರಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಕಂಡುಬಂದಿರುವ ಹಠಾತ್ ಚಂಚಲತೆಯಿಂದ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲು ದೇಶದೊಳಗಿನ ನಿಯಂತ್ರಕ ಕಾರ್ಯವಿಧಾನವನ್ನು ಸರಿಯಾಗಿ ಬಲಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಾಲಿಸಿಟರ್‌ ಜನರಲ್‌ ಅವರಿಗೆ ನಮ್ಮ ಕಳಕಳಿಯನ್ನು ತೋರಿದ್ದೇವೆ ಎಂದು ಪೀಠವು ಆದೇಶದಲ್ಲಿ ಹೇಳಿದ್ದು, ಸೆಬಿಗೆ ಪತ್ರಿಕ್ರಿಯೆ ಸಲ್ಲಿಸಲು ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com