ಅದಾನಿ ಕಂಪೆನಿಗಳ ತನಿಖೆ 2016ರಿಂದಲೂ ನಡೆದಿಲ್ಲ, ವರದಿ ಸಲ್ಲಿಕೆಗೆ 6 ತಿಂಗಳು ಬೇಕು ಎಂದು ಸುಪ್ರೀಂಗೆ ತಿಳಿಸಿದ ಸೆಬಿ

ಸಂಘಟಿತ ಸಂಸ್ಥೆಗಳ ವ್ಯವಹಾರಗಳ ತನಿಖೆ ಅತ್ಯಂತ ಸಂಕೀರ್ಣವಾಗಿರುವುದರಿಂದ ತನಿಖೆಗೆ ಅಧಿಕ ಸಮಯ ಅಗತ್ಯವಿದೆ ಎಂದು ಸೆಬಿ ಮನವಿ ಮಾಡಿದೆ.
Hindenburg research, Adani and Supreme Court
Hindenburg research, Adani and Supreme Court
Published on

ಈ ಹಿಂದೆಯೇ ತಿಳಿಸಿರುವಂತೆ 2016ರಿಂದ ಅದಾನಿ ಸಮೂಹದ ಯಾವುದೇ ಕಂಪೆನಿಗಳನ್ನು ತನಿಖೆ ಮಾಡಿಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೋಮವಾರ ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ವಿಶಾಲ್‌ ತಿವಾರಿ ಮತ್ತು ಭಾರತ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತಾನು 2016 ರಿಂದ ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಬಗ್ಗೆ ತನಿಖೆ ನಡೆಸುತ್ತಿದ್ದೇನೆ ಎಂಬ ಆರೋಪ ವಾಸ್ತವಿಕವಾಗಿ ಆಧಾರರಹಿತವಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿತು.

ಸಂಘಟಿತ ಸಂಸ್ಥೆಗಳ ವ್ಯವಹಾರಗಳ  ತನಿಖೆ ಅತ್ಯಂತ ಸಂಕೀರ್ಣವಾಗಿರುವುದರಿಂದ ತನಿಖೆಗೆ ಅಧಿಕ ಸಮಯ ಅಗತ್ಯವಿದೆ ಎಂದು ಸೆಬಿ ಮನವಿ ಮಾಡಿದೆ.

ಹಿಂಡೆನ್‌ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾದ ಹನ್ನೆರಡು ವಹಿವಾಟುಗಳಿಗೆ ಸಂಬಂಧಿಸಿದ ತನಿಖೆಯು ವಿವಿಧ ಅಧಿಕಾರ ವ್ಯಾಪ್ತಿಯ ಅನೇಕ ಉಪ ವ್ಯವಹಾರಗಳನ್ನು ಒಳಗೊಂಡಿದೆ. ಈ ವಹಿವಾಟುಗಳ ಕಟ್ಟುನಿಟ್ಟಿನ ತನಿಖೆಗೆ ಪೂರಕ ದಾಖಲೆಗಳೊಂದಿಗೆ ಮೂಲ ಮಾಹಿತಿಯನ್ನು ಒಗ್ಗೂಡಿಸುವ ಅಗತ್ಯವಿದೆ. ಆ ಬಳಿಕ ವಿಶ್ಲೇಷಣೆ ನಡೆಸಿ ನಿರ್ಣಾಯಕ ಸಂಗತಿಗಳಿಗೆ ಬರಲಾಗುವುದು ಎಂದು ಸೆಬಿ ಹೇಳಿದೆ. ಹೀಗಾಗಿ ತನಿಖೆಗೆ ಇನ್ನೂ ಆರು ತಿಂಗಳ ಕಾಲಾವಕಾಶ ಬೇಕು ಎಂದು ತಿಳಿಸಿದೆ.

Also Read
ಅದಾನಿ ವಿರುದ್ಧದ ಹಿಂಡೆನ್‌ಬರ್ಗ್‌ ವರದಿ: ತಜ್ಞರ ಸಮಿತಿ ವರದಿ ಸ್ವೀಕರಿಸಿದ ಸುಪ್ರೀಂ ಕೋರ್ಟ್‌

ಅದಾನಿ ಸಮೂಹ ಕಂಪನಿಗಳ ಬಗ್ಗೆ ಹಿಂಡೆನ್‌ಬರ್ಗ್ ನಡೆಸಿದ ಸಂಶೋಧನಾ ವರದಿಯ ಸುತ್ತಲಿನ ವಿವಾದ ಮತ್ತು ಸಂಘಟಿತ ಸಂಸ್ಥೆ ವಿರುದ್ಧದ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಸೆಬಿಗೆ ಕೇವಲ ಮೂರು ತಿಂಗಳ ಕಾಲಾವಕಾಶ ನೀಡಲು ನ್ಯಾಯಾಲಯ ಶುಕ್ರವಾರ ಮುಂದಾಗಿತ್ತು.

ತನಿಖೆ ಮುಂದುವರಿಸಲು ಸೆಬಿಗೆ ಮಾರ್ಚ್ 2 ರಂದು ನೀಡಿದ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಮೇ 2ಕ್ಕೆ ತನಿಖೆ ಪೂರ್ಣಗೊಳ್ಳಬೇಕಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಎಂ ಸಪ್ರೆ ನೇತೃತ್ವದ ಸಮಿತಿ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೆ ಪೂರಕವಾಗಿದೆ ಈ ತನಿಖೆ.

ಷೇರಿನ ಬೆಲೆಗಳನ್ನು ಅಕ್ರಮ ಮಾರ್ಗದ ಮೂಲಕ ಹೆಚ್ಚಿಸುವ ಮೂಲಕ ಅದಾನಿ ಸಂಸ್ಥೆ ವಂಚನೆ ಎಸಗಿದೆ ಎಂದು ಆರೋಪಿಸಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ್ದ ವರದಿಗೆ ಸಂಬಂಧಿಸಿದಂತೆ ನಾಲ್ಕು ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಹಿಂಡೆನ್‌ ಬರ್ಗ್‌ ನೀಡಿದ ವರದಿಯಿಂದಾಗಿ ಅದಾನಿ ಕಂಪೆನಿಗಳ ಮೌಲ್ಯ 100 ಬಿಲಿಯನ್ ಡಾಲರ್‌ ಕುಸಿತ ಕಂಡಿತು ಎಂದು ವರದಿಯಾಗಿತ್ತು..

Kannada Bar & Bench
kannada.barandbench.com