ಅದಾನಿ ಸಮೂಹ ಕಂಪೆನಿಗಳ ಕುರಿತಂತೆ ಹಿಂಡೆನ್ ಬರ್ಗ್‌ನ ಸಂಶೋಧನಾ ವರದಿ ಹಾಗೂ ಅದರ ಪರಿಣಾಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿದ ಸಲಹೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಮುಚ್ಚಿದ ಲಕೋಟೆಯಲ್ಲಿ ಸರ್ಕಾರದ ಸಲಹೆ ಸ್ವೀಕರಿಸಿದರೆ ಅದು ಸರ್ಕಾರ ನೇಮಿಸಿದ ಸಮಿತಿ ಎಂಬ ಅಭಿಪ್ರಾಯ ಮೂಡುವುದರಿಂದ ನ್ಯಾಯಾಲಯ ತಾನೇ ಸ್ವತಃ ಸಮಿತಿ ನೇಮಿಸಲಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಹೇಳಿದೆ.
ಪ್ರಕರಣ ಸಂಪೂರ್ಣ ಪಾರದರ್ಶಕತೆ ಬೇಡುತ್ತಿದ್ದು ಸರ್ಕಾರದ ಸಲಹೆಯನ್ನು ನ್ಯಾಯಾಲಯ ಸ್ವೀಕರಿಸಿದರೆ, ಅದು ಇನ್ನೊಂದು ಬದಿಯನ್ನು ಕತ್ತಲೆಯಲ್ಲಿಟ್ಟಂತೆ ಆಗುತ್ತದೆ ಎಂದು ನ್ಯಾಯಾಲಯ ಒತ್ತಿ ಹೇಳಿತು. ನಾವು ಸ್ವೀಕರಿಸಿದ ಸಲಹೆ ಪಾರದರ್ಶಕವಾಗಿದೆ ಎಂಬುದು ಇನ್ನೊಂದು ಬದಿಗೆ ತಿಳಿಯಬೇಕು. ಹಾಗಾಗಿ ನಾವೇ ಸಮಿತಿ ಹಾಗೂ ಅದರ ಸದಸ್ಯರನ್ನು ನೇಮಿಸುತ್ತೇವೆ ಎಂದು ಅದು ಹೇಳಿತು.
ತೀರ್ಪು ಕಾಯ್ದಿರಿಸುವ ಮುನ್ನ ಅರ್ಜಿದಾರರ ಅಹವಾಲುಗಳನ್ನು ನ್ಯಾಯಾಲಯ ಆಲಿಸಿತು. ಸಮಸ್ಯೆಯನ್ನು ಪರಿಶೀಲಿಸಲು ಸಮಿತಿಗೆ ಹಾಲಿ ನ್ಯಾಯಮೂರ್ತಿಗಳನ್ನು ನೇಮಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಹಿಂಡೆನ್‌ಬರ್ಗ್ ವರದಿಯಿಂದ ಮಾರುಕಟ್ಟೆ ಮೇಲುಂಟಾಗುವ ಪರಿಣಾಮ ಶೂನ್ಯ ಎಂಬ ಕೇಂದ್ರ ಸರ್ಕಾರದ ವಾದದ ಪರ ಒಲವು ತೋರಲು ಕೂಡ ನ್ಯಾಯಾಲಯ ನಿರಾಕರಿಸಿತು.
ಹಿಂಡೆನ್‌ಬರ್ಗ್ ವರದಿ ಪರಿಣಾಮ ಹಾಗೂ ಅದಾನಿ ಸಮೂಹ 100 ಶತಕೋಟಿ ಡಾಲರ್ ಹಣ ಕಳೆದುಕೊಂಡಿದ್ದಕ್ಕೆ ಸಂಬಂಧಿಸಿದಂತೆ ನಾಲ್ಕು ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ವಕೀಲ ಮನೋಹರ್ ಲಾಲ್ ಶರ್ಮಾ ಅವರ ಮನವಿಯಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥಾಪಕ ನಥಾನ್ ಆಂಡರ್ಸನ್ ಮತ್ತು ಭಾರತದಲ್ಲಿನ ಅವರ ಸಹಚರರ ವಿರುದ್ಧ ತನಿಖೆ ನಡೆಸಲು ಮತ್ತು ಎಫ್‌ಐಆರ್ ದಾಖಲಿಸಲು ಸೆಬಿ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಮತ್ತು ವರ್ಗೀಕೃತ ಕಂಪೆನಿಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಮೊದಲು ತಮ್ಮ ವರದಿಗಳನ್ನು ಸೆಬಿಗೆ ಸಲ್ಲಿಸದೇ ಪ್ರಸಾರ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಬೇಕು ಎಂಬುದಾಗಿ ಕೋರಲಾಗಿದೆ.
ಬ್ಯಾಂಕ್‌ಗಳು ಉದ್ಯಮಿಗಳಿಗೆ ₹ 500 ಕೋಟಿಗೂ ಹೆಚ್ಚಿನ ಸಾಲ ನೀಡುವುದರ ಮೇಲೆ ನಿಗಾ ಇಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ಸಮಿತಿ ರಚಿಸಬೇಕು ಎಂದು ವಕೀಲ ವಿಶಾಲ್ ತಿವಾರಿ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇನ್ನು ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸಲ್ಲಿಸಿರುವ ಅರ್ಜಿಯಲ್ಲಿ, ವಿವಿಧ ಕಾನೂನುಗಳ ಪ್ರಕಾರ ಅದಾನಿ ಸಮೂಹದ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅದಾನಿ ಸಮೂಹದ ಷೇರುಗಳ ಮೇಲೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಜೀವ ವಿಮಾ ನಿಗಮ (ಎಲ್‌ಐಸಿ) ಹೂಡಿಕೆ ಮಾಡಿದ್ದೇಕೆ ಎಂಬ ಕುರಿತು ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ನಿರ್ದೇಶಿಸಬೇಕು ಎಂದು ಕೊರಲಾಗಿದೆ. ಇದೇ ವಿವಾದಕ್ಕೆ ಸಂಬಂಧಿಸಿದಂತೆ ಅನಾಮಿಕಾ ಜೈಸ್ವಾಲ್ ಅವರೂ ಕೂಡ ಅರ್ಜಿ ಸಲ್ಲಿಸಿದ್ದಾರೆ.