ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಹಿಂಡೆನ್‌ಬರ್ಗ್ ಪ್ರಕಟಿಸಿರುವ ಸಂಶೋಧನಾ ವರದಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ನೇತೃತ್ವದ ಸಮಿತಿ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಹೊಸ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ [ವಿಶಾಲ್ ತಿವಾರಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ದೇಶದಲ್ಲಿ ₹ 500 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ಮಂಜೂರಾತಿ ನೀತಿಯ ಮೇಲ್ವಿಚಾರಣೆಗೆ ವಿಶೇಷ ಸಮಿತಿ ರಚಿಸುವಂತೆಯೂ ಪಿಐಎಲ್ ಕೋರಿದೆ.
ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ಷೇರು ಮಾರುಕಟ್ಟೆಯಲ್ಲಿ ಷೇರುಗಳು ಮೌಲ್ಯ ಕಳೆದುಕೊಂಡಾಗ ಜನರು ಎದುರಿಸುವ ಸಂಕಷ್ಟದ ಸ್ಥಿತಿ ಮತ್ತು ಅವರ ಡೋಲಾಯಮಾನವಾಗುವ ಭವಿಷ್ಯದ ಬಗ್ಗೆ ವಿವರಿಸಿದ್ದಾರೆ.
ಅರ್ಜಿಯ ಪ್ರಮುಖಾಂಶಗಳು
ಜೀವಿತಾವಧಿಯಲ್ಲಿ ಕೂಡಿಟ್ಟ ಸಾಕಷ್ಟು ಹಣವನ್ನು ಇಂತಹ (ಅದಾನಿ ಸಮೂಹದ ರೀತಿಯ) ಷೇರುಗಳಲ್ಲಿ ಜನ ವಿನಿಯೋಗಿಸಿರುವುದರಿಂದ, ಈ ರೀತಿಯ ಬೆಳವಣಿಗೆಗಳಾದಾಗ ಭಾರೀ ನಷ್ಟ ಅನುಭವಿಸುತ್ತಾರೆ. ಆತ್ಮಹತ್ಯೆ, ಜೀವಹಾನಿಯಂತಹ ನಿದರ್ಶನಗಳೂ ಇಂತಹ ಭಾರೀ ನಷ್ಟದಿಂದಾಗಿ ಉಂಟಾಗಿವೆ.
ಅದಾನಿ ಸಮೂಹದ ಷೇರುಗಳ ಕುಸಿತದ ಪರಿಣಾಮವು ಆ ಸಮೂಹದೊಂದಿಗೆ ವ್ಯವಹಾರವಿರುವ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಾಲದಾತರ ಷೇರುಗಳ ಮೇಲೂ ಪರಿಣಾಮ ಬೀರಿತು. ಇದರಿಂದಾಗಿ ನಿಫ್ಟಿ ಮತ್ತು ಸೆನ್ಸೆಕ್ಸ್‌ನಲ್ಲಿ ಮೂರು ತಿಂಗಳ ಕನಿಷ್ಠ ಕುಸಿತ ಉಂಟಾಯಿತು.
ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಅವರಿಂದ ನಿಯಂತ್ರಿತವಾದ ಅದಾನಿ ಸಮೂಹದ ಏಳು ಪಟ್ಟಿ ಮಾಡಲಾದ ಕಂಪನಿಗಳು ಬುಧವಾರದಿಂದ 48 ಶತಕೋಟಿ ಡಾಲರ್ ಬಂಡವಾಳ ಕಳೆದುಕೊಂಡಿವೆ.
ಅದಾನಿ ಕಂಪೆನಿಯ ಸಾಲದ ಮಟ್ಟದ ಬಗ್ಗೆ ಹಿಂಡೆನ್‌ಬರ್ಗ್ ವರದಿ ಕಳವಳ ವ್ಯಕ್ತಪಡಿಸಿದ ನಂತರ ಕಂಪೆನಿಯ ಅಮೆರಿಕ ಬಾಂಡ್‌ಗಳಲ್ಲಿ ಕುಸಿತ ಉಂಟಾಗಿದೆ.
ಆರ್ಥಿಕ ವ್ಯವಸ್ಥೆಯ ಮೇಲೆ ಇಂತಹ ಭಾರೀ ದಾಳಿ ನಡೆದರೂ ಕೇಂದ್ರ ಸರ್ಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಾಗೂ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ.
ಭಾರತದ ಅತಿದೊಡ್ಡ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಎಸ್‌ಬಿಐ, ಅದಾನಿ ಸಮೂಹದ ಭಾಗವಾಗಿರುವ ಕಂಪನಿಗಳಿಗೆ ಒಟ್ಟು 2.6 ಶತಕೋಟಿ ಡಾಲರ್ ಸಾಲ ನೀಡಿದೆ. ಈ ರೀತಿಯ ಸಾರ್ವಜನಿಕ ಹಣವು ಯಾವುದೇ ಸುಧಾರಿತ ಸಾಲ ಪರಿಷ್ಕರಣಾ ಪ್ರಕ್ರಿಯೆ ಇಲ್ಲದೆ ಹಣದ ಮಾರುಕಟ್ಟೆಯಲ್ಲಿ ಹೇಗೆ ಹರಿದಾಡುತ್ತಿದೆ ಎಂಬುದು ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಯಾಗಿದ್ದು ಹಿಂಡೆನ್‌ಬರ್ಗ್ ವರದಿ ಬಳಿಕ ಅದಾನಿ ಕಂಪೆನಿಯ ಬಂಡವಾಳ ಬಯಲಾಗಿ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ
ವರದಿಯನ್ನು ಸಂಶೋಧನೆ ರಹಿತ ಮತ್ತು ದುರುದ್ದೇಶಪೂರ್ವಕ ಚೇಷ್ಟೆ ಎಂದು ಅದಾನಿ ಸಮೂಹ ತಿರಸ್ಕರಿಸಿದ್ದರೂ ಯಾವುದೇ ಪರಿಹಾರ ಲಭಿಸದೇ ಅಪಾರ ಪ್ರಮಾಣದ ಹಣಕಳೆದುಕೊಂಡ ಹೂಡಿಕೆದಾರರ ಭವಿಷ್ಯದ ಬಗ್ಗೆ ಕಳವಳ ಇದೆ.