ಹಿಂಡೆನ್‌ಬರ್ಗ್ ಸಂಶೋಧನಾ ವರದಿಯು ಅದಾನಿ ಸಮೂಹದ ಕಂಪೆನಿಗಳ ಮೇಲೆ ಉಂಟು ಮಾಡಿರುವ ಪರಿಣಾಮಗಳಿಂದಾಗಿ ಉದ್ಭವಿಸಿರುವ ಪರಿಸ್ಥಿತಿ ಎದುರಿಸಲು ತಾನು ಸಶಕ್ತವಾಗಿರುವುದಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ [ಮನೋಹರ್ ಲಾಲ್ ಶರ್ಮ ವರ್ಸಸ್ ಭಾರತದ ಒಕ್ಕೂಟ ಮತ್ತಿತರರು].
ಭವಿಷ್ಯದಲ್ಲಿ ಭಾರತದ ಹೂಡಿಕೆದಾರರ ಹಿತ ಕಾಯುವ ನಿಟ್ಟಿನಲ್ಲಿ ಕ್ರಮಗಳನ್ನು ಸೂಚಿಸುವಂತೆ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿಗೆ ಈ ಹಿಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಆದೇಶಿಸಿತ್ತು.
ಷೇರುಪೇಟೆಯಲ್ಲಿ ಶಾರ್ಟ್ ಸೆಲಿಂಗ್ ಮಾಡುವ ಹಿಂಡೆನ್‌ಬರ್ಗ್ ಸಂಸ್ಥೆಯ ಸಂಶೋಧನಾ ವರದಿಯಿಂದಾಗಿ ಅದಾನಿ ಸಮೂಹದ ಷೇರುಗಳ ಮೇಲೆ ಉಂಟಾದ ಉತ್ಪಾತ ಹಾಗೂ ಒಟ್ಟಾರೆ ಷೇರುಪೇಟೆಯಲ್ಲಿ ಹೂಡಿಕೆದಾರರ ಮೇಲಾದ ನಕಾರಾತ್ಮಕ ಪರಿಣಾಮಗಳ ಕುರಿತು ದಾಖಲಾಗಿರುವ ಎರಡು ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಹಿಂಡೆನ್ ಬರ್ಗ್ ವರದಿಯ ನಂತರ ಅದಾನಿ ಸಮೂಹವು ನೂರು ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ನಷ್ಟವನ್ನು ಷೇರುಪೇಟೆಯಲ್ಲಿ ಎದುರಿಸಿದೆ.
ಸೆಬಿ ಪರವಾಗಿ ಇಂದು ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸುಪ್ರೀಂ ಕೋರ್ಟ್ ಈ ಹಿಂದಿನ ವಿಚಾರಣೆ ವೇಳೆ ತಜ್ಞರ ಸಮಿತಿಯನ್ನು ರಚಿಸಲು ತೋರಿದ್ದ ಒಲವಿನ ಬಗ್ಗೆ ಪ್ರಸ್ತಾಪಿಸಿದರು. ಅಂತಹ ಒಂದು ಸಮಿತಿಯನ್ನು ರಚಿಸಲು ಸರ್ಕಾರದ ಯಾವುದೇ ಆಕ್ಷೇಪಣೆಯಿಲ್ಲ, ಆದರೆ, ಈ ಪ್ರಕ್ರಿಯೆಯಲ್ಲಿ ಸೆಬಿಯ ಪರಿಣತಿಯನ್ನು ಎಲ್ಲಿಯೂ ಅವಗಣನೆ ಮಾಡುವಂತಾಗಬಾರದು ಎನ್ನುವ ಅಂಶವನ್ನು ಹೇಳಿದರು.
"ಸಂಭವಿಸಿರುವ ಘಟನೆಯ ಪರಿಣಾಮಗಳನ್ನು ಎದುರಿಸಲು ಸೆಬಿಯು ಸಶಕ್ತವಾಗಿದೆ. ಆದಾಗ್ಯೂ, ಸಮಿತಿಯ ರಚನೆಗೆ ಸರ್ಕಾರದಿಂದ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ಸಮಿತಿಯ ಕಾರ್ಯವ್ಯಾಪ್ತಿಯ ಬಗ್ಗೆ ನಿರ್ಧರಿಸುವುದು ಮುಖ್ಯವಾಗಲಿದೆ. ಏಕೆಂದರೆ ಇದು ಅಂತಾರಾಷ್ಟ್ರೀಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಹಾಗಾಗಿ, ಕಾರ್ಯವ್ಯಾಪ್ತಿಯ ಬಗ್ಗೆ ನಾವು ಮುಚ್ಚಿದ ಲಕೋಟೆಯಲ್ಲಿ ಶಿಫಾರಸ್ಸು ಮಾಡಬಯಸುತ್ತೇವೆ. ನಿಯಂತ್ರಣ ಸಂಸ್ಥೆಯ (ಸೆಬಿ) ಪರಿಣತಿಯನ್ನು ಅವಗಣನೆ ಮಾಡಲು ನಾವು ಬಯಸುವುದಿಲ್ಲ," ಎಂದು ವಿವರಿಸಿದರು.
ಇದಕ್ಕೆ ಸಮ್ಮತಿಸಿದ ಪೀಠವು ಶುಕ್ರವಾರದ ಮುಂದಿನ ವಿಚಾರಣೆಯ ವೇಳೆಗೆ ಸಮಿತಿಯ ಕಾರ್ಯವ್ಯಾಪ್ತಿಯ ಕುರಿತಾಗಿ ಮಾಹಿತಿ ನೀಡಲು ಕೇಂದ್ರಕ್ಕೆ ಸೂಚಿಸಿತು. ಈ ಕುರಿತ ಟಿಪ್ಪಣಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹಾಗೂ ಇದರ ಪ್ರತಿಯನ್ನು ಅರ್ಜಿದಾರರಿಗೆ ನೀಡುವಂತೆ ಕೇಂದ್ರಕ್ಕೆ ನಿರ್ದೇಶಿಸಿತು.