ಹಿಂದಿಯು ರಾಷ್ಟ್ರೀಯ ಭಾಷೆ; ಪಶ್ಚಿಮ ಬಂಗಾಳದ ಸಾಕ್ಷಿದಾರರು ಉ.ಪ್ರದೇಶದಲ್ಲಿ ಹಿಂದಿಯಲ್ಲಿ ಸಂವಹಿಸಬೇಕು: ಸುಪ್ರೀಂ

ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷಿಗಳು ಪಶ್ಚಿಮ ಬಂಗಾಳದ ಸಿಲಿಗುರಿಯವರಾಗಿರುವುದರಿಂದ, ಫರೂಕ್ಕಾಬಾದ್‌ನ ಎಂಎಸಿಟಿಯಲ್ಲಿ ವಿಚಾರಣೆ ನಡೆಸಿದರೆ ಭಾಷೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯದ ಮುಂದೆ ವಾದಿಸಲಾಗಿತ್ತು.
Justice Dipankar Dutta
Justice Dipankar Dutta

ಹಿಂದಿ ರಾಷ್ಟ್ರೀಯ ಭಾಷೆಯಾಗಿದ್ದು, ಉತ್ತರ ಪ್ರದೇಶದ ನ್ಯಾಯಾಧಿಕರಣದ ಮುಂದೆ ಹಾಜರುಪಡಿಸುವ ಸಾಕ್ಷಿಗಳು ಬೇರೆ ರಾಜ್ಯದವರಾಗಿದ್ದರೂ ಸಹ ಹಿಂದಿಯಲ್ಲಿ ಸಂವಹನ ಮಾಡಬೇಕು, ಹೇಳಿಕೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಪ್ರಮೋದ್ ಸಿನ್ಹಾ ವಿರುದ್ಧ ಸುರೇಶ್ ಸಿಂಗ್ ಚೌಹಾಣ್ ಮತ್ತು ಇತರರು].

ಉತ್ತರ ಪ್ರದೇಶದ ಫರುಕ್ಕಾಬಾದ್‌ನ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯಲ್ಲಿ (ಎಂಎಸಿಟಿ) ಬಾಕಿ ಇರುವ ಮೋಟಾರು ಅಪಘಾತ ಪ್ರಕರಣವನ್ನು ಪಶ್ಚಿಮ ಬಂಗಾಳದ ಎಂಎಸಿಟಿ ಡಾರ್ಜಿಲಿಂಗ್‌ಗೆ ವರ್ಗಾಯಿಸುವಂತೆ ಕೋರಿದ್ದ ಮನವಿಯನ್ನು ವಜಾಗೊಳಿಸಿದ ದೀಪಂಕರ್‌ ದತ್ತಾ ಅವರ ಏಕಸದಸ್ಯ ಪೀಠವು‌ ಈ ಅವಲೋಕನ ಮಾಡಿತು. 

ಅಪಘಾತಕ್ಕೆ ಕಾರಣವಾದ ವಾಹನದ ಮಾಲೀಕರಾಗಿರುವ ಅರ್ಜಿದಾರರು ಪ್ರಕರಣವನ್ನು ವರ್ಗಾಯಿಸಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಎಲ್ಲಾ ಸಾಕ್ಷಿಗಳು ಪಶ್ಚಿಮ ಬಂಗಾಳದ ಸಿಲಿಗುರಿಯವರಾಗಿರುವುದರಿಂದ, ಫರೂಕ್ಕಾಬಾದ್‌ನ ಎಂಎಸಿಟಿಯಲ್ಲಿ ವಿಚಾರಣೆ ನಡೆಸಿದರೆ ಭಾಷೆ ಅಡ್ಡಿಯಾಗುವ  ಸಾಧ್ಯತೆಯಿದೆ ಎನ್ನುವುದು ಅವರ ವಾದವಾಗಿತ್ತು.

ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು, "ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ಜನರು ವಿಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ ಎಂಬುದು ನಿಸ್ಸಂದೇಹವಾದ ವಿಷಯ. ದೇಶದಲ್ಲಿ ಕನಿಷ್ಠ 22 ಅಧಿಕೃತ ಭಾಷೆಗಳಿವೆ. ಆದಾಗ್ಯೂ, ಹಿಂದಿ ರಾಷ್ಟ್ರೀಯ ಭಾಷೆಯಾಗಿರುವುದರಿಂದ, ಉತ್ತರ ಪ್ರದೇಶದ ಫಾರೂಕ್ಕಾಬಾದ್‌ನ ಫತೇಗಢ್‌ದ ಎಂಎಸಿಟಿಯಲ್ಲಿ ಹಾಜರುಪಡಿಸಲಾಗುವ ಸಾಕ್ಷಿಗಳು ತಮ್ಮ ವಿಚಾರವನ್ನು ಹಿಂದಿಯಲ್ಲಿ ಸಂವಹಿಸುವುದನ್ನು ನಿರೀಕ್ಷಿಸಲಾಗುತ್ತದೆ,” ಎಂದು ಆದೇಶದಲ್ಲಿ ಹೇಳಿದೆ.

ಅಲ್ಲದೆ, ಅಪಘಾತವು ಸಿಲಿಗುರಿಯಲ್ಲಿ ಸಂಭವಿಸಿರುವುದರಿಂದ, ಹಕ್ಕುದಾರರ ಅರ್ಜಿಯನ್ನು ನಿರ್ಧರಿಸಲು ಡಾರ್ಜಿಲಿಂಗ್‌ನ ಎಂಎಸಿಟಿ ಸೂಕ್ತ ಎನ್ನುವ ಅರ್ಜಿದಾರರ ವಾದವನ್ನೂ ಸಹ ನ್ಯಾಯಾಲಯ ತಿರಸ್ಕರಿಸಿತು.

ಈ ವಿಚಾರವಾಗಿ ನ್ಯಾಯಾಲಯವು,  "ಪರಿಹಾರ ಕೋರಿರುವ ಹಕ್ಕುದಾರರಿಗೆ ಅವರು (ಹಕ್ಕುದಾರರು) ವಾಸಿಸುವ ಅಥವಾ ವ್ಯವಹಾರವನ್ನು ನಡೆಸುತ್ತಿರುವ ಅಥವಾ ಪ್ರತಿವಾದಿ ವಾಸಿಸುವ ಸ್ಥಳದ ಮಿತಿಯೊಳಗಿನ ಎಂಎಸಿಟಿಯನ್ನು ಸಂಪರ್ಕಿಸುವ ಆಯ್ಕೆಯನ್ನು ಸೆಕ್ಷನ್ 166 ರ ಉಪ ಸೆಕ್ಷನ್‌ (2) ಒದಗಿಸುತ್ತದೆ. ಪರಿಹಾರ ಕೋರಿರುವ ಅರ್ಜಿದಾರರು ಫಾರೂಕ್ಕಾಬಾದ್‌ನ, ಫತೇಗಢದ ಎಂಎಸಿಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ,” ಎಂದು ವಿವರಿಸಿತು. ಮುಂದುವರೆದು, “ಅರ್ಜಿದಾರರ ಆರೋಪಗಳು ತಪ್ಪಾದ ಗ್ರಹಿಕೆಯಿಂದ ಮೂಡಿದ್ದು, ಈ ಕಾರಣದಿಂದಾಗಿ ರದ್ದುಗೊಳಿಸಲಾಗಿದೆ,” ಎಂದು ನ್ಯಾಯಾಲಯವು ಹೇಳಿತು.

ಆಸಕ್ತಿಕರ ಸಂಗತಿಯೆಂದರೆ, ನ್ಯಾಯಮೂರ್ತಿ ದತ್ತಾ ಸ್ವತಃ ಪಶ್ಚಿಮ ಬಂಗಾಳದವರು.

Related Stories

No stories found.
Kannada Bar & Bench
kannada.barandbench.com