ತಾಜ್ ಮಹಲ್‌ನಲ್ಲಿ ಶಹಜಹಾನ್ ವಾರ್ಷಿಕ ಉರುಸ್‌ ನಿಷೇಧಿಸಲು ಕೋರಿ ಆಗ್ರಾ ನ್ಯಾಯಾಲಯದ ಮೆಟ್ಟಿಲೇರಿದ ಹಿಂದೂ ಸಂಘಟನೆ

ತಾಜ್ ಮಹಲ್ ಆವರಣದಲ್ಲಿ ನಡೆಯಲಿರುವ 'ಉರುಸ್' ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಕಲ್ಪಿಸಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಪ್ರಶ್ನಿಸಿದೆ.
ತಾಜ್ ಮಹಲ್
ತಾಜ್ ಮಹಲ್
Published on

ತಾಜ್ ಮಹಲ್ ನಲ್ಲಿ ಮೊಘಲ್ ಚಕ್ರವರ್ತಿ ಷಹಜಹಾನ್ ಅವರ 'ಉರುಸ್' (ಪುಣ್ಯತಿಥಿ) ಆಚರಣೆಗೆ ನಿಷೇಧಾಜ್ಞೆ ವಿಧಿಸುವಂತೆ ಕೋರಿ ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ) ಆಗ್ರಾ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದೆ.

ಪ್ರಕರಣವನ್ನು ಆಗ್ರಾ ಜಿಲ್ಲಾ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರ ಮುಂದೆ ಶುಕ್ರವಾರ ಪಟ್ಟಿ ಮಾಡಲಾಗಿದ್ದು, ವಿಚಾರಣೆ ಮಾರ್ಚ್ 31ರಂದು ನಡೆಯಲಿದೆ.

ಈ ಸಂದರ್ಭದಲ್ಲಿ ಜನರಿಗೆ ಉಚಿತ ಪ್ರವೇಶ ನೀಡದಂತೆ ನಿಷೇಧಾಜ್ಞೆ ವಿಧಿಸಬೇಕೆಂದು ವಕೀಲ ಅನಿಲ್ ತಿವಾರಿ ಅವರ ಮೂಲಕ ಸಲ್ಲಿಸಿದ ದಾವೆಯಲ್ಲಿ ಹಿಂದೂ ಸಂಘಟನೆ ಕೋರಿದೆ.

ಫೆಬ್ರವರಿ 6 ರಿಂದ 8 ರವರೆಗೆ 'ಉರುಸ್' ನಿಗದಿಪಡಿಸಲಾಗಿದೆ. ಯಮುನಾ ನದಿಯ ದಡದಲ್ಲಿ 1653ರಲ್ಲಿ ತಾಜ್ ಮಹಲ್ ನಿರ್ಮಿಸಿದ ಷಹಜಹಾನ್ ಮರಣದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 'ಚಾದರ್ ಪೋಷ್', 'ಶ್ರೀಗಂಧ', 'ಗುಸುಲ್' ಮತ್ತು 'ಕುಲ್' ರೀತಿಯ ವಿವಿಧ ಆಚರಣೆಗಳನ್ನು ಒಳಗೊಂಡಿದೆ.

ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಅನುಮತಿಯಿಲ್ಲದೆ ಐತಿಹಾಸಿಕ ಸ್ಮಾರಕದಲ್ಲಿ ಉರುಸ್‌ ಆಚರೆಣಾ ಸಮಿತಿ ತಾಜ್‌ಗಂಗ್‌ ಉರುಸ್‌ ಆಚರಿಸಿಕೊಂಡು ಬರುತ್ತಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

ಸಮಿತಿಯ ಅಧ್ಯಕ್ಷರಿಗೂ ತಾಜ್ ಮಹಲ್‌ಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಅವರು ತಾಜ್ ಮಹಲ್‌ನ ಉದ್ಯೋಗಿಯೂ ಅಲ್ಲ ಅಥವಾ ಸ್ಮಾರಕದ ಬಗ್ಗೆ‌ ಅವರಿಗೆ ಯಾವುದೇ ಕಾಳಜಿಯೂ ಇಲ್ಲ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

Kannada Bar & Bench
kannada.barandbench.com