ಕುತುಬ್ ಮಿನಾರ್ ಸಂರಕ್ಷಿತ ಸ್ಮಾರಕ: ಹಿಂದೂ ಶಿಲ್ಪವಿದ್ದರೂ ಪೂಜೆ ಸಲ್ಲದು ಎಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ ಎಎಸ್ಐ

ಸಂಕೀರ್ಣ ನಿರ್ಮಾಣಕ್ಕಾಗಿ ಹಿಂದೂ ಮತ್ತು ಜೈನ ದೇವತೆಗಳ ಶಿಲ್ಪ ಮತ್ತು ಆಕೃತಿಗಳನ್ನು ಮರುಬಳಕೆ ಮಾಡಲಾಗಿದೆ ಎಂಬುದನ್ನು ಒಪ್ಪಿದ ಎಎಸ್ಐ ಸಂರಕ್ಷಿತ ಸ್ಮಾರಕಗಳಿಗೆ ಪೂಜೆ ಸಲ್ಲಿಸಲು ಇದು ಆಧಾರವಾಗದು ಎಂದಿದೆ.
Qutub Minar complex
Qutub Minar complex
Published on

ಕುತುಬ್ ಮಿನಾರ್ ಸಂಕೀರ್ಣದೊಳಗೆ ಹಿಂದೂ ಶಿಲ್ಪಗಳ ಅಸ್ತಿತ್ವದ ಬಗ್ಗೆ ಯಾವುದೇ ನಿರಾಕರಣೆ ಇಲ್ಲದಿದ್ದರೂ, ಸಂರಕ್ಷಿತ ಸ್ಮಾರಕಕ್ಕೆ ಸಂಬಂಧಿಸಿದಂತೆ ಪೂಜೆ ಸಲ್ಲಿಸುವ ಮೂಲಭೂತ ಹಕ್ಕು ಪಡೆಯಲಾಗದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.

ಸಂಕೀರ್ಣ ನಿರ್ಮಾಣಕ್ಕಾಗಿ ವಾಸ್ತುಶಿಲ್ಪದ ಭಾಗಕ್ಕೆ ಹಿಂದೂ ಮತ್ತು ಜೈನ ದೇವತೆಗಳ ಆಕೃತಿಗಳನ್ನು ಮರುಬಳಕೆ ಮಾಡಲಾಗಿದೆ ಎಂಬುದನ್ನು ಒಪ್ಪಿದ ಎಎಸ್‌ಐ ಪುರಾತತ್ವ ತಾಣ ಮತ್ತು ಭಗ್ನಾವಶೇಷಗಳ ಸಂರಕ್ಷಣಾ ಕಾಯಿದೆ- 1958ರ ಅಡಿ ಪೂಜಿಸುವ ಹಕ್ಕು ಪಡೆಯಲು ಇದು ಆಧಾರವಾಗದು ಎಂದಿದೆ.

Also Read
ಮಂಗಳೂರು ಮಸೀದಿ ವಿವಾದ: ನವೀಕರಣ ಕಾಮಗಾರಿಗೆ ಮಧ್ಯಂತರ ತಡೆ ನೀಡಿರುವ ಸಿವಿಲ್ ನ್ಯಾಯಾಲಯ

ದಕ್ಷಿಣ ದೆಹಲಿಯಲ್ಲಿರುವ ಕುತುಬ್‌ ಮಿನಾರ್‌ 12ನೇಶತಮಾನದಲ್ಲಿಕುತುಬ್-ಉದ್-ದಿನ್‌ನಿಂದ ನಾಶವಾಗುವ ಮೊದಲು 27 ʼವೈಭವಯುತʼ ಹಿಂದೂ ಮತ್ತು ಜೈನ ದೇವಾಲಯಗಳ ಸಂಕೀರ್ಣವಾಗಿತ್ತು. ಈಗಿನ ಸ್ಮಾರಕವನ್ನು ಆತ ಸ್ಥಾಪಿಸಿದ ಎಂದು ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಎಎಸ್‌ಐ ನ್ಯಾಯಾಲಯಕ್ಕೆ ಈ ವಿಚಾರ ತಿಳಿಸಿದೆ.

ಪುರಾತತ್ವ ತಾಣ ಮತ್ತು ಭಗ್ನಾವಶೇಷಗಳ ಸಂರಕ್ಷಣಾ ಕಾಯಿದೆ- 1958ರ ಪ್ರಕಾರ ಅಸ್ತಿತ್ವದಲ್ಲಿರುವ ಯಾವುದೇ ಸ್ಮಾರಕದಲ್ಲಿ ಪೂಜೆ ನಡೆಸಲು ಅವಕಾಶವಿಲ್ಲ. ಕುತುಬ್‌ ಮಿನಾರ್‌ ನಿರ್ಮಾಣದ ವೇಳೆ ಹಿಂದೂ ಮತ್ತು ಜೈನ ದೇವತೆಗಳ ಶಿಲ್ಪ ಮತ್ತು ಆಕೃತಿಗಳನ್ನು ಮರುಬಳಕೆ ಮಾಡಲಾಗಿದೆ. ಕುತುಬ್‌ ಮಿನಾರ್‌ ಪೂಜಾ ಸ್ಥಳವಲ್ಲ. ಕೇಂದ್ರ ಸರ್ಕಾರದಿಂದ ಸಂರಕ್ಷಣೆಗೊಳಗಾದ ಸಮಯದಿಂದಲೂ ಸ್ಮಾರಕ ಅಥವಾ ಅದರ ಯಾವುದೇ ಭಾಗವನ್ನು ಯಾವುದೇ ಸಮುದಾಯ ಆರಾಧಿಸುತ್ತಿಲ್ಲ. ಸಂಕೀರ್ಣದಲ್ಲಿರುವ ಶಾಸನವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ ಎಂಬುದು ಸುಸ್ಪಷ್ಟ. ಕೇಂದ್ರ ಸರ್ಕಾರ ಸಂರಕ್ಷಿಸುತ್ತಿರುವ ಸ್ಮಾರಕದಲ್ಲಿ ಪೂಜೆ ಸಲ್ಲಿಸಲು ಯಾವುದೇ ವ್ಯಕ್ತಿ ಮೂಲಭೂತ ಹಕ್ಕು ಪ್ರತಿಪಾದಿಸಿದರೆ ಅದು ಕಾಯಿದೆಯ ನಿಯಮಾವಳಿಗಳಿಗೆ ವಿರುದ್ಧವಾಗುತ್ತದೆ ಎಂದು ಎಎಸ್‌ಐ ಹೇಳಿದೆ.

Kannada Bar & Bench
kannada.barandbench.com