[ಹಿಂದೂ ಉತ್ತರಾಧಿಕಾರ ಕಾಯಿದೆ] ಮೃತ ಪುತ್ರನ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿಗೆ ಹಕ್ಕಿದೆ: ಹೈಕೋರ್ಟ್‌

ಸಂತೋಷ್‌ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದು, ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಸುಶೀಲಮ್ಮ ಮೊದಲನೇ ವರ್ಗದ ವಾರಸುದಾರೆ ಎಂದಿರುವ ಹೈಕೋರ್ಟ್‌.
Justice H P Sandesh and Karnataka HC
Justice H P Sandesh and Karnataka HC

ಹಿಂದೂ ಉತ್ತರಾಧಿಕಾರಿ ಕಾಯಿದೆ ಅಡಿ ಮೃತ ಪುತ್ರನ ಆಸ್ತಿಗೆ ತಾಯಿಯು ಮೊದಲನೇ ವರ್ಗದ ವಾರಸುದರಳಾಗಲಿದ್ದು (ಕ್ಲಾಸ್‌ 1 ಹೇರ್ಸ್‌), ಪತಿ ಜೀವಂತವಾಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರನಿಗೆ ಸೇರಬೇಕಿರುವ ಆಸ್ತಿಯಲ್ಲಿ ತಾಯಿ ತನ್ನ ಪಾಲು ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ಆದೇಶ ಮಾಡಿದೆ.

ಮೃತಪಟ್ಟಿರುವ ಪುತ್ರ ಸಂತೋಷ್‌ ಪಾಲಿನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಹಕ್ಕು ಹೊಂದಿಲ್ಲ ಎಂದು ಆದೇಶಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಟಿ ಎನ್‌ ಸುಶೀಲಮ್ಮ ಎಂಬವರು ಸಲ್ಲಿಸಿದ್ದ ಸಾಮಾನ್ಯ ಎರಡನೇ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ. ವಿಪರ್ಯಾಸವೆಂದರೆ, ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಸುಶೀಲಮ್ಮ ಅವರೂ ವಿಧಿವಶರಾಗಿದ್ದರು.

“ಅರ್ಜಿಯಲ್ಲಿ ಒಮ್ಮೆ ಸುಶೀಲಮ್ಮ ಅವರನ್ನು ಪಕ್ಷಕಾರರನ್ನಾಗಿ ಮಾಡಿದ ಮೇಲೆ ಅವರೂ ಸಂತೋಷ್‌ ಅವರ ಮೊದಲನೇ ವರ್ಗದ ವಾರಸುದಾರರಾಗಲಿದ್ದಾರೆ. ಸಂತೋಷ್‌ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದು, ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಸುಶೀಲಮ್ಮ ಮೊದಲನೇ ವರ್ಗದ ವಾರಸುದಾರರಾಗಲಿದ್ದಾರೆ. ಹೀಗಾಗಿ, ಸಂತೋಷ್‌ ಅವರ ಆಸ್ತಿಯಲ್ಲಿ ಪಾಲು ಪಡೆಯಲು ಮೂಲ ಮೇಲ್ಮನವಿದಾರರಾದ ಸುಶೀಲಮ್ಮ ಅರ್ಹರಾಗಲಿದ್ದು, ಮೊದಲ ಮೇಲ್ಮನವಿ ನ್ಯಾಯಾಲಯದ ನಡೆ ದೋಷಪೂರಿತವಾಗಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

“ಮೊದಲಿಗೆ ಸುಶೀಲಮ್ಮ ಅವರು ಸಂತೋಷ್‌ ಅವರ ಮೊದಲನೇ ವರ್ಗದ ವಾರಸುದಾರರು ಮತ್ತು ಫಿರ್ಯಾದಿಗಳ (ಸಂತೋಷ್‌ ಪತ್ನಿ ಮತ್ತು ಪುತ್ರ) ಜೊತೆ ಅವರೂ ಪಾಲು ಪಡೆಯಲು ಅರ್ಹರು ಎಂಬುದನ್ನು ನಿರ್ಧರಿಸುವಲ್ಲಿ ಪ್ರಥಮ ಮೇಲ್ಮನವಿ ನ್ಯಾಯಾಲಯ ಪ್ರಮಾದ ಎಸಗಿದೆಯೇ?  ಮತ್ತು ಎರಡನೆಯದಾಗಿ ಸುಶೀಲಮ್ಮ ಅವರಿಗೆ ಸೂಕ್ತ ಪಾಲನ್ನು ಹಂಚಿಕೆ ಮಾಡಲು ಮೊದಲನೇ ಮೇಲ್ಮನಿ ನ್ಯಾಯಾಲಯ ತಪ್ಪೆಸಗಿದೆಯೇ ಎಂಬ ಕಾನೂನಿನ ಪ್ರಶ್ನೆಗಳು ಎದ್ದಿದ್ದು, ಇವೆರಡೂ ಒಂದಕ್ಕೊಂದು ಸಂಬಂಧ ಹೊಂದಿವೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ವಾಸ್ತವಿಕ ಅಂಶಗಳು ಮತ್ತು ಕಾನೂನಿನ ನಿಬಂಧನೆಗಳನ್ನು ಆಳವಾಗಿ ವಿಶ್ಲೇಷಿಸಿರುವ ಹೈಕೋರ್ಟ್‌, “ಸುಶೀಲಮ್ಮ ಅವರು ಸಂತೋಷ್‌ ಅವರ ಮೊದಲನೇ ವರ್ಗದ ವಾರಸುದಾರರಾಗಿದ್ದು, ಅವರು ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕುದಾರರಾಗಿದ್ದಾರೆ. ಪ್ರಕರಣದ ವಿಚಾರಣೆಯ ಹಂತದಲ್ಲಿ ಸುಶೀಲಮ್ಮ ಅವರು ನಿಧನರಾಗಿದ್ದು, ಪತಿ, ಪುತ್ರಿ ಮತ್ತು ಈಗಾಗಲೇ ಸಾವನ್ನಪ್ಪಿರುವ ಪುತ್ರನನ್ನು ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಮಹಿಳೆಯ ಉತ್ತರಾಧಿಕಾರ ನಿಯಮಗಳ ಬಗ್ಗೆ ಚರ್ಚಿಸುವ ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್‌ 15 ಅನ್ನು ಅನ್ವಯಿಸಬೇಕಿದೆ” ಎಂದಿದೆ.

“ಸುಶೀಲಮ್ಮ ಅವರು ದಾವೆ ಹೂಡುವುದಕ್ಕೂ ಮೊದಲೇ ಸಂತೋಷ್‌ ಅವರು ನಿಧನರಾಗಿದ್ದಾರೆ. ಇದರಿಂದ ಸುಶೀಲಮ್ಮ ಅವರು ಸಂತೋಷ್‌ ಅವರ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ ಎಂಬುದನ್ನು ಗುರುತಿಸುವಲ್ಲಿ ಪ್ರಥಮ ಮೇಲ್ಮನವಿ ನ್ಯಾಯಾಲಯವು ವಿಫಲವಾಗಿದೆ. ಅಲ್ಲದೇ, ಸುಶೀಲಮ್ಮ ಪತಿ ಬದುಕಿರುವವರೆಗೆ ಆಸ್ತಿಯ ವಿಭಾಗದಲ್ಲಿ ಸುಶೀಲಮ್ಮ ಅವರನ್ನು ಅಗತ್ಯ ಪಕ್ಷಕಾರರು ಎಂದು ಪರಿಗಣಿಸಲಾಗದು ಎಂದು ಪ್ರಥಮ ಮೇಲ್ಮನವಿ ನ್ಯಾಯಾಲಯ ಹೇಳಿದೆ. ಆದರೆ, ಸಂತೋಷ್‌ ಸಾವಿನ ಹಿನ್ನೆಲೆಯಲ್ಲಿ ಸುಶೀಲಮ್ಮ ಅವರು ಸಂತೋಷ್‌ ಅವರ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ ಎಂಬ ಅಂಶ ಪರಿಗಣಿಸುವಲ್ಲಿ ವಿಫಲವಾಗಿದೆ” ಎಂದು ಹೈಕೋರ್ಟ್‌ ಹೇಳಿದೆ.

“ಸುಶೀಲಮ್ಮ ಅವರ ಪತಿ ಜೀವಂತವಾಗಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಸಂತೋಷ್‌ ನಿಧನರಾದ ಬಳಿಕ ಸುಶೀಲಮ್ಮ ಅವರು ಸಂತೋಷ್‌ ಅವರ ಮೊದಲ ವರ್ಗದ ವಾರಸುದಾರರಾಗುತ್ತಾರೆ. ಇದನ್ನು ವಿಚಾರಣಾಧೀನ ನ್ಯಾಯಾಲಯ ಪರಿಗಣಿಸಿಲ್ಲ. ಅಲ್ಲದೇ, ಅಮ್ಮನನ್ನು ದಾಯಾದಿ ಎಂದು ಪರಿಗಣಿಸಲಾಗದು. ಹೀಗಾಗಿ, ಆಕೆ ಪಿತ್ರಾರ್ಜಿತ/ಜಂಟಿ ಆಸ್ತಿಯಲ್ಲಿ ಪಾಲು ಕೋರಲಾಗದು ಎಂದು ತಪ್ಪಾಗಿ ಆದೇಶಿಸಿದೆ” ಎಂದು ಹೈಕೋರ್ಟ್‌ ಹೇಳಿದೆ.

“ಸುಶೀಲಮ್ಮ ಅವರು ಪಿತ್ರಾರ್ಜಿತ ಆಸ್ತಿಯಲ್ಲಿ ದಾಯಾದಿ (ಕೋಪರ್ಸೆನರ್) ಎಂದು ಸ್ವತಂತ್ರ ಪಾಲು ಕೋರಿಲ್ಲ. ಆದರೆ, ತನ್ನನ್ನು ಅಗಲಿರುವ ಪುತ್ರ ಸಂತೋಷ್‌ ಆಸ್ತಿಯಲ್ಲಿ ಅವರು ಪಾಲು ಕೋರಿದ್ದಾರೆ. ಹೀಗಾಗಿ, ಮೇಲ್ಮನವಿಯಲ್ಲಿ ಸುಶೀಲಮ್ಮ ಅವರನ್ನು ಪಕ್ಷಕಾರರನ್ನಾಗಿ ಮಾಡುವ ಅಗತ್ಯವಿಲ್ಲ ಮತ್ತು ಆಕೆ ತನ್ನ ಪಾಲು ಪಡೆಯಲು ಅರ್ಹಳಲ್ಲ ಎಂದಿರುವ ಪ್ರಥಮ ಮೇಲ್ಮನವಿ ನ್ಯಾಯಾಲಯದ ಆದೇಶ ದೋಷಪೂರಿತ” ಎಂದು ಹೈಕೋರ್ಟ್‌ ಆದೇಶದಲ್ಲಿ ವಿವರಿಸಿದೆ.

“ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ಸುಶೀಲಮ್ಮ ಅವರು ನಿಧನರಾಗಿರುವುದರಿಂದ ಹಿಂದೂ ಉತ್ತರಾಧಿಕಾರಿ ಕಾಯಿದೆ 1956ರ ಸೆಕ್ಷನ್‌ 15 ಅನ್ನು ಅನ್ವಯಿಸಬೇಕಿದೆ. ಅದೇನೆಂದರೆ ಹಿಂದೂ ಮಹಿಳೆಗೆ ಸಂಬಂಧಿಸಿದ ಸಾಮಾನ್ಯ ಉತ್ತರಾಧಿಕಾರ ನಿಯಮಗಳು. ಇದರ ಪ್ರಕಾರ ಕಾಯಿದೆಯ ಸೆಕ್ಷನ್‌ 16ರ ಅಡಿ ಹಿಂದೂ ಮಹಿಳೆಯ ಆಸ್ತಿಯು ಪುತ್ರರು, ಪುತ್ರಿಯರು (ಹಿಂದೆ ಸಾವನ್ನಪ್ಪಿರುವ ಪುತ್ರ ಅಥವಾ ಪುತ್ರಿಯ ಮಕ್ಕಳು ಸೇರಿ) ಮತ್ತು ಪತಿಗೆ ವಿಭಾಗವಾಗುತ್ತದೆ ಎಂಬುದಾಗಿದೆ. ಆದ್ದರಿಂದ ಸೆಕ್ಷನ್‌ 15ರ ಪ್ರಕಾರ ಸುಶೀಲಮ್ಮ ಅವರ ಆಸ್ತಿಯು ಪುತ್ರ, ಪುತ್ರಿ ಮತ್ತು ಪತಿಗೆ ವಿಭಾಗವಾಗುತ್ತದೆ ಎಂದಿರುವ ಹೈಕೋರ್ಟ್‌, ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡಿದೆ.

ಅಂತೆಯೇ ಸುಶೀಲಮ್ಮ ಅವರ ಪತಿಗೆ 10/27ನೇ ಭಾಗ, ಎರಡನೇ ಡಿಫೆಂಡೆಂಟ್‌ಗೆ 10/27ನೇ ಭಾಗ, ಈಗಾಗಲೇ ಸಾವನ್ನಪ್ಪಿರುವ ಪುತ್ರನ ಪುತ್ರನಿಗೆ 4/27ನೇ ಭಾಗ ಮತ್ತು ಸಾವನ್ನಪ್ಪಿರುವ ಪುತ್ರನ ಪತ್ನಿಗೆ 3/27ನೇ ಭಾಗವನ್ನು ಹಂಚಿಕೆ ಮಾಡಿದೆ.

ಪ್ರತಿವಾದಿಗಳ ಪರ ವಕೀಲರು “ಸುಶೀಲಮ್ಮ ಅವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಹಂಚಿಕೆಯಾಗಿಲ್ಲ. ಮಿಗಿಲಾಗಿ ಅವರಿಗೆ ಪಾಲು ಹಂಚಿಕೆ ಮಾಡುವ ವೇಳೆಗೆ ಅವರು ಸಾವನ್ನಪ್ಪಿದ್ದಾರೆ. ಈ ಹಂತದಲ್ಲಿ ಸುಶೀಲಮ್ಮ ಅವರ ಪುತ್ರಿಗೆ ಮತ್ತು ಅವರ ಇತರೆ ಕಾನೂನಾತ್ಮಕ ವಾರಸುದಾರರಿಗೆ ಪಾಲು ಹಂಚಿಕೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವರಾರೂ ತಾಯಿಯ ಪಾಲಿನಲ್ಲಿ ಪಾಲು ಪಡೆಯಲು ಅರ್ಹರಲ್ಲ. ತಾಯಿಗೆ ಪಾಲು ಹಂಚಿಕೆಯಾಗುವ ಮುನ್ನವೇ ನಿಧನವಾಗಿರುವುದರಿಂದ ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡುವ ಅಗತ್ಯವಿಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಸಂತೋಷ್‌ ಪತ್ನಿ ಮತ್ತು ಪುತ್ರ ಪೂರ್ವಜರ ಆಸ್ತಿಯಲ್ಲಿ ಪಾಲು ಕೋರಿ ವಿಚಾರಣಾಧೀನ ನ್ಯಾಯಾಲಯ ಮತ್ತು ಪ್ರಥಮ ಮೇಲ್ಮನವಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇತ್ಯರ್ಥಪಡಿಸುವಾಗ ಸಂತೋಷ್‌ ತಾಯಿಯಾದ ನನ್ನನ್ನು ಪಕ್ಷಕಾರಳನ್ನಾಗಿಸದಿರುವುದನ್ನು ವಿಚಾರಣಾಧೀನ ಮತ್ತು ಪ್ರಥಮ ಮೇಲ್ಮನವಿ ನ್ಯಾಯಾಲಯಗಳು ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ, ಅವುಗಳ ಆದೇಶ ಅಕ್ರಮ, ಸ್ವೇಚ್ಛೆ ಮತ್ತು ಅನ್ಯಾಯದಿಂದ ಕೂಡಿವೆ. ಮೇಲ್ಮನವಿದಾರೆಯಾದ ತಾನು ಸಾವನ್ನಪ್ಪಿರುವ ಸಂತೋಷ್‌ ಅವರ ತಾಯಿಯಾಗಿದ್ದು, ಆತನ ಆಸ್ತಿಯಲ್ಲಿ ತನಗೂ ಪಾಲು ಬರಬೇಕಿದೆ ಎಂದು ಕೋರಿ ಸುಶೀಲಮ್ಮ ಅವರು ಹೈಕೋರ್ಟ್‌ಗೆ ಸಾಮಾನ್ಯ ಎರಡನೇ ಮೇಲ್ಮನವಿ ಸಲ್ಲಿಸಿದ್ದರು.

Attachment
PDF
T N Susheelamma and others Vs Chirag Raghavendra.pdf
Preview

Related Stories

No stories found.
Kannada Bar & Bench
kannada.barandbench.com