ಹಿಂದೂಗಳ ಬಗ್ಗೆ ಭೀತಿ ಹುಟ್ಟಿಸುವ ಮತ್ತು ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದ ಆರೋಪಕ್ಕೆ ಸಂಬಂಧಿಸಿದಂತೆ ಇಂದೋರ್‌ನ ನೂತನ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ ಇನಾಮುರ್ ರೆಹಮಾನ್ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. (ಇನಾಮುರ್ ರೆಹಮಾನ್ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ).
ಪ್ರಕರಣದಲ್ಲಿ ಮಧ್ಯಪ್ರದೇಶ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಪಿ ಎಸ್ ನರಸಿಂಹ ಅವರಿದ್ದ ಪೀಠ ಸೂಚಿಸಿದೆ.
ಇಲ್ಲಿನ ನೂತನ ಸರ್ಕಾರಿ ಕಾನೂನು ಕಾಲೇಜು ಗ್ರಂಥಾಲಯದಲ್ಲಿ ಹಿಂದೂಗಳ ಬಗ್ಗೆ ಭೀತಿ ಹುಟ್ಟಿಸುವ ಪುಸ್ತಕಗಳನ್ನು ಇರಿಸಲಾಗಿದೆ ಎಂದು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಆರೋಪಿಸಿತ್ತು ಎಂದು ವರದಿಯಾಗಿದೆ.
ಅಲ್ಲಿಗೇ ನಿಲ್ಲದ ಘಟನೆ ಪ್ರೊ ರೆಹಮಾನ್ ಅವರ ಅಮಾನತು, ರಾಜೀನಾಮೆ ಹಾಗೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವವರೆಗೆ ಮುಂದುವರೆಯಿತು. ಡಾ ಫರ್ಹತ್ ಖಾನ್ ಅವರು ಬರೆದ 'ಸಾಮೂಹಿಕ ಹಿಂಸಾಚಾರ ಮತ್ತು ಅಪರಾಧ ನ್ಯಾಯ ವ್ಯವಸ್ಥೆ' ಮತ್ತು 'ಮಹಿಳೆ ಮತ್ತು ಕ್ರಿಮಿನಲ್ ಕಾನೂನು' ಎಂಬ ಎರಡು ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ಈ ಗ್ರಂಥಗಳಲ್ಲೊಂದು ವಿಮರ್ಶಿಸಿತ್ತು.
ಪ್ರೊ. ರೆಹಮಾನ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಮಿರ್ಜಾ ಬೇಗ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವರು ಟ್ವೀಟ್ ಮಾಡಿದ್ದರು. ಅಲ್ಲದೆ ಎಲ್‌ಎಲ್‌ಎಂ ಓದುತ್ತಿದ್ದ; ಎಬಿವಿಪಿ ಜೊತೆ ನಂಟು ಹೊಂದಿದ್ದ ವಿದ್ಯಾರ್ಥಿಯೊಬ್ಬ ಸಲ್ಲಿಸಿದ್ದ ದೂರಿನ ಮೇರೆಗೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]