ಭಗವಾಧ್ವಜ ಮಳಿಗೆಗಳಲ್ಲಿ ಮಾತ್ರವೇ ಹಿಂದೂಗಳ ವ್ಯಾಪಾರ: ಶರಣ್‌ ಪಂಪ್‌ವೆಲ್‌ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಶ್ರೀ ಮಂಗಳಾದೇವಿ ದೇವಸ್ಥಾನದ ಸುತ್ತಮುತ್ತಲಿನ ಹಿಂದೂಗಳು ನಡೆಸುತ್ತಿದ್ದ ಅಂಗಡಿಗಳ ಮೇಲೆ ಶರಣ್ ಪಂಪ್‌ವೆಲ್ ಅವರು ತಮ್ಮ ಕಾರ್ಯಕರ್ತರೊಂದಿಗೆ ಅಕ್ಟೋಬರ್‌ 16ರಂದು ಭಗವಾಧ್ವಜ ಕಟ್ಟಿದ್ದರು.
Sharan Pumpwell
Sharan Pumpwell

ಮಂಗಳೂರಿನ ಮಂಗಳಾದೇವಿ ಜಾತ್ರೆಯಲ್ಲಿ ಭಗವಾಧ್ವಜ ಕಟ್ಟಿರುವ ಹಿಂದೂಗಳ ಮಳಿಗೆಗಳಲ್ಲಿ ಮಾತ್ರವೇ ಹಿಂದೂ ಗ್ರಾಹಕರು ವ್ಯಾಪಾರ ಮಾಡಬೇಕು ಎಂದು ಪ್ರಕಟಣೆ ಹೊರಡಿಸಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಮಂಗಳೂರು ನಗರ ದಕ್ಷಿಣ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ನ ರಜಾಕಾಲೀನ ಪೀಠವು ಮಧ್ಯಂತರ ತಡೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಶರಣ್‌ ಪಂಪ್‌ವೆಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಕೆಲ ಕಾಲ ಪ್ರಕರಣವನ್ನು ಆಲಿಸಿದ ಪೀಠವು ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್ ಅವರು, ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಪ್ರಕಟಣೆ ಹೊರಡಿಸಲಾಗಿದೆ ಎಂಬ ದೂರಿನಲ್ಲಿ ಹುರುಳಿಲ್ಲ. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲು ಮಾಡಿಕೊಂಡಿರುವ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಮತ್ತು ದುರುದ್ದೇಶದಿಂದ ಕೂಡಿದೆ. ಆದ್ದರಿಂದ, ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ಶ್ರೀ ಮಂಗಳಾದೇವಿ ದೇವಸ್ಥಾನದ ಸುತ್ತಮುತ್ತಲಿನ ಹಿಂದೂಗಳು ನಡೆಸುತ್ತಿದ್ದ ಅಂಗಡಿಗಳ ಮೇಲೆ ಶರಣ್ ಪಂಪ್‌ವೆಲ್ ಅವರು ತಮ್ಮ ಕಾರ್ಯಕರ್ತರೊಂದಿಗೆ ಅಕ್ಟೋಬರ್‌ 16ರಂದು ಭಗವಾಧ್ವಜ ಕಟ್ಟಿದ್ದರು. ಈ ಕ್ರಮಗಳು ಮತ್ತು ಹೇಳಿಕೆಗಳು ಧಾರ್ಮಿಕ ವೈಷಮ್ಯವನ್ನು ಕೆರಳಿಸುವ ಉದ್ದೇಶ ಹೊಂದಿದೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ ಮನೋಹರ್ ಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ ಶರಣ್ ಪಂಪ್‌ವೆಲ್ ಹಾಗೂ ಇತರರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Stories

No stories found.
Kannada Bar & Bench
kannada.barandbench.com