ಕನ್ಯಾಕುಮಾರಿಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರು; ಜನಗಣತಿ ವಾಸ್ತವವನ್ನು ಬಿಂಬಿಸುತ್ತಿಲ್ಲ: ಮದ್ರಾಸ್ ಹೈಕೋರ್ಟ್

ಪರಿಶಿಷ್ಟ ಜಾತಿಯ ಹಿಂದೂಗಳು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಅದೇ ಧರ್ಮವನ್ನು ಪ್ರತಿಪಾದಿಸುತ್ತಿದ್ದರೂ, ಮೀಸಲಾತಿ ಪಡೆಯುವ ಉದ್ದೇಶಕ್ಕಾಗಿ ದಾಖಲೆಯಲ್ಲಿ ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
Religious symbols

Religious symbols

ಧರ್ಮದ ವಿಷಯದಲ್ಲಿ ಕನ್ಯಾಕುಮಾರಿ ಜಿಲ್ಲೆಯ ಜನಸಂಖ್ಯಾ ವಿವರ 1980ರಿಂದ ವಿಲೋಮವಾಗಿದ್ದು 2011ರ ಜನಗಣತಿ ನಮಗೆ ಬೇರೆಯದೇ ವಿವರ ನೀಡಿದರೂ ಜಿಲ್ಲೆಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಹೇಳಿದೆ [ಫಾದರ್‌ ಪಿ. ಜಾರ್ಜ್ ಪೊನ್ನಯ್ಯ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ನಡುವಣ ಪ್ರಕರಣ].

ಪರಿಶಿಷ್ಟ ಜಾತಿಯ ಅನೇಕ ಹಿಂದೂಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಅದೇ ಧರ್ಮವನ್ನು ಪ್ರತಿಪಾದಿಸುತ್ತಿದ್ದರೂ ಮೀಸಲಾತಿ ಪಡೆಯುವ ಉದ್ದೇಶಕ್ಕಾಗಿ ದಾಖಲೆಯಲ್ಲಿ ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುತ್ತಾರೆ ಎಂಬ ಅಂಶವನ್ನು ಜನಗಣತಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಂತಹ ವ್ಯಕ್ತಿಗಳನ್ನು ಕ್ರಿಪ್ಟೋ-ಕ್ರೈಸ್ತರು (ಗೌಪ್ಯ ಕ್ರೈಸ್ತರು) ಎಂದು ಕರೆದಿರುವ ಪೀಠ “ಈ ವಸ್ತುವನ್ನು ಆಧರಿಸಿ (ರುದ್ರ ತಾಂಡವಂ) ಆಧಾರಿತ ಚಲನಚಿತ್ರವೂ ಬಂದಿತ್ತು. ಸೌಜನ್ಯಕ್ಕಾಗಿ, ಅಂತಹ ವರ್ಗಕ್ಕೆ ಸೇರಿದ ನ್ಯಾಯಾಧೀಶರೊಬ್ಬರ ಹೆಸರನ್ನು ಉಲ್ಲೇಖಿಸುವುದಿಲ್ಲ. ಅವರ ಹುದ್ದೆ ಪ್ರಶ್ನಿಸಿ ರಿಟ್ ಅರ್ಜಿ ಕೂಡ ಸಲ್ಲಿಕೆಯಾಗಿತ್ತು. ಎಲ್ಲರೂ ಸತ್ಯ ಗೊತ್ತಿಲ್ಲದವರಂತೆ ನಟಿಸಿದರು. ಆದರೆ ಅವರು ಮರಣಹೊಂದಿದಾಗ, ಅವರನ್ನು ಕ್ರೈಸ್ತ ವಿಧಿ ವಿಧಾನಗಳ ಪ್ರಕಾರ ಸಮಾಧಿ ಮಾಡಲಾಯಿತು, ”ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಶ್ಚಿಮ ಕನ್ಯಾಕುಮಾರಿ ಜಿಲ್ಲೆಯ ಆರುಮಣೈ ಎಂಬ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾದ ದ್ವೇಷ ಭಾಷಣ ಪ್ರಕರಣ ರದ್ದುಗೊಳಿಸುವಂತೆ ಕೋರಿ ಫಾದರ್‌ ಪಿ ಜಾರ್ಜ್‌ ಪೊನ್ನಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾ. ಜಿ ಆರ್ ಸ್ವಾಮಿನಾಥನ್ ಅವರು ನೀಡಿದ ಆದೇಶದಲ್ಲಿ ಮೇಲಿನಂತೆ ತಿಳಿಸಲಾಗಿದೆ.

ಕನ್ಯಾಕುಮಾರಿ ಜಿಲ್ಲೆಯಲ್ಲಿ ಕ್ರೈಸ್ತರ ಜನಸಂಖ್ಯೆ ಶೇ 62ರಷ್ಟು ದಾಟಿದೆ ಎಂದು ಅರ್ಜಿದಾರರು ತಮ್ಮ ಭಾಷಣದಲ್ಲಿ ಹೇಳಿದ್ದರು ಎಂದು ಗಮನಿಸಿದ ನ್ಯಾಯಾಲಯ ಇಂತಹ ಹೇಳಿಕೆಗೆ ಕಾರಣ ಜನಗಣತಿ ವೇಳೆ ಜನಸಂಖ್ಯೆಯನ್ನು ಸರಿಯಾಗಿ ಬಿಂಬಿಸದಿರುವುದೇ ಆಗಿದೆ ಎಂಬುದಾಗಿ ತಿಳಿಸಿತು.

Also Read
ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ: ವಿರೋಧಪಕ್ಷಗಳಿಂದ ಭಾರೀ ಪ್ರತಿರೋಧ

“ಅದಕ್ಕಾಗಿಯೇ, ಜನಗಣತಿಯ ಅಂಕಿಅಂಶಗಳ ಹೊರತಾಗಿಯೂ, ಕನ್ಯಾಕುಮಾರಿ ಜಿಲ್ಲೆಯಲ್ಲಿ ಕ್ರೈಸ್ತರು ಶೇ 62ರಷ್ಟು ದಾಟಿದ್ದಾರೆ ಎಂದು ಅರ್ಜಿದಾರರು ಹೆಮ್ಮೆಪಡುತ್ತಾರೆ. ಅವರು (ಕ್ರೈಸ್ತರು) ಶೀಘ್ರದಲ್ಲೇ ಶೇಕಡಾ 72 ರ ಸಂಖ್ಯೆಯನ್ನು ತಲುಪುತ್ತಾರೆ ಎಂದೂ ಅವರು ಲೆಕ್ಕ ಹಾಕುತ್ತಾರೆ.ʼನಾನು ಹಿಂದೂಗಳನ್ನು ಎಚ್ಚರಿಸುತ್ತೇನೆʼ ಮತ್ತು ತಮ್ಮ ಬೆಳವಣಿಗೆಯನ್ನು ಯಾವುದೂ ತಡೆಯಲು ಸಾಧ್ಯವಿಲ್ಲ ಎಂದು ಹೇಳುವಾಗ ಅವರ ವಿಜಯೋತ್ಸವ ಸ್ಪಷ್ಟವಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ವಿಭಜನೆಯ ಗಲಭೆ ಮತ್ತು ಲಕ್ಷಾಂತರ ಜನರ ಸಾವಿನ ಬಳಿಕ ಸ್ವಾತಂತ್ರ್ಯದ ಸಮಯದಲ್ಲಿ ದೇಶದ ಸಂಸ್ಥಾಪಕರು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡ ದೇಶದ ಜಾತ್ಯತೀತ ಸ್ವರೂಪದ ಮೇಲೆ ಇಂತಹ ಪ್ರವೃತ್ತಿಗಳು ಪರಿಣಾಮ ಬೀರಬಹುದು ಎಂದು ನ್ಯಾಯಾಲಯ ಹೇಳಿದೆ.

ವ್ಯಕ್ತಿಗಳು ತಮ್ಮ ಧರ್ಮ ಪ್ರತಿಪಾದಿಸಲು ಮತ್ತು ಪ್ರಚಾರ ಮಾಡಲು ಸಂವಿಧಾನ ಮೂಲಭೂತ ಹಕ್ಕು ಒದಗಿಸಿದೆ. ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ನಂಬಿಕೆಯ ಆಧಾರದ ಮೇಲೆ ತನ್ನ ಧರ್ಮವನ್ನು ಬದಲಾಯಿಸಲು ಬಯಸಿದರೆ, ಅವನ ಆಯ್ಕೆಯನ್ನು ಗೌರವಿಸಬೇಕು. ಆದರೆ ಧಾರ್ಮಿಕ ಮತಾಂತರವು ಗುಂಪು ಕಾರ್ಯಸೂಚಿಯಾಗಬಾರದು ಎಂದು ನ್ಯಾಯಾಲಯ ಒತ್ತಿಹೇಳಿದೆ.

“ದಿಲೀಪ್ ಕುಮಾರ್ ಎಆರ್ ರೆಹಮಾನ್ ಆದರು. ಯುವನ್ ಶಂಕರ್ ರಾಜಾ ಈಗ ಮುಸ್ಲಿಂ. ಟಿ ರಾಜೇಂದರ್ ಅವರ ಪುತ್ರರೊಬ್ಬರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ. ಇವುಗಳು ಸಂಪೂರ್ಣವಾಗಿ ಅರ್ಥವಾಗುವಂತಹುದು ಮತ್ತು ಇದಕ್ಕೆ ಆಕ್ಷೇಪಿಸಲಾಗದು. ಆದರೆ ಧಾರ್ಮಿಕ ಮತಾಂತರಗಳು ಒಂದು ಗುಂಪು ಕಾರ್ಯಸೂಚಿ ಆಗಬಾರದು. ನಮ್ಮ ಸಂವಿಧಾನವು ವೈವಿದ್ಯ ಸಂಸ್ಕೃತಿಯ ಬಗ್ಗೆ ಹೇಳುತ್ತದೆ. ಈ ಗುಣವನ್ನು ಕಾಪಾಡಿಕೊಳ್ಳಬೇಕು, ”ಎಂದು ಏಕ-ಸದಸ್ಯ ಪೀಠ ತಿಳಿಸಿತು.

ಹೀಗಾಗಿ, ಧಾರ್ಮಿಕ ಜನಸಂಖ್ಯಾ ಮಾಹಿತಿಗೆ ಸಂಬಂಧಿಸಿದಂತೆ 2022 ರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. "ಯಥಾಸ್ಥಿತಿಗೆ ಗಂಭೀರ ಧಕ್ಕೆ ಒದಗಿದರೆ ವಿಪತ್ತಿನ ಪರಿಣಾಮಗಳು ಒದಗಬಹುದು. ಕಾನೂನು ವ್ಯವಸ್ಥೆಯನ್ನು ಎತ್ತಿಹಿಡಿಯಲು ಮತ್ತು ಕಾಪಾಡಲು ಸರ್ಕಾರವಿದೆ. ಹಾಗೆಂದು, ಇದೆಲ್ಲವೂ ಮಿತಿಮೀರಿದರೆ ಸರಿಪಡಿಸಲಾಗದು," ಎಂದು ನ್ಯಾಯಾಲಯ ಎಚ್ಚರಿಸಿತು.

[ಆದೇಶವನ್ನು ಓದಿ]

Attachment
PDF
Fr__P__George_Ponnaiah_v__The_Inspector_of_Police.pdf
Preview

Related Stories

No stories found.
Kannada Bar & Bench
kannada.barandbench.com