ಬೇಹುಗಾರಿಕೆ ಪ್ರಕರಣ: ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾಗೆ ಜೂ.9ರವರೆಗೆ ನ್ಯಾಯಾಂಗ ಬಂಧನ

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಮತ್ತು ಅಧಿಕೃತ ರಹಸ್ಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮೇ 16ರಂದು ಹರಿಯಾಣದ ಹಿಸಾರ್ ಪೊಲೀಸರು ಜ್ಯೋತಿ ಮಲ್ಹೋತ್ರಾರನ್ನು ಬಂಧಿಸಿದ್ದರು.
Jyoti Malhotra
Jyoti MalhotraYouTube
Published on

ಪಾಕಿಸ್ತಾನದ ಕೆಲವು ಗುಪ್ತಚರ ಅಧಿಕಾರಿಗಳೊಂದಿಗೆ (ಪಿಐಒ) ಸಂಪರ್ಕದಲ್ಲಿದ್ದ ಹಾಗೂ ಬೇಹುಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಹರಿಯಾಣದ ಹಿಸಾರ್‌ನ ನ್ಯಾಯಾಲಯ ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಮತ್ತು ಅಧಿಕೃತ ರಹಸ್ಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮೇ 16ರಂದು ಹಿಸಾರ್ ಪೊಲೀಸರು ಮಲ್ಹೋತ್ರಾ ಅವರನ್ನು ಬಂಧಿಸಿದ್ದರು. ಆಕೆಯನ್ನು ಆರಂಭದಲ್ಲಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು, ನಂತರ ಕಸ್ಟಡಿಯನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಲಾಗಿತ್ತು.

ಸೋಮವಾರ ಜ್ಯೋತಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ, ಅವರು ಜೂನ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ಪೊಲೀಸರು ಈ ಹಿಂದೆ ಮಲ್ಹೋತ್ರಾ ಅವರಿಂದ ಮೂರು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್ ಮತ್ತು ಇತರ ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದರು. ಈ ಉಪಕರಣಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಜ್ಯೋತಿ ಕಸ್ಟಡಿಯಲ್ಲಿದ್ದ ವೇಳೆ ಆಕೆಯನ್ನು ವಿವಿಧ ತನಿಖಾ ಸಂಸ್ಥೆಗಳು ಸಹ ಪ್ರಶ್ನಿಸಿದ್ದವು.

ಇತ್ತೀಚೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹರಡುತ್ತಿರುವ ಕೆಲವು ವದಂತಿಗಳನ್ನು ನಿರಾಕರಿಸಲು ಪೊಲೀಸರು ಪತ್ರಿಕಾ ಹೇಳಿಕೆ ನೀಡಿದ್ದನ್ನು ಇಲ್ಲಿ ನೆನೆಯಬಹುದು. ಆರೋಪಿಯು ಯಾವುದೇ ಮಿಲಿಟರಿ, ರಕ್ಷಣಾ ಅಥವಾ ಕಾರ್ಯತಂತ್ರದ ಮಾಹಿತಿಯನ್ನು ಹೊಂದಿರುವ ಬಗ್ಗೆ ಈವರೆಗೆ ಯಾವುದೇ ಪುರಾವೆಗಳು ಹೊರಬಂದಿಲ್ಲ ಎಂದು ಪೊಲೀಸ್‌ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿತ್ತು.

ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಸಾಧನಗಳ ವಿಶ್ಲೇಷಣೆಯ ಫಲಿತಾಂಶ ಇನ್ನೂ ಬಂದಿಲ್ಲ. ಮಲ್ಹೋತ್ರಾ ಅವರಿಗೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿರುವ ಬಗ್ಗೆಯಾಗಲಿ ಅಥವಾ ಯಾವುದೇ ಭಯೋತ್ಪಾದಕ ಕೃತ್ಯಗಳಲ್ಲಿ ಅವರು ಭಾಗಿಯಾಗಿರುವ ಬಗ್ಗೆಯಾಗಲಿ ಯಾವುದೇ ಪುರಾವೆಗಳು ಈವರೆಗೂ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಹೋತ್ರಾ ಅವರು ಯಾವುದೇ ಪಿಐಒ ಜೊತೆಗೆ ವಿವಾಹವಾಗಿರುವುದಾಗಲಿ ಅಥವಾ ಬೇರೆ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆಯಾಗಲಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಬಹಿರಂಗಪಡಿಸಲಾಗಿದೆ.

Kannada Bar & Bench
kannada.barandbench.com