

ಮಾರಕ ಎಚ್‌ಐವಿ ಸೋಂಕಿಗೆ ತುತ್ತಾದ ವ್ಯಕ್ತಿ 2016ರ ಅಂಗವಿಕಲರ ಹಕ್ಕುಗಳ ಕಾಯಿದೆಯಡಿ ವಿಕಲಚೇತನ ವ್ಯಕ್ತಿ ಎನಿಸಿಕೊಳ್ಳಲಿದ್ದು ಉದ್ಯೋಗ ತಾರತಮ್ಯದ ವಿರುದ್ಧ ಕಾನೂನು ರಕ್ಷಣೆಗೆ ಅರ್ಹ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ [ಹೆಸರು ಬಹಿರಂಗಪಡಿಸದ ವ್ಯಕ್ತಿ ಮತ್ತು ಗಡಿ ಭದ್ರತಾ ಪಡೆ ಇನ್ನಿತರರ ನಡುವಣ ಪ್ರಕರಣ] .
ಎಚ್‌ಐವಿ ಪೀಡಿತ ಉದ್ಯೋಗಿಯೊಬ್ಬರು ನಿಸ್ಸಂದೇಹವಾಗಿ ದೀರ್ಘಕಾಲದ ದೈಹಿಕ ದೌರ್ಬಲ್ಯದಿಂದ ಬಳಲಲಿದ್ದು ಸಮಾಜದಲ್ಲಿ ಅವರು ಪೂರ್ಣ ಮತ್ತು ಪರಿಣಾಮಕಾರಿಯಾಗಿ ತೊಡಗಿಕೊಳ್ಳಲು ಅಡ್ಡಿಯಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಎಚ್ಐವಿ ಪೀಡಿತರು ತಾವು ನೇಮಕಗೊಂಡಿದ್ದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಹೋದರೆ ಅವರಿಗೆ ಪರ್ಯಾಯ ಹುದ್ದೆ ನೀಡುವ ಮೂಲಕ ಸಮಂಜಸ ಸೌಕರ್ಯ ಕಲ್ಪಿಸಬೇಕು. ಅಂತಹ ಹುದ್ದೆ ತಕ್ಷಣ ಲಭ್ಯ ಇಲ್ಲದಿದ್ದರೆ ಅವರಿಗೆ ಪರ್ಯಾಯ ನೇಮಕಾತಿ ಸೌಕರ್ಯ ಕಲ್ಪಿಸಬೇಕು ಎಂದಿದೆ.
ವೈದ್ಯಕೀಯ ಕಾರಣಗಳಿಗಾಗಿ ಸೇವೆಯಿಂದ ವಜಾಗೊಂಡಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಎಚ್‌ಐವಿ ಪೀಡಿತ ಪೇದೆಯೊಬ್ಬರನ್ನು ಪುರಸ್ಕರಿಸಿದ ನ್ಯಾಯಾಲಯ ಈ ತೀರ್ಪು ನೀಡಿತು. ಎಚ್‌ಐವಿ ಪೀಡಿತ ಎಂಬ ಕಾರಣಕ್ಕೆ ಏಪ್ರಿಲ್ 2019ರಲ್ಲಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದ್ದು, ಅಕ್ಟೋಬರ್ 2020ರಲ್ಲಿ ಅವರ ಮೇಲ್ಮನವಿ ತಿರಸ್ಕರಿಸಲಾಗಿತ್ತು.
ಆದರೆ ಬಿಎಸ್‌ಎಫ್ ಹೊರಡಿಸಿದ ಆದೇಶ ವಿಕಲಚೇತನರ ಹಕ್ಕುಗಳ ಕಾಯಿದೆಯ ಜೊತೆಗೆ ಎಚ್‌ಐವಿ ಮತ್ತು ಏಡ್ಸ್ ತಡೆ ಹಾಗೂ ನಿಯಂತ್ರಣ ಕಾಯಿದೆ- 2017ಕ್ಕೆ ವಿರುದ್ಧವಾಗಿವೆ ಎಂದ ನ್ಯಾಯಾಲಯ ಕಟ್ಟುನಿಟ್ಟಾದ ಶಾಸನಬದ್ಧ ಷರತ್ತುಗಳನ್ನು ಈಡೇರಿಸದೆ ಹೋದರೆ ಹೊರತು ಎಚ್ಐವಿ ಪೀಡಿತ ವ್ಯಕ್ತಿಯ ಉದ್ಯೋಗವನ್ನು ವಜಾಗೊಳಿಸುವುದನ್ನು ಎರಡೂ ಕಾಯಿದೆಗಳು ನಿಷೇಧಿಸುತ್ತವೆ ಎಂದಿತು.
ಎಚ್‌ಐವಿ ಕಾಯಿದೆಯ ದೃಷ್ಟಿಯಿಂದ ನೋಡಿದರೂ ಅಥವಾ ಆರ್‌ಪಿಡಬ್ಲ್ಯೂಡಿ ಕಾಯಿದೆಯ ದೃಷ್ಟಿಯಿಂದ ನೋಡಿದರೂ, ಅರ್ಜಿದಾರ ಎಚ್‌ಐವಿ ಪೀಡಿತ ಎಂಬ ಒಂದೇ ಕಾರಣಕ್ಕೆ ಬಿಎಸ್‌ಎಫ್‌ನಲ್ಲಿ ಕರ್ತವ್ಯ ನಿರ್ವಹಿಸಲು ಯೋಗ್ಯನಲ್ಲ ಎಂದು ಪರಿಗಣಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತು.
[ತೀರ್ಪಿನ ಪ್ರತಿ]