ನಿಗದಿತ ಸಮಯದಲ್ಲಿ ವಾರ್ಡ್ ಸಮಿತಿ, ಗ್ರಾಮ ಸಭೆ ನಡೆಸಲು ಕೋರಿಕೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ವಾರ್ಡ್, ಗ್ರಾಮ ಸಭೆಗಳನ್ನು ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ನಡೆಸಬೇಕು ಎಂದು 2020ರಲ್ಲಿ ಕಡ್ಡಾಯಗೊಳಿಸಲಾಗಿದ್ದರೂ ರಾಜ್ಯದ ಯಾವುದೇ ಭಾಗದಲ್ಲಿ ಇದು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
High Court of Karnataka
High Court of Karnataka
Published on

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ಹಾಗೂ ಪಂಚಾಯಿತಿಗಳಲ್ಲಿ ವಾರ್ಡ್ ಸಭೆ/ಗ್ರಾಮ ಸಭೆಗಳನ್ನು ನಿಗದಿತ ಸಮಯದಲ್ಲಿ ನಡೆಸುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಜಿಗಣಿಯ ಐಡಿಯಲ್ ಡೆಮಾಕ್ರಟಿಕ್ ಎಂಪವರ್‌ಮೆಂಟ್ ಅಸೋಸಿಯೇಷನ್ (ಐಡಿಯಾ) ಕಾರ್ಯದರ್ಶಿ ಅಂಜುಲಾ ವಿಶ್ವನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಪೌರಾಡಳಿತ ನಿರ್ದೇಶನಾಲಯ, ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯಕ್ಕೆ ನೋಟಿಸ್ ಜಾರಿಗೊಳಿಸಿತು. ಇದೇ ವೇಳೆ ಅರ್ಜಿಯಲ್ಲಿ ಜಿಗಣಿ ಪುರಸಭೆಯಲ್ಲಿ ವಾರ್ಡ್ ಸಮಿತಿ ರಚನೆ ಆಗಿಲ್ಲ ಎಂದೂ ದೂರಲಾಗಿರುವ ಹಿನ್ನೆಲೆಯಲ್ಲಿ ಜಿಗಣಿ ಪುರಸಭೆ ಮುಖ್ಯಾಧಿಕಾರಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಪೀಠ ಆಗಸ್ಟ್‌ 8ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ವಿಶ್ವನಾಥ ವಾದ ಮಂಡಿಸಿದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಪೌರನಿಗಮಗಳ ಕಾಯಿದೆ-1964ರ ಸೆಕ್ಷನ್ 80ಎಂ ಪ್ರಕಾರ ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಿ, ಅವುಗಳ ಕಾರ್ಯನಿರ್ವಹಣೆ ಕಡ್ಡಾಯವಾಗಿದೆ. ಅದೇ ರೀತಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯಿದೆ-1993ರ ಸೆಕ್ಷನ್ 3ರ ಪ್ರಕಾರ ಪಂಚಾಯಿತಿಗಳಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳನ್ನು ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ನಡೆಸಬೇಕು ಎಂದಿದೆ. 2020ರಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿದ್ದರೂ, ರಾಜ್ಯದ ಯಾವ ಕಡೆಯೂ ಇದು ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ಜಿಗಣಿ ಪುರಸಭೆ ವಿಚಾರವೂ ಇದಕ್ಕೆ ಹೊರತಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಈ ವಿಚಾರವಾಗಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಹಾಗೂ ವಾರ್ಡ್ ಸಮಿತಿ, ಗ್ರಾಮ ಸಭೆ, ವಾರ್ಡ್ ಸಭೆ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com