ಮನೆ ಊಟ, ಹಾಸಿಗೆಗೆ ದರ್ಶನ್‌ ಕೋರಿಕೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌; ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ

ಕರ್ನಾಟಕ ಬಂಧೀಖಾನೆ ಕಾಯಿದೆಗೆ ತಿದ್ದುಪಡಿಯಾಗಿದೆ. ನಿಯಮಗಳನ್ನು ರೂಪಿಸಲಾಗಿದೆ. ಜೈಲಿನ ಕೈಪಿಡಿ ತೋರಿಸಬೇಕು. ನಿಯಮಗಳನ್ನು ಮುಂದಿರಿಸಬೇಕು. ಜೈಲು ಪರಿಷ್ಕರಣ ನಿಯಮ ಎಂದಿದೆ. ಅದನ್ನು ತೋರಿಸಬೇಕು ಎಂದು ದರ್ಶನ್‌ ವಕೀಲರಿಗೆ ಸೂಚಿಸಿದ ನ್ಯಾಯಾಲಯ.
Darshan and Karnataka HC
Darshan and Karnataka HC

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎರಡನೇ ಆರೋಪಿ ನಟ ದರ್ಶನ್ ತೂಗುದೀಪ ಶ್ರೀನಿವಾಸ ಅವರು ಮನೆ ಊಟ ಪಡೆಯಲು ಅನುಮತಿಸುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮೇಲ್ವಿಚಾರಕರಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ದರ್ಶನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ದರ್ಶನ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಕರ್ನಾಟಕ ಬಂಧೀಖಾನೆ ಕಾಯಿದೆ 1963 ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿಗಳು ಮನೆಯಿಂದ ಆಹಾರ, ಹಾಸಿಗೆ, ಬಟ್ಟೆ, ಪುಸ್ತಕ ಇತ್ಯಾದಿ ವಸ್ತುಗಳನ್ನು ತರಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ, ಅನುಮತಿ ನೀಡಬೇಕು ಎಂದರು.

ಆಗ ಪೀಠವು ಕರ್ನಾಟಕ ಬಂಧೀಖಾನೆ ಕಾಯಿದೆಗೆ ತಿದ್ದುಪಡಿಯಾಗಿದೆ. ನಿಯಮಗಳನ್ನು ರೂಪಿಸಲಾಗಿದೆ. ಜೈಲಿನ ಕೈಪಿಡಿ ತೋರಿಸಬೇಕು. ನಿಯಮಗಳನ್ನು ಮುಂದಿರಿಸಬೇಕು. ಜೈಲು ಪರಿಷ್ಕರಣ ನಿಯಮ ಎಂದಿದೆ. ಅದನ್ನು ತೋರಿಸಬೇಕು. ಈ ನಡುವೆ, ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕಿದೆ. ಆನಂತರ ಆದೇಶ ಮಾಡಲಾಗುವುದು ಎಂದರು.

Also Read
ಮನೆ ಊಟ, ಹಾಸಿಗೆ, ಬಟ್ಟೆ, ಪುಸ್ತಕ ಪಡೆಯಲು ಜೈಲು ಅಧಿಕಾರಿಗೆ ನಿರ್ದೇಶನ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ನಟ ದರ್ಶನ್‌

"ಮುಂದುವರಿದು, ಪೀಠವು ಸಂಬಂಧಿತ ಎಲ್ಲಾ ನಿಬಂಧನೆಗಳನ್ನು ಒಗ್ಗೂಡಿಸಿ ಸಲ್ಲಿಸಬೇಕು. ಜೈಲು ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆಯೇ? ವಿಚಾರಣಾಧೀನ ನ್ಯಾಯಾಲಯದಲ್ಲಿ ಈ ಕೋರಿಕೆಯ ಮನವಿ ಮಾಡಲಾಗಿದೆಯೇ? ಎಂಬ ಎಲ್ಲಾ ಅಂಶಗಳ ಮೆಮೊ ಸಲ್ಲಿಸಬೇಕು" ಎಂದು ದರ್ಶನ್‌ ಪರ ವಕೀಲ ಫಣೀಂದ್ರ ಅವರಿಗೆ ಸೂಚಿಸಿದರು.

ಅಂತಿಮವಾಗಿ ರಾಜ್ಯ ಸರ್ಕಾರ ಮತ್ತು ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿರುವ ಪಿ ಪ್ರಸನ್ನಕುಮಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ನ್ಯಾಯಾಲಯವು ಜುಲೈ 18ಕ್ಕೆ ಮುಂದೂಡಿತು. 

Kannada Bar & Bench
kannada.barandbench.com