ಕೈದಿಗಳಿಗೆ ಮನೆ ಊಟ, ಅಗತ್ಯ ವಸ್ತುಗಳ ಪೂರೈಕೆಗೆ ಮಾರ್ಗಸೂಚಿ ರೂಪಿಸಲು ಸಕಾಲ: ಹೈಕೋರ್ಟ್ ಅಭಿಮತ
ಜೈಲಿನಲ್ಲಿರುವ ಕೈದಿಗಳಿಗೆ ಮನೆ ಊಟ ಹಾಗೂ ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತು ಮಾರ್ಗಸೂಚಿಗಳನ್ನು ರೂಪಿಸಲು ಕಾಲ ಕೂಡಿ ಬಂದಿದೆ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಮೌಖಿಕವಾಗಿ ಹೇಳಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೈಲಿನಲ್ಲಿರುವ ಮೊದಲನೇ ಆರೋಪಿ ಪವಿತ್ರಾ ಗೌಡ, 10ನೇ ಆರೋಪಿ ನಾಗರಾಜ್ ಮತ್ತು 11ನೇ ಆರೋಪಿ ಲಕ್ಷ್ಮಣ್ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದ ಬೆಂಗಳೂರಿನ ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ನಾಗರಾಜ್ ಮತ್ತು ಲಕ್ಷ್ಮಣ್ ಪ್ರತಿನಿಧಿಸಿದ್ದ ವಕೀಲ ಎಸ್ ಸುನೀಲ್ ಕುಮಾರ್ ಅವರು “ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾಡಿರುವ ಆದೇಶವನ್ನು ತೋರಿಸುವ ಮೂಲಕ ಜೈಲು ಅಧಿಕಾರಿಗಳು ಅಕ್ಷರಶಃ ಇತರೆ ಆರೋಪಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ, ಅವರನ್ನು ಅಮಾನುಷ ರೀತಿಯಲ್ಲಿ ನಡೆಸಿಕೊಳ್ಳಬಾರದು ಎಂದು ವಿಚಾರಣಾಧೀನ ನ್ಯಾಯಾಲಯ ಹೇಳಿದೆ. ಇದರಲ್ಲಿ ತಪ್ಪೇನಿದೆ” ಎಂದರು.
ಆಗ ಪೀಠವು “ಯಾವೆಲ್ಲಾ ಕೈದಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಪ್ರಾಸಿಕ್ಯೂಷನ್ ಒದಗಿಸಬೇಕು. ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಯಾರಿಗೂ ವಿಶೇಷ ಸೌಲಭ್ಯ ಕಲ್ಪಿಸಲಾಗದು. ಜೈಲು ಕೈಪಿಡಿಯನ್ನು ಪಾಲಿಸಲೇಬೇಕು. ಆಹಾರ ಅಥವಾ ಬೆಡ್ ಅಥವಾ ಇನ್ನಾವುದೇ ವಿಚಾರವಿರಲಿ ಜೈಲಿನಲ್ಲಿ ಸೌಲಭ್ಯ ಕಲ್ಪಿಸುವುದಕ್ಕೆ ಕಾನೂನು ರೂಪಿಸೋಣ. ಕೊಡಲೇಬಾರದು ಎಂದು ಹೇಳುತ್ತಿಲ್ಲ. ವೈದ್ಯರ ಸರ್ಟಿಫಿಕೇಟ್ ಇರಬೇಕಾಗುತ್ತದೆ. ಮಾರ್ಗಸೂಚಿ ರೂಪಿಸಲು ಕಾಲ ಕೂಡಿ ಬಂದಿದೆ” ಎಂದಿತು.
ಕಾಮಾಕ್ಷಿಪಾಳ್ಯ ಪೊಲೀಸರನ್ನು ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ಸುಪ್ರೀಂ ಕೋರ್ಟ್ ತೀರ್ಪು ಮತ್ತು ಜೈಲು ಕೈಪಿಡಿಯ ಪ್ರಕಾರ ನಡೆಯಲೇಬೇಕು. ಮಾರ್ಗಸೂಚಿ ರೂಪಿಸುವ ಸಂಬಂಧ ಪೀಠಕ್ಕೆ ಎಲ್ಲಾ ದಾಖಲೆಗಳನ್ನು ಒದಗಿಸಲಾಗುವುದು” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಕರ್ನಾಟಕ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಮಹಾನಿರ್ದೇಶಕರಾಗಿ (ಅಲೋಕ್ ಕುಮಾರ್) ನೇಮಕಗೊಂಡಿರುವ ಅಧಿಕಾರಿ ಖಡಕ್ ಇದ್ದಾರೆ” ಎಂದರು.
ಎಲ್ಲರ ವಾದ ಆಲಿಸಿದ ಪೀಠವು ನಟ ದರ್ಶನ್ ತಮಗೆ ಮನೆ ಊಟಕ್ಕೆ ಅವಕಾಶ ನೀಡಬೇಕು ಎಂದು ಕೋರಿ 2024ರ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೇ ಮಾರ್ಗಸೂಚಿ ರೂಪಿಸಬೇಕಿತ್ತು. ಆಗ ದರ್ಶನ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ಅರ್ಜಿ ಹಿಂಪಡೆದಿದ್ದರು. ಈಗ, ಜೈಲು ಕೈಪಿಡಿ, ಅಂದಿನ ಅರ್ಜಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿದರೆ ಈ ವಿಚಾರದ ಕುರಿತು ಮಾರ್ಗಸೂಚಿ ರೂಪಿಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ಫೆಬ್ರವರಿ 2ಕ್ಕೆ ಮುಂದೂಡಿತು.


