ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಶ್ರೀನಿವಾಸ್ ಅವರು ತಮಗೆ ಮನೆ ಊಟ ಪಡೆಯಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿಯನ್ನು ಮೊದಲಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ದರ್ಶನ್ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು ಕರ್ನಾಟಕ ಬಂಧೀಖಾನೆ ಕಾಯಿದೆ 1963ರ ಸೆಕ್ಷನ್ 30ರ ಅಡಿ ವಿಚಾರಣಾಧೀನ ಕೈದಿ ಮನೆ ಊಟ ಮತ್ತು ಇತ್ಯಾದಿ ಪಡೆಯಲು ಅರ್ಹರಾಗಿದ್ದಾರೆ ಎಂದರು.
ಆಗ ಪೀಠವು “ಇಂಥ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ ಯಾವುದೇ ನ್ಯಾಯಾಲಯ ಮಾಡಿರುವ ಒಂದು ಆದೇಶವನ್ನು ಕೊಡಿ ಎಂದರು. ಈ ವಿಚಾರದಲ್ಲಿ ಆದೇಶ ಮಾಡಲೇಬೇಕು ಎಂದಾದರೆ ವಿಸ್ತೃತವಾಗಿ ವಾದ ಆಲಿಸಬೇಕಿದೆ. ಅದಕ್ಕೆ ಕಾಲಾವಕಾಶಬೇಕಿದೆ. ಇದಕ್ಕೂ ಮುನ್ನ, ನೀವು ವಿಚಾರಣಾಧೀನ ನ್ಯಾಯಾಲಯದಲ್ಲಿ (ಮ್ಯಾಜಿಸ್ಟ್ರೇಟ್) ಅರ್ಜಿ ಸಲ್ಲಿಸಬಹುದು. ನಾಳೆಯೇ ಅರ್ಜಿ ಸಲ್ಲಿಸಿ, ಸೋಮವಾರ ಸರ್ಕಾರ ಆಕ್ಷೇಪಣೆ ಹಾಕಲು ಆದೇಶಿಸಲಾಗುವುದು. ಮ್ಯಾಜಿಸ್ಟ್ರೇಟ್ ಅವರು ಜುಲೈ 27ರ ಒಳಗೆ ಪ್ರಕರಣ ನಿರ್ಧರಿಸಬೇಕು ಎಂದು ಆದೇಶ ಮಾಡಲಾಗುವುದು. ಈ ಮಧ್ಯೆ, ಹಾಲಿ ಅರ್ಜಿಯನ್ನು ಬಾಕಿ ಉಳಿಸಲಾಗುವುದು” ಎಂದರು.
ಅಲ್ಪಕಾಲ ವಾದ-ಪ್ರತಿವಾದದ ಬಳಿಕ ದರ್ಶನ್ ಪರ ವಕೀಲ ಫಣೀಂದ್ರ ಅವರು ಪೀಠದ ಸಲಹೆಯಂತೆ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಲು ಒಪ್ಪಿದರು. ಅಂತಿಮವಾಗಿ ಪೀಠವು ಪ್ರಕರಣದ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತು.