ವಸತಿರಹಿತರು ದುಡಿಯದೇ ಅವರಿಗೆ ಎಲ್ಲವನ್ನೂ ಒದಗಿಸಿದರೆ ಅದು ಅಂತಹ ಜನರ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನಿರಾಶ್ರಿತರು, ಭಿಕ್ಷುಕರು, ಬಡವರಿಗೆ ಆಹಾರ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಲು ಸರ್ಕಾರ ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಬ್ರಿಜೇಶ್ ಆಚಾರ್ಯ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುವಾಗ ಅದು ಈ ಮಾತುಗಳನ್ನು ಹೇಳಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಹಾಗೂ ನ್ಯಾ. ಜಿ ಎಸ್ ಕುಲಕರ್ಣಿ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.
ನಿರಾಶ್ರಿತರು ಸಹ ದೇಶಕ್ಕಾಗಿ ಕೆಲಸ ಮಾಡಬೇಕು. ಎಲ್ಲವನ್ನೂ ಸರ್ಕಾರದಿಂದ ಒದಗಿಸಲಾಗದು. ಅರ್ಜಿ ಸಮಾಜದ ಇಂತಹ ವರ್ಗದ ಜನರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ನ್ಯಾಯಾಲಯ ಹೇಳಿತು.
ವಸತಿರಹಿತರು ಎಂದರೆ ಯಾರು, ನಗರದಲ್ಲಿ ಮತ್ತು ರಾಜ್ಯದಲ್ಲಿ (ಮಹಾರಾಷ್ಟ್ರ) ಅವರ ಸಂಖ್ಯೆ ಎಷ್ಟಿದೆ, ಸರ್ಕಾರದಿಂದ ಅವರಿಗೆ ನೀಡಬೇಕಾದ ಸವಲತ್ತುಗಳೇನು ಎಂಬುದರ ವಿವರ ಅರ್ಜಿಯಲ್ಲಿ ಇಲ್ಲ ಎಂದ ನ್ಯಾಯಾಲಯ ಕೋವಿಡ್ ವಿರುದ್ಧದ ಹೋರಾಟವನ್ನೂ ಒಳಗೊಂಡಂತೆ ಅಧಿಕಾರಿಗಳ ಯತ್ನವನ್ನು ಶ್ಲಾಘಿಸಿತು. ಸಮಸ್ಯೆಗಳಿಗೆ ಸಮರ್ಪಕವಾಗಿ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ತೀರ್ಮಾನಿಸಿತು.
ಇದೇ ವೇಳೆ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ ವಸತಿರಹಿತರು ಮತ್ತು ಬಡ ಜನರು ಶೌಚಾಲಯಗಳನ್ನು ಉಚಿತವಾಗಿ ಬಳಸುವ ಕುರಿತು ಪರಿಗಣಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತು.