ಕುಟುಂಬದ ದುಡಿಯುವ ಸದಸ್ಯರಂತೆಯೇ ಗೃಹಿಣಿಯ ಪಾತ್ರವೂ ಮುಖ್ಯ: ಸುಪ್ರೀಂ ಕೋರ್ಟ್

ಕುಟುಂಬಕ್ಕೆ ಮೂಲಾಧಾರವಾಗಿರುವ ನಿಖರ ವರಮಾನ ಇರುವ ಕುಟುಂಬ ಸದಸ್ಯರ ಪಾತ್ರದಷ್ಟೇ ಗೃಹಿಣಿಯ ಪಾತ್ರ ಮುಖ್ಯವಾಗಿದೆ ಎಂದು ಹೇಳಿದ ನ್ಯಾಯಾಲಯ
ಕುಟುಂಬದ ದುಡಿಯುವ ಸದಸ್ಯರಂತೆಯೇ ಗೃಹಿಣಿಯ ಪಾತ್ರವೂ ಮುಖ್ಯ: ಸುಪ್ರೀಂ ಕೋರ್ಟ್

ನಿಖರ ಆದಾಯ ಗಳಿಸುವ ಕುಟುಂಬ ಸದಸ್ಯರಷ್ಟೇ ಗೃಹಿಣಿಯ ಪಾತ್ರವೂ ಮುಖ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಅಭಿಪ್ರಾಯಪಟ್ಟಿದೆ [ಅರವಿಂದ್ ಕುಮಾರ್ ಪಾಂಡೆ ಮತ್ತಿತರರು ಹಾಗೂ ಗಿರೀಶ್‌ ಪಾಂಡೆ ಇನ್ನಿತರರ ನಡುವಣ ಪ್ರಕರಣ].

ಗೃಹಿಣಿಯರ ಕೊಡುಗೆಗಳನ್ನು ಪ್ರಮಾಣೀಕರಿಸುವುದು ಕಷ್ಟವಾದರೂ ಈ ಕೊಡುಗೆಗಳು ಅಮೂಲ್ಯವಾದವು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿತು.

"ಕುಟುಂಬಕ್ಕೆ ಮೂಲಾಧಾರವಾಗಿರುವ ನಿಖರ ವರಮಾನ ಇರುವ ಕುಟುಂಬ ಸದಸ್ಯರ ಪಾತ್ರದಷ್ಟೇ ಗೃಹಿಣಿಯ ಪಾತ್ರ ಮುಖ್ಯವಾಗಿದೆ. ಗೃಹಿಣಿ ನಿರ್ವಹಿಸುವ ಚಟುವಟಿಕೆಗಳನ್ನು ಒಂದೊಂದಾಗಿ ಪರಿಗಣಿಸಿದರೆ, ಗೃಹಿಣಿಯ ಕೊಡುಗೆ ಉನ್ನತ ಸ್ತರದ್ದಾಗಿದ್ದು ಅಮೂಲ್ಯವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ನ್ಯಾಯಾಲಯ ಹೇಳಿದೆ.

 ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್

2006ರಲ್ಲಿ ವಾಹನ ಅಪಘಾತವೊಂದರಲ್ಲಿ ಸಾವಿಗೀಡಾಗಿದ್ದ ಗೃಹಿಣಿಯ ಪರಿಹಾರ ಮೊತ್ತ ಹೆಚ್ಚಿಸುವ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಮಾ ಪ್ರಕರಣಗಳಲ್ಲಿ ಪರಿಹಾರ ನೀಡುವಾಗ ಪರಿಹಾರ ಪಡೆಯಬೇಕಾದ ಗೃಹಿಣಿಯ ಆದಾಯ, ಕನಿಷ್ಠ ವೇತನ ಕಾಯಿದೆಯಡಿ ಕಾರ್ಮಿಕರಿಗೆ ನೀಡಲಾಗುವ ದಿನಗೂಲಿಗಿಂತಲೂ ಕಡಿಮೆ ಇರಬಾರದು ಎಂದು ಪೀಠ ನುಡಿದಿದೆ.

ಮೃತ ಮಹಿಳೆಯ ಕುಟುಂಬ 16,85,000 ರೂಪಾಯಿ ಪರಿಹಾರ ನೀಡುವಂತೆ ಮೋಟಾರು ಅಪಘಾತ ನ್ಯಾಯಮಂಡಳಿಯನ್ನು (ಎಂಎಸಿಟಿ) ಕೋರಿತ್ತು. ಆದರೆ ವಾಹನಕ್ಕೆ ವಿಮೆ ಮಾಡಿಸಿಲ್ಲ ಎಂದು ತಿಳಿಸಿ ಪರಿಹಾರ ನೀಡಲು ನ್ಯಾಯಮಂಡಳಿ ನಿರಾಕರಿಸಿತ್ತು.

ಉತ್ತರಾಖಂಡ ಹೈಕೋರ್ಟ್‌ ಪ್ರಕರಣವನ್ನು ಮತ್ತೆ ನ್ಯಾಯಮಂಡಳಿಗೆ ಹಿಂತಿರುಗಿಸಿದಾಗ ಅದು ರೂ 2,50,000 ಪರಿಹಾರ ಘೋಷಿಸಿತು. ಈ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಆದರೆ ಪರಿಹಾರ ಮೊತ್ತ ಕಡಿಮೆ ಎಂದು ಕೋರಿ ಗೃಹಿಣಿಯ ಕುಟುಂಬ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಹೈಕೋರ್ಟ್‌ ತೀರ್ಪು ವಾಸ್ತವಿಕ ಮತ್ತು ಕಾನೂನು ದೋಷಗಳಿಂದ ಕೂಡಿದೆ ಎಂದಿರುವ ಸುಪ್ರೀಂ ಕೋರ್ಟ್‌ ಸಂಬಂಧಿತ ಸಮಯದಲ್ಲಿ ಮೃತರ ಮಾಸಿಕ ಆದಾಯ ತಿಂಗಳಿಗೆ ರೂ 4,000ಕ್ಕಿಂತಲೂ ಕಡಿಮೆ ಇರಬಾರದು ಎಂದು ಹೇಳಿದೆ.

ಆದರೊ, ವಿವಿಧ ಶೀರ್ಷಿಕೆಗಳ ಅಡಿಯಲ್ಲಿ ಪರಿಹಾರ ಲೆಕ್ಕಹಾಕಿ ನೀಡುವ ಬದಲು, ಸುಪ್ರೀಂ ಕೋರ್ಟ್ ಅಂತಿಮವಾಗಿ ರೂ. 6,00,000 ಪರಿಹಾರವನ್ನು ನೀಡಿ ಮೇಲ್ಮನವಿಯನ್ನು ವಿಲೇವಾರಿ ಮಾಡಲಾಯಿತು.

ಮಹಿಳೆಯು ಮತ್ತೊಬ್ಬರ ಕಾರಿನಲ್ಲಿ ಪಯಣಿಸುವಾಗ ಕಾರು ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಪರಿಣಾಮ ಮೃತಪಟ್ಟಿದ್ದರು. ಕಾರಿಗೆ ವಿಮೆ ಇರಲಿಲ್ಲ. ಹೀಗಾಗಿ, ಪ್ರತಿವಾದಿಗಳಾದ ವಾಹನ ಮಾಲೀಕರು ಪರಿಹಾರ ಪಾವತಿಸಿದ್ದರು. ಇದಾಗಲೇ ಪ್ರತಿವಾದಿಗಳು ರೂ. 2,50,000 ಪಾವತಿಸಿದ್ದು ಉಳಿದ ಪರಿಹಾರದ ಮೊತ್ತವಾದ ರೂ. 3,50,000 ಅನ್ನು ತೀರ್ಪು ಪ್ರಕಟಗೊಂಡ ಆರು ವಾರಗಳ ಅವಧಿಯಲ್ಲಿ ಪಾವತಿಸಲು ನ್ಯಾಯಾಲಯ ಸೂಚಿಸಿದೆ. ತಪ್ಪಿದಲ್ಲಿ ವಿಳಂಬದ ಅವಧಿಗೆ ಅನುಗುಣವಾಗಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Arvind Kumar Pandey and ors vs Girish Pandey and anr.pdf
Preview
Kannada Bar & Bench
kannada.barandbench.com