Horse race
Horse race

ಕುದುರೆ ರೇಸ್‌ ಪಂದ್ಯಾವಳಿ ಅಮಾನತುಗೊಳಿಸಿದ ಹೈಕೋರ್ಟ್‌; ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ

ಹೈಕೋರ್ಟ್‌ ಆದೇಶದಿಂದಾಗಿ ಇಂದು ಮಧ್ಯಾಹ್ನ 1.30 ರಿಂದ ಆರಂಭವಾಗಬೇಕಿದ್ದ ರೇಸ್ ಪಂದ್ಯಾವಳಿಗಳು ಅಮಾನತುಗೊಂಡಿವೆ.
Published on

ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ರೇಸ್ ಕೋರ್ಸ್–ಬಿಟಿಸಿ) ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿ ಏಕಸದಸ್ಯ ಪೀಠ ಮಾಡಿದ್ದ ಮಧ್ಯಂತರ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಶನಿವಾರ ತಡೆ ವಿಧಿಸಿದ್ದು, ಕುದುರೆ ರೇಸ್‌ ಪಂದ್ಯಾವಳಿಗಳನ್ನು ಅಮಾನತುಗೊಳಿಸಿದೆ.

ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠವು ಇಂದು ಪ್ರಕಟಿಸಿತು.

Chief Justice N V Anjaria and K V Aravind, Karnataka HC
Chief Justice N V Anjaria and K V Aravind, Karnataka HC

“ಕುದುರೆ ರೇಸ್‌ ಆಯೋಜನೆ ಮಾಡಲು ಬೆಂಗಳೂರು ಟರ್ಫ್‌ ಕ್ಲಬ್‌ಗೆ ಪರವಾನಗಿ ನೀಡಲು ರಾಜ್ಯ ಸರ್ಕಾರ ನಿರಾಕರಿಸಿರುವ ಆದೇಶ ಸಕಾರಣದಿಂದ ಕೂಡಿದೆ. ಬೆಂಗಳೂರು ಟರ್ಫ್ ಕ್ಲಬ್‌ಗೆ ರೇಸ್‌ ಆಯೋಜಿಸಲು ಪರವಾನಗಿ ನೀಡಲು ನಿರಾಕರಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡುವ ಮೂಲಕ ಏಕಸದಸ್ಯ ಪೀಠವು ತಪ್ಪಾಗಿ ತೀರ್ಮಾನಿಸಿದೆ. ಮೇಲ್ನೋಟಕ್ಕೆ ತಮ್ಮ ಪರ ಪ್ರಕರಣವಿದೆ ಎಂದು ತೋರಿಸಲು ರಾಜ್ಯ ಸರ್ಕಾರ ಸಫಲವಾಗಿದೆ. ಈ ಕಾರಣಕ್ಕಾಗಿ ಏಕಸದಸ್ಯ ಪೀಠದ ಆದೇಶವನ್ನು ಅಮಾನತು ಮಾಡಿದ್ದು, ಅದಕ್ಕೆ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

Also Read
ಬಿಟಿಸಿಯಲ್ಲಿ ಕುದುರೆ ರೇಸ್‌ ಆಯೋಜನೆ ಕುರಿತ ಪ್ರಕರಣ: ಶನಿವಾರ ಆದೇಶ ಪ್ರಕಟಿಸಲಿರುವ ಹೈಕೋರ್ಟ್‌

“ಅರ್ಜಿ ವಿಚಾರಣೆ ಬಾಕಿ ಇರುವಾಗ ಬೆಂಗಳೂರು ಟರ್ಫ್ ಕ್ಲಬ್‌ ಆಫ್‌-ಕೋರ್ಸ್‌, ಆನ್‌ ಕೋರ್ಸ್‌ ರೇಸ್‌ ಪಂದ್ಯಾವಳಿ ಮತ್ತು ಬೆಟ್ಟಿಂಗ್‌ ನಡೆಸುವುದನ್ನು ನಿಷೇಧಿಸಲಾಗಿದ್ದು, ಇದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಉಳಿದ ಅರ್ಜಿದಾರರ ಹಕ್ಕಿನ ವ್ಯಾಪ್ತಿಯ ವಿಚಾರವನ್ನು ಅಂತಿಮ ವಿಚಾರಣೆಯ ಸಂದರ್ಭದಲ್ಲಿ ನಿರ್ಧರಿಸಲು ಮುಕ್ತವಾಗಿರಿಸಲಾಗಿದೆ. ಅಂತಿಮ ವಿಚಾರಣೆಯು ಆಗಸ್ಟ್‌ 13ಕ್ಕೆ ನಿಗದಿಗೊಳಿಸಲಾಗಿದೆ” ಎಂದು ವಿಭಾಗೀಯ ಪೀಠ ಆದೇಶಿಸಿದೆ.

ಹೀಗಾಗಿ, ಇಂದು ಮಧ್ಯಾಹ್ನ 1.30 ರಿಂದ ಆರಂಭವಾಗಬೇಕಿದ್ದ ರೇಸ್ ಪಂದ್ಯಾವಳಿಗಳು ಈಗ ಅಮಾನತುಗೊಂಡಂತಾಗಿದೆ.

Kannada Bar & Bench
kannada.barandbench.com