ಅಧಿಕಾರಿಯಿಂದ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ವಿರುದ್ದ ಪ್ರತಿಬಂಧಕಾದೇಶ ಪಡೆದಿರುವ ಸಚಿವ ಮುನಿರತ್ನ

ಬೆಂಗಳೂರಿನ 10ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶೆ ಸಾವಿತ್ರಿ ಶಿವಪುತ್ರ ಕುಜ್ಜಿ ಅವರು ಫೆ. 11ರಂದು ಸಂತ್ರಸ್ತೆಯ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದ್ದು, ವಿಚಾರಣೆಯನ್ನು ಮಾರ್ಚ್‌ 2ಕ್ಕೆ ಮುಂದೂಡಿದ್ದಾರೆ.
Horticulture Minister Muniratna

Horticulture Minister Muniratna

ಐಎಫ್‌ಎಸ್‌ ಅಧಿಕಾರಿ ಆರ್‌ ರವಿಶಂಕರ್‌ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ತೋಟಗಾರಿಕೆ ಮತ್ತು ಯೋಜನೆ ಹಾಗೂ ಸಾಂಖ್ಯಿಕ ಸಚಿವ ಎನ್‌ ಮುನಿರತ್ನ ಅವರ ಪಾತ್ರದ ಕುರಿತು ಸಂತ್ರಸ್ತೆಯೊಬ್ಬರು ಈಚೆಗೆ ಸಾರ್ವಜನಿಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುನಿರತ್ನ ಅವರು ಈಚೆಗೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಸಂತ್ರಸ್ತೆಯು ತಮ್ಮ ವಿರುದ್ಧ ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ತೆರನಾದ ಸಾರ್ವಜನಿಕ ಹೇಳಿಕೆ ನೀಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆದುಕೊಂಡಿದ್ದಾರೆ. ಇದೇ ವೇಳೆ ನ್ಯಾಯಾಲಯವು ಸಂತ್ರಸ್ತೆಗೆ ಸಮನ್ಸ್‌ ಜಾರಿ ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಹತ್ತನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶೆ ಸಾವಿತ್ರಿ ಶಿವಪುತ್ರ ಕುಜ್ಜಿ ಅವರು ಫೆಬ್ರವರಿ 11ರಂದು ಸಂತ್ರಸ್ತೆಯ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದ್ದು, ವಿಚಾರಣೆಯನ್ನು ಮಾರ್ಚ್‌ 2ಕ್ಕೆ ಮುಂದೂಡಿದ್ದಾರೆ.

ಘಟನೆಯ ಹಿನ್ನೆಲೆ

ಐಎಫ್‌ಎಸ್‌ ಅಧಿಕಾರಿ ಆರ್‌ ರವಿಶಂಕರ್‌ ಅವರು ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯು ದೆಹಲಿಯ ಚಾಣಕ್ಯಪುರಿ ಪೊಲೀಸ್‌ ಠಾಣೆಯಲ್ಲಿ 2021ರ ಅಕ್ಟೋಬರ್‌ 6ರಂದು ದೂರು ನೀಡಿದ್ದಾರೆ. ಸಂತ್ರಸ್ತೆಯ ವಿಳಾಸದ ಹಿನ್ನೆಲೆಯಲ್ಲಿ ಪ್ರಕರಣವನ್ನು ಧಾರವಾಡದ ಉಪನಗರ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.

ಸದರಿ ಪ್ರಕರಣವನ್ನು ಹಿಂಪಡೆಯುವಂತೆ ಮಾಡಲು ಆರ್‌ ರವಿಂಶಕರ್‌ ಮತ್ತು ಅವರ ಪತ್ನಿ ಐಎಎಸ್‌ ಅಧಿಕಾರಿ ತುಳಸಿ ಮದ್ದಿನೇನಿ ಅವರು ಸಚಿವ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಬೆಂಬಲಿಗ ಲೋಹಿತ್‌ ಅವರ ಮೂಲಕ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

Also Read
ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ 72 ಮಾಧ್ಯಮ ಸಂಸ್ಥೆಗಳಿಗೆ ನ್ಯಾಯಾಲಯ ನಿರ್ಬಂಧ

ಮುನಿರತ್ನ ಅವರ ಆಪ್ತೆ ಲಕ್ಷ್ಮಿ ಅವರ ಮೂಲಕ ಲೋಹಿತ್‌ ಪರಿಚಯವಾಗಿದ್ದು, ಬಳಿಕ ಲಕ್ಷ್ಮಿ, ಕಾಮಾಕ್ಷಿ, ಲೋಹಿತ್‌, ಕಿರಣ್‌ ಹಾಗೂ ಮಂಜು ಅವರ ಜೊತೆ ಸ್ನೇಹವಾಗಿದ್ದು, ಅವರು ನನ್ನನ್ನು ಗುಹಾಂತರ ಮತ್ತು ಅಗಲಕುರ್ಕಿ ರೆಸಾರ್ಟ್‌ಗಳಿಗೆ ಕರೆದೊಯ್ದಿದ್ದರು. ಅಲ್ಲಿ ನಾನು ತಿನ್ನುವ ಆಹಾರಕ್ಕೆ ಮಾದಕ ವಸ್ತುಗಳನ್ನು ಮಿಶ್ರಣ ಮಾಡಿ ನೀಡಿ ನನ್ನ ಅಸಭ್ಯವಾದ ಚಿತ್ರ ಮತ್ತು ವಿಡಿಯೊ ಮಾಡಿಕೊಂಡಿದ್ದರು. ಇದನ್ನು ಮುನಿರತ್ನ ಅವರಿಗೆ ನೀಡಲಾಗಿದೆ. ಇದೇ ಚಿತ್ರಗಳನ್ನು ಇಟ್ಟುಕೊಂಡು ನಾನು, ಮುನಿರತ್ನ ಅವರ ಆಪ್ತ ಲೋಹಿತ್‌ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದೇನೆ ಎಂದು ಆರೋಪಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನನ್ನ ವಿರುದ್ಧ ದೂರು ಕೊಡಿಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ನನ್ನ ಅಸಭ್ಯ ಚಿತ್ರ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಲೋಹಿತ್‌ ಮತ್ತು ಅವರ ಸಹಚರರ ವಿರುದ್ಧ ದೂರು ನೀಡಿದರೂ ವಿಜಯನಗರ ಪೊಲೀಸರು ಸ್ವೀಕರಿಸುತ್ತಿಲ್ಲ ಎಂದು ಸಂತ್ರಸ್ತೆಯು ಬೆಂಗಳೂರು ಪೊಲೀಸ್‌ ಕಮಿಷನರ್‌, ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ರವಿಶಂಕರ್‌ ಮತ್ತು ಅವರ ಪತ್ನಿ ತುಳಸಿ ವಿರುದ್ಧವೂ ಕ್ರಮಕ್ಕೆ ಕೋರಿ ಸಂತ್ರಸ್ತೆಯು ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದಾರೆ. ಇಡೀ ಘಟನೆಯ ಕುರಿತು ಪೊಲೀಸ್‌ ಮಹಾನಿರ್ದೇಶಕರಿಗೂ ದೂರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Kannada Bar & Bench
kannada.barandbench.com