ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣ ಆಲಿಸಿದ ಎನ್‌ಸಿಡಿಆರ್‌ಸಿ: ಕೇಸ್‌ ಗೆದ್ದರೂ ರೋಗಿಯ ಕುಟುಂಬದ ಪರ ಮಿಡಿದ ಆಸ್ಪತ್ರೆ

ಚಿಕಿತ್ಸೆ ವಿಫಲವಾದಾಗ ಅಥವಾ ಶಸ್ತ್ರಚಿಕಿತ್ಸೆ ಸಮಯದಲ್ಲಿ ರೋಗಿ ಮೃತರಾಗುವ ಪ್ರತಿಯೊಂದು ಪ್ರಕರಣವೂ ವೈದ್ಯಕೀಯ ನಿರ್ಲಕ್ಷ್ಯದಿಂದ ಆಗಿರುತ್ತದೆ ಎಂದು ಭಾವಿಸಲಾಗದು ಎಂಬ ಸುಪ್ರೀಂ ಕೋರ್ಟ್ ತೀರ್ಪುನ್ನು ಆಯೋಗ ಉಲ್ಲೇಖಿಸಿತು.
NCDRC
NCDRC
Published on

ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ಎದುರು ಇತ್ತೀಚೆಗೆ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದು ಹೃದಯಸ್ಪರ್ಶಿಯಾದ ಇತ್ಯರ್ಥ ಕಂಡಿದೆ. ಆರೋಪಿ ಸ್ಥಾನದಲ್ಲಿದ್ದ ಆಸ್ಪತ್ರೆ, ಪ್ರಕರಣ ಗೆದ್ದರೂ ಮಾನವೀಯ ನೆಲೆಯಲ್ಲಿ ಮೃತ ರೋಗಿಯ ಕುಟುಂಬಕ್ಕೆ ₹ 7 ಲಕ್ಷ ಪಾವತಿಸಲು ಮುಂದಾದ ಪ್ರಕರಣ ಇದಾಗಿದೆ [ಫಿಲಿಪ್ಸ್ ಥಾಮಸ್ ಮತ್ತು ದೀನ್ ಆಸ್ಪತ್ರೆ ನಡುವಣ ಪ್ರಕರಣ].

ರೋಗಿಯೊಬ್ಬರ ಸಾವಿಗೆ ಆಸ್ಪತ್ರೆ ಮತ್ತು ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ತಿಳಿಸಿ ಮೃತರ ಕುಟುಂಬಕ್ಕೆ ₹7 ಲಕ್ಷ ಪರಿಹಾರ ನೀಡುವಂತೆ ರಾಜ್ಯ ವ್ಯಾಜ್ಯ ಪರಿಹಾರ ಆಯೋಗ ತೀರ್ಪು ಸೂಚಿಸಿತ್ತು. ಎನ್‌ಸಿಡಿಆರ್‌ಸಿ ಅಧ್ಯಕ್ಷ ಡಾ. ಎಸ್.ಎಂ.ಕಾನಿಟ್ಕರ್‌ ಅವರು ಅದನ್ನು ರದ್ದುಗೊಳಿಸಿದರಾದರೂ ʼದೀನ್‌ʼ  ಆಸ್ಪತ್ರೆಯು ಈಗಾಗಲೇ ರಾಜ್ಯ ಆಯೋಗದಲ್ಲಿ ಠೇವಣಿ ಇಟ್ಟಿರುವ ₹7 ಲಕ್ಷ ಮೊತ್ತ ಪಾವತಿಸುವ ಇಂಗಿತ ವ್ಯಕ್ತಪಡಿಸಿತು.

ಇದಕ್ಕೆ ಸಮ್ಮತಿ ಸೂಚಿಸಿದ ಆಯೋಗವು ಆದರೆ ಇದನ್ನೇ ಪೂರ್ವ ನಿದರ್ಶನ ಎಂದು ಪರಿಗಣಿಸಬಾರದು ಎಂದಿತು. ಜೊತೆಗೆ ರೋಗಿಯ ಸಾವು ನಿರ್ಲಕ್ಷ್ಯದಿಂದಾಗಿದೆ ಎಂಬುದನ್ನು ಸೂಚಿಸುವ ಸಾಕ್ಷ್ಯ ದಾಖಲೆಯಲ್ಲಿ ದೊರೆಯದ ವಿನಾ ರೋಗಿಗಳ ಪ್ರತಿ ಸಾವನ್ನು ಮೇಲ್ನೋಟಕ್ಕೆ ವೈದ್ಯಕೀಯ ನಿರ್ಲಕ್ಷ್ಯದ ಸಾವು ಎಂದು ಪರಿಗಣಿಸಲಾಗದು ಎಂದು ಜೇಕಬ್ ಮ್ಯಾಥ್ಯೂ ಮತ್ತು ಪಂಜಾಬ್‌ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಆಯೋಗ ಉಲ್ಲೇಖಿಸಿತು.  

ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಬಳಿಕ 37 ವರ್ಷದ ರೋಗಿಯೊಬ್ಬರು ಮೃಪಟ್ಟಿದ್ದರು. ಸಾಮಾನ್ಯ ಅರಿವಳಿಕೆ ಮತ್ತು ಬೆನ್ನುಮೂಳೆಯ ಅರಿವಳಿಕೆಯನ್ನು ರೋಗಿಯ ಮೇಲೆ ಏಕಕಾಲಕ್ಕೆ ಪ್ರಯೋಗಿಸಿದ್ದರಿಂದ ಸಾವು ಸಂಭವಿಸಿದೆ ಎಂದು ಅರ್ಜಿದಾರರು ದೂರಿದ್ದರು. ಆದರೆ ಅನುಭವಿ ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದು ಯಾವುದೇ ನಿರ್ಲಕ್ಷ್ಯ ಉಂಟಾಗಿರಲಿಲ್ಲ ಎಂಬುದು ವೈದ್ಯರ ವಾದವಾಗಿತ್ತು. ಆ ಮೂಲಕ ರಾಜ್ಯ ಆಯೋಗದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಯೋಗ ಪುರಸ್ಕರಿಸಿತು.

ಆದರೂ ಮಾನವೀಯ ಕಾರಣಕ್ಕೆ ರಾಜ್ಯ ಆಯೋಗದಲ್ಲಿ ಈಗಾಗಲೇ ಠೇವಣಿ ಇಟ್ಟಿರುವ ₹ 7 ಲಕ್ಷ ಮೊತ್ತವನ್ನು ದೂರುದಾರರಿಗೆ ಬಿಡುಗಡೆ ಮಾಡುವಂತೆ ಆಸ್ಪತ್ರೆ ಮನವಿ ಮಾಡಿತು.    

Kannada Bar & Bench
kannada.barandbench.com