

ರಾಜ್ಯದ ಮಹಿಳಾ ನೌಕರರಿಗೆ ವೇತನ ಸಹಿತ ಮಾಸಿಕ ಒಂದು ದಿನ ಋತುಚಕ್ರ ರಜೆ ಸೌಲಭ್ಯ ಒದಗಿಸುವ ರಾಜ್ಯ ಸರ್ಕಾರದ ಅಧಿಸೂಚನೆಗೆ ತಡೆ ನೀಡಿದ್ದ ಹೈಕೋರ್ಟ್ ಕೆಲವೇ ಗಂಟೆಗಳಲ್ಲಿ ತನ್ನ ಮಧ್ಯಂತರ ಆದೇಶವನ್ನು ಹಿಂಪಡೆದಿದೆ. ರಾಜ್ಯ ಸರ್ಕಾರದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಮಂಗಳವಾರ ತನ್ನ ಮಧ್ಯಂತರ ಆದೇಶವನ್ನು ಹಿಂಪಡೆಯಿತು. ಪ್ರಕರಣವನ್ನು ವಿಸ್ತೃತವಾಗಿ ಆಲಿಸಿ ಮಧ್ಯಂತರ ಆದೇಶದ ಕುರಿತು ನ್ಯಾಯಾಲಯವು ನಾಳೆ ಆದೇಶ ಮಾಡಲಿದೆ.
“ಬೆಂಗಳೂರು ಹೋಟೆಲುಗಳ ಸಂಘ ಮತ್ತು ದಿ ಮ್ಯಾನೇಜ್‌ಮೆಂಟ್ ಆಫ್ ಅವಿರತ ಎಎಫ್‌ಎಲ್ ಕನೆಕ್ಟಿವಿಟಿ ಸಿಸ್ಟಮ್ಸ್ ಲಿಮಿಟೆಡ್ ಕೋರಿಕೆಯಂತೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲಾಗಿದೆ. ರಾಜ್ಯ ಸರ್ಕಾರವು ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದೆ” ಎಂದು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠ ಬೆಳಿಗ್ಗೆ ಆದೇಶಿಸಿತ್ತು.
ಈ ಬೆಳವಣಿಗೆಯ ಬೆನ್ನಲೇ ಪೀಠವು ಭೋಜನಕ್ಕೆ ತೆರಳುವುದಕ್ಕೂ ಮುನ್ನ ಹಾಜರಾದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಋತುಚಕ್ರದ ರಜೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀತಿ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಆದೇಶ ಮಾಡಿದೆ. ಅದೇ ರೀತಿ ಕಾನೂನು ಆಯೋಗವು ಈ ಸಂಬಂಧ ಶಿಫಾರಸ್ಸು ಮಾಡಿದೆ. ಇದರ ಭಾಗವಾಗಿ ರಾಜ್ಯ ಸರ್ಕಾರಕ್ಕೆ ಸಂವಿಧಾನದ 142ನೇ ವಿಧಿಯಡಿ ದೊರೆತಿರುವ ಅಧಿಕಾರ ಬಳಸಿ ಕ್ರಮಕೈಗೊಂಡಿದೆ. ಸರ್ಕಾರದ ಅಧಿಸೂಚನೆಯನ್ನು ಕಾನೂನು ಬದ್ಧವಾಗಿ ಹೊರಡಿಸಲಾಗಿದೆ. ಸರ್ಕಾರದ ವಾದ ಆಲಿಸದೇ ಅಧಿಸೂಚನೆಗೆ ತಡೆ ನೀಡಬಾರದು” ಎಂದು ಮನವಿ ಮಾಡಿದರು.
ಇದನ್ನು ಆಲಿಸಿದ ಪೀಠವು ಬೆಳಗ್ಗೆ ಸರ್ಕಾರದ ಅಧಿಸೂಚನೆ ನೀಡಿದ್ದ ತಡೆಯನ್ನು ಹಿಂಪಡೆಯಿತು. ಬುಧವಾರ ಉಭಯ ಪಕ್ಷಕಾರರ ವಾದ ಆಲಿಸಿ ಮಧ್ಯಂತರ ತಡೆ ನಿರ್ಧರಿಸಲಾಗುವುದು ಎಂದಿತು.
ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಸೇರಿದಂತೆ ಹಲವು ಮಹಿಳಾ ವಕೀಲರು ವಿಚಾರಣೆ ವೇಳೆ ಪೀಠದ ಮುಂದೆ ಹಾಜರಾಗಿದ್ದರು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಬಿ ಕೆ ಪ್ರಶಾಂತ್ ಅವರ ವಾದ ಆಲಿಸಿದ್ದ ನ್ಯಾಯಾಲಯವು ಸರ್ಕಾರದ ಅಧಿಸೂಚನೆಗೆ ತಡೆ ನೀಡಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿತ್ತು.