ಹೈಕೋರ್ಟ್‌ನಲ್ಲಿ ಮೇ ಅಂತ್ಯಕ್ಕೆ 2.71 ಲಕ್ಷ ಪ್ರಕರಣ ಬಾಕಿ; ಸದನದಲ್ಲಿ ಕಾನೂನು ಸಚಿವರ ಉತ್ತರ

ಜಿಲ್ಲಾ ನ್ಯಾಯಾಲಯಗಳ ಮುಂದೆ ಬರುವ ಸಿವಿಲ್‌ ಪ್ರಕರಣಗಳನ್ನು ಟ್ರ್ಯಾಕ್‌ 1ರಿಂದ ಟ್ರ್ಯಾಕ್‌ 4 ಎಂದು ವಿಂಗಡಿಸಿ, ಟ್ರ್ಯಾಕ್‌ 1ರ ಪ್ರಕಾರ 9 ತಿಂಗಳಿಂದ 24 ತಿಂಗಳುಗಳ ಅವಧಿಯಲ್ಲಿ ಸಂಪೂರ್ಣ ಪ್ರಕರಣವನ್ನು ಮುಕ್ತಾಯಗೊಳಿಸುವ ನಿರ್ದೇಶನವಿದೆ.
ಹೈಕೋರ್ಟ್‌ನಲ್ಲಿ ಮೇ ಅಂತ್ಯಕ್ಕೆ 2.71 ಲಕ್ಷ ಪ್ರಕರಣ ಬಾಕಿ; ಸದನದಲ್ಲಿ ಕಾನೂನು ಸಚಿವರ ಉತ್ತರ

ಕರ್ನಾಟಕ ಹೈಕೋರ್ಟ್‌ನಲ್ಲಿ 2023ರ ಮೇ ವರೆಗೆ 2,71,588 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ ಎಂದು ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಅವರು ಇತ್ತೀಚೆಗೆ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

ಜೆಡಿಎಸ್‌ ಶಾಸಕ ಸಿ ಎನ್‌ ಬಾಲಕೃಷ್ಣ ಅವರು ವಿಧಾನಸಭೆಯಲ್ಲಿ ರಾಜ್ಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಚಾರವಾಗಿ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಲಿಖಿತ ಉತ್ತರ ಒದಗಿಸಿದ್ದಾರೆ.

ಬಾಕಿ ಇರುವ ಪ್ರಕರಣಗಳ ಸಂಖ್ಯೆಯು 2020ರಲ್ಲಿ 2,49,733 ಇದ್ದರೆ, 2021ರಲ್ಲಿ 2,46,413,  2022ರಲ್ಲಿ 2,64,234 ಪ್ರಕರಣ ಬಾಕಿ ಇಳಿದಿದ್ದವು. ಇದೇ ಅವಧಿಯಲ್ಲಿ ಕ್ರಮವಾಗಿ 1,61,150; 89,989, 85,399 ಪ್ರಕರಣಗಳು ವಿಲೇವಾರಿಯಾಗಿದ್ದವು. ಅಂತೆಯೇ ಈ ಅವಧಿಯಲ್ಲಿ 1,38,954, 86,669 ಮತ್ತು 1,03,220 ಪ್ರಕರಣ ದಾಖಲಾಗಿದ್ದವು. 2023ರ ಮೇವರೆಗೆ 44,590 ಪ್ರಕರಣ ದಾಖಲಾಗಿದ್ದು, 37,236 ಪ್ರಕರಣ ಇತ್ಯರ್ಥವಾಗಿವೆ ಎಂಬ ಮಾಹಿತಿ ಒದಗಿಸಲಾಗಿದೆ.

ಜಿಲ್ಲಾ ನ್ಯಾಯಾಲಯಗಳು, ವಕ್ಫ್‌, ಕೈಗಾರಿಕೆ ಮತ್ತು ಹೆಚ್ಚುವರಿ ಕೈಗಾರಿಕಾ ನ್ಯಾಯ ಮಂಡಳಿಗಳಲ್ಲಿನ ಪ್ರಕರಣಗಳ ವಿವರ ಇಂತಿದೆ.

ರಾಜ್ಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಶೇ 50ರಷ್ಟು ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಪ್ರತಿವಾದಿಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಪಾಟೀ ಸವಾಲಿಗೆ ಅಗತ್ಯವಾದ ಅಫಿಡವಿಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಇರುವುದರಿಂದ ಪ್ರಕರಣಗಳು ಇತ್ಯರ್ಥವಾಗದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆ ಕೇಳಲಾಗಿತ್ತು.

ಇದಕ್ಕೆ ಸಚಿವರು ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕೆಳಕಂಡಂತೆ ಒದಗಿಸಿದ್ದಾರೆ.

ರಾಜ್ಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಶೇ 50ರಷ್ಟು ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಪ್ರತಿವಾದಿಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಪಾಟೀ ಸವಾಲಿಗೆ ಅಗತ್ಯವಾದ ಅಫಿಡವಿಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಇರುವುದರಿಂದ ಪ್ರಕರಣಗಳು ಇತ್ಯರ್ಥವಾಗದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದಲ್ಲಿ, ನ್ಯಾಯಾಲಯಗಳಲ್ಲಿ ನಿಗದಿತ ಕಾಲದಲ್ಲಿ ಅಫಿಡವಿಟ್‌ ಸಲ್ಲಿಸಿ, ಪ್ರಕರಣ ಇತ್ಯರ್ಥಪಡಿಸಲು ಸರ್ಕಾರ ಮತ್ತು ಹೈಕೋರ್ಟ್‌ ನಿಗದಿಪಡಿಸಿರುವ ಕಾಲಮಿತಿ ಏನು ಎಂದು ಪ್ರಶ್ನಿಸಲಾಗಿತ್ತು.

ಇದಕ್ಕೆ ಸಚಿವರು ಜಿಲ್ಲಾ ನ್ಯಾಯಾಲಯಗಳಲ್ಲಿ ಸರ್ಕಾರದ ವಿರುದ್ಧ ದಾವೆ ಸಲ್ಲಿಸಿದಾಗ ನೋಟಿಸ್‌ ಜಾರಿಯಾದ 30 ದಿನಗಳ ಒಳಗೆ ಹಾಗೂ ನ್ಯಾಯಾಲಯದ ಅನುಮತಿಯಿಂದ 90 ದಿನಗಳ ಒಳಗೆ ಸಿವಿಲ್‌ ಪ್ರಕರಣಗಳಲ್ಲಿ ಪ್ರತಿವಾದಿ ಪತ್ರ ಸಲ್ಲಿಸಬೇಕಾಗುತ್ತದೆ. ವಾದ ಪತ್ರ ಮತ್ತು ಪ್ರತಿವಾದ ಪತ್ರಗಳನ್ನು ಪರಿಗಣಿಸಿ ನ್ಯಾಯಾಲಯವು ವಿವಾದಾಂಶಗಳನ್ನು ರಚಿಸಿದ ನಂತರ ವಾದಿ ತನ್ನ ಪರವಾಗಿರುವ ಸಾಕ್ಷಿ ನೀಡಬೇಕಾಗಿರುತ್ತದೆ. ಆನಂತರ ಪ್ರತಿವಾದಿಯಾದ ಸರ್ಕಾರ ನ್ಯಾಯಾಲಯ ನಿಗದಿಪಡಿಸಿದ ದಿನಾಂಕದಿಂದ ಮುಖ್ಯ ವಿಚಾರಣೆಗೆ ಅಫಿಡವಿಟ್‌ ಅನ್ನು ಸಲ್ಲಿಸಬೇಕಾಗುತ್ತದೆ. ಹೀಗಾಗಿ, ದಾವೆ ಸಲ್ಲಿಸಿದ ದಿನಾಂಕದಿಂದ ಇಂತಿಷ್ಟೇ ದಿನದಲ್ಲಿ ಪ್ರತಿವಾದಿ ಮುಖ್ಯ ವಿಚಾರಣೆಯ ಸಾಕ್ಷಿ ಎಂದು ಅಫಿಡವಿಟ್‌ ಸಲ್ಲಿಸಲು ನಿಗದಿತ ಅವಧಿ ಇರುವುದಿಲ್ಲ ಎಂದು ವಿವರಿಸಿದ್ದಾರೆ.

ಮುಂದುವರೆದು, ಕರ್ನಾಟಕ ಹೈಕೋರ್ಟ್‌ ರಚಿಸಿದ ಕೇಸ್‌ ಫ್ಲೊ ಮ್ಯಾನೇಜ್‌ಮೆಂಟ್‌ ನಿಯಮಗಳ ಪ್ರಕಾರ ಜಿಲ್ಲಾ ನ್ಯಾಯಾಲಯಗಳ ಮುಂದೆ ಬರುವ ಸಿವಿಲ್‌ ಪ್ರಕರಣಗಳನ್ನು ಟ್ರ್ಯಾಕ್‌ 1ರಿಂದ ಟ್ರ್ಯಾಕ್‌ 4 ಎಂದು ವಿಂಗಡಿಸಿ, ಟ್ರ್ಯಾಕ್‌ 1ರ ಪ್ರಕಾರ 9 ತಿಂಗಳಿಂದ 24 ತಿಂಗಳುಗಳ ಅವಧಿಯಲ್ಲಿ ಸಂಪೂರ್ಣ ಪ್ರಕರಣವನ್ನು ಮುಕ್ತಾಯಗೊಳಿಸುವ ನಿರ್ದೇಶನ ಇರುತ್ತದೆ. ಇದು ಹೈಕೋರ್ಟ್‌ನಲ್ಲಿ ದಾಖಲಾಗುವ ರಿಟ್‌ ಅರ್ಜಿಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಬಾಕಿ ಇರುವ ಪ್ರಕರಗಳ ಉಸ್ತುವಾರಿ ಮಾಡಲು ಬಳಸುತ್ತಿರುವ ವಿಧಾನ ಯಾವುದು ಎಂಬ ಪ್ರಶ್ನೆಗೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಿಸಿಎಂಎಸ್‌ ತಂತ್ರಾಂಶದ ಮೂಲಕ ಆಯಾ ಇಲಾಖೆಯ ಅಧಿಕಾರಿಗಳು ಉಸ್ತುವಾರಿ ಮಾಡುತ್ತಾರೆ ಎಂದು ವಿವರಿಸಲಾಗಿದೆ.

Attachment
PDF
Pending Cases.pdf
Preview

Related Stories

No stories found.
Kannada Bar & Bench
kannada.barandbench.com