ಗೃಹಿಣಿಯ ಪಾತ್ರ ಮುಖ್ಯ, ಅವರ ಸೇವೆ ಶ್ಲಾಘನೆಗೆ ಅರ್ಹ: ಬಾಂಬೆ ಹೈಕೋರ್ಟ್

"...ಕುಟುಂಬದಲ್ಲಿ ಗೃಹಿಣಿಯ ಪಾತ್ರ ಅತ್ಯಂತ ಸವಾಲಿನದಾಗಿದ್ದು ಪ್ರಮುಖವಾದದ್ದಾಗಿದೆ. ಹೆಚ್ಚು ಶ್ಲಾಘನೆಗೆ ಭಾಜನವಾಗಬೇಕಾದ ಈ ಪಾತ್ರ ಕಡಿಮೆ ಶ್ಲಾಘನೆ ಪಡೆಯುತ್ತಿದೆ" ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
Homemaker
Homemaker

ಮೋಟಾರು ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ ಗೃಹಿಣಿಯೊಬ್ಬರಿಗೆ ನೀಡಬೇಕಾದ ಪರಿಹಾರ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ‘ಗೃಹಿಣಿಯರ ಪ್ರಾಮುಖ್ಯತೆಗೆ ತಕ್ಕಂತಹ ಮಾನ್ಯತೆ ದೊರೆಯಬೇಕಿದೆ’ ಎಂದು ಒತ್ತಿ ಹೇಳಿತು.

ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ನ್ಯಾಯಮೂರ್ತಿ ಅನಿಲ್ ಎಸ್ ಕಿಲೋರ್ ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿದರು.

ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಗೆ ಓರಿಯೆಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ನಿಂದ ಪರಿಹಾರ ಒದಗಿಸಬೇಕು ಎಂದು ಕೋರಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 166 ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಮೃತ ಮಹಿಳೆ ಗೃಹಿಣಿ ಎಂದು ಆಕೆಯ ಕುಟುಂಬ ಹೇಳಿದ್ದನ್ನು ಪರಿಗಣಿಸಿ ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ಪ್ರಕರಣವನ್ನು ತಳ್ಳಿಹಾಕಿತ್ತು. ಈ ಸಂಬಂಧ ಮೃತ ಮಹಿಳೆಯ ಪತಿ ಮತ್ತು ಅವರ ಇಬ್ಬರು ಗಂಡು ಮಕ್ಕಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಹೀಗೆ ಅಭಿಪ್ರಾಯಪಟ್ಟಿದೆ:

‘ನಾವು ಒಂದು ‘ಕುಟುಂಬ’ದ ಬಗ್ಗೆ ಮಾತನಾಡುವಾಗ, ಆ ಕುಟುಂಬದಲ್ಲಿ ಗೃಹಿಣಿಯ (ಹೋಂ ಮೇಕರ್ ಎಂದೂ ಕರೆಯಲಾಗುತ್ತದೆ) ಪಾತ್ರ ಅತ್ಯಂತ ಸವಾಲಿನ ಕೆಲಸವಾಗಿದ್ದು ಅವರ ಪಾತ್ರ ಪ್ರಮುಖವಾದದ್ದು. ಆದರೆ ಹೆಚ್ಚು ಶ್ಲಾಘನೆಗೆ ಭಾಜನವಾಗಬೇಕಾದ ಈ ಪಾತ್ರ ಕಡಿಮೆ ಮೆಚ್ಚುಗೆ ಪಡೆಯುತ್ತಿದೆ’.

ಬಾಂಬೆ ಹೈಕೋರ್ಟ್

‘ಗೃಹಿಣಿಯು ಕುಟುಂಬವನ್ನು ಭಾವನಾತ್ಮಕವಾಗಿ ಬೆಸೆಯುತ್ತಾಳೆ. ಗಂಡನಿಗೆ ಆಧಾರಸ್ತಂಭ, ಮಗು/ ಮಕ್ಕಳಿಗೆ ದಾರಿದೀಪ ಹಾಗೂ ಕುಟುಂಬದ ವೃದ್ಧರಿಗೆ ಆಶ್ರಯದಾತೆಯಾಗಿದ್ದಾಳೆ. ಉದ್ಯೋಗದಲ್ಲಿರಲಿ ಅಥವಾ ಇಲ್ಲದಿರಲಿ ಅಹರ್ನಿಶಿ ದುಡಿಯುವ ಆಕೆ ಒಂದು ದಿನವೂ ರಜೆ ಪಡೆಯುವುದಿಲ್ಲ. ಆದರೂ, ಅವಳ ಕೆಲಸವನ್ನು ಗುರುತಿಸುತ್ತಿಲ್ಲ ಮತ್ತು ಅದನ್ನು ‘ಕೆಲಸ’ ಎಂಬುದಾಗಿ ಪರಿಗಣಿಸಿಲ್ಲ. ಮನೆಯ ಕಾರ್ಯಚಟುವಟಿಕೆಗೆ ಸಂಬಂಧಿಸಿದ ನೂರಾರು ಘಟಕಗಳನ್ನು ಒಳಗೊಂಡಂತೆ ಆಕೆ ಸಲ್ಲಿಸುವ ಸೇವೆಗಳನ್ನು ಲೆಕ್ಕಹಾಕುವುದು ಸ್ವತಃ, ವಿತ್ತೀಯ ದೃಷ್ಟಿಯಿಂದಲೂ ಅಸಾಧ್ಯದ ಕೆಲಸ‘ ಎಂದು ನ್ಯಾ. ಕಿಲೋರ್ ಅಭಿಪ್ರಾಯಪಟ್ಟಿದ್ದಾರೆ.

2007ರ ಎಫ್‌ಎ ಸಂಖ್ಯೆ 510 ರ ಅಂತಿಮ ತೀರ್ಪಿನಲ್ಲಿ  ದಾಖಲಾದ ವಿವರ
2007ರ ಎಫ್‌ಎ ಸಂಖ್ಯೆ 510 ರ ಅಂತಿಮ ತೀರ್ಪಿನಲ್ಲಿ ದಾಖಲಾದ ವಿವರ

ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ 'ಇವುಗಳಲ್ಲಿ ಹಣದ ಮೌಲ್ಯ ಮತ್ತು ಗೃಹಿಣಿಯ ಸೇವೆಗಳನ್ನು ವಿವರಿಸಲಾಗಿದೆ. ಆಕೆಯ ಸೇವೆಗಳನ್ನು ಅಪಮೌಲ್ಯೀಕರಿಸಬಾರದು' ಎಂದು ಹೇಳಿದೆ.

‘34ರಿಂದ 59 ವರ್ಷದೊಳಗಿನ ಗೃಹಿಣಿಯರು ಮತ್ತು ಜೀವನದಲ್ಲಿ ಸಕ್ರಿಯರಾಗಿರುವವರು ತಿಂಗಳಿಗೆ ಅಂದಾಜು ರೂ 3000ದಂತೆ ವರ್ಷಕ್ಕೆ ರೂ .36,000ನಷ್ಟು ದುಡಿಮೆ ಮಾಡುತ್ತಾರೆ ಎಂದು ಅಂದಾಜಿಸಿರುವ ಸುಪ್ರೀಂಕೋರ್ಟ್ ಮಾತುಗಳನ್ನು ನ್ಯಾ. ಕಿಲೋರ್ ಉಲ್ಲೇಖಿಸಿದ್ದಾರೆ.

ಅದರಂತೆ, ‘ಸಾವನ್ನಪ್ಪಿದವರು ಗೃಹಿಣಿ ಎಂಬ ಕಾರಣಕ್ಕೆ ಪರಿಹಾರ ನಿರಾಕರಿಸುವುದು ವ್ಯವಸ್ಥಿತ ಕಾನೂನಿಗೆ ವಿರುದ್ಧವಾಗಿದೆ’ ಎನ್ನುತ್ತ ಕೋರ್ಟ್, ನ್ಯಾಯಮಂಡಳಿ ತೀರ್ಪನ್ನು ತಿರಸ್ಕರಿಸಿದೆ.

‘ಸಾವನ್ನಪ್ಪಿದಾಕೆ ತನ್ನ ಮಕ್ಕಳು ಮತ್ತು ಗಂಡನಿಗೆ ನೀಡಿದ ಗಮನ ಮತ್ತು ವೈಯಕ್ತಿಕ ಆರೈಕೆಯನ್ನು ಅಂದಾಜು ಮಾಡುವ ಮೂಲಕ ಗೃಹಿಣಿಯ ಮರಣದ ನಂತರ ಗಂಡ ಮತ್ತು ಮಕ್ಕಳಿಗೆ ಆಗುವ ನಷ್ಟವನ್ನು ಲೆಕ್ಕಹಾಕಬೇಕಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

ಮೃತ ಮಹಿಳೆ ದೈನಂದಿನ ಕೂಲಿ ಕಾರ್ಮಿಕರ ಲೆಕ್ಕದಲ್ಲಿ ಗಳಿಸಿದ ಆದಾಯವನ್ನು ನ್ಯಾಯಮಂಡಳಿ ಪರಿಗಣಿಸಿಲ್ಲ ಎಂಬುದನ್ನೂ ಕೋರ್ಟ್ ಗಮನಿಸಿತು.

ಅಂತಿಮವಾಗಿ ವಾರ್ಷಿಕ 6% ಬಡ್ಡಿದರದಲ್ಲಿ ಆಕೆಯ ಕುಟುಂಬಕ್ಕೆ 8.22 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಅದು ಘೋಷಿಸಿತು. ಅಂತೆಯೇ ಪರಿಹಾರ ಮೊತ್ತವನ್ನು 3 ತಿಂಗಳೊಳಗೆ ಜಮಾ ಮಾಡಲು ವಿಮಾ ಕಂಪನಿಗೆ ಆದೇಶಿಸಲಾಯಿತು. ಅಲ್ಲದೆ ನ್ಯಾಯಾಲಯ ವಾಹನದ ಮಾಲೀಕರಿಂದ ಪರಿಹಾರ ಮೊತ್ತ ವಸೂಲಿ ಮಾಡಲು ಕಂಪನಿಗೆ ಅನುಮತಿ ನೀಡಿತು.

Related Stories

No stories found.
Kannada Bar & Bench
kannada.barandbench.com