ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ವಸತಿ ಸಮುಚ್ಚಯ ನಿರ್ಮಾಣ ಪ್ರಕರಣ: ಜ.18ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಹೈಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿದರೂ ಮೇವರಿಕ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ ಕೆಲಸವನ್ನು ಪೂರ್ಣಗೊಳಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
BBMP and Karnataka HC
BBMP and Karnataka HC

ಬೆಂಗಳೂರಿನ ಈಜಿಪುರದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗವರಿಗೆ (ಇಡಬ್ಲುಎಸ್‌) ವಸತಿ ಸಮುಚ್ಚಯ ನಿರ್ಮಾಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಜನವರಿ 18ಕ್ಕೆ ಮುಂದೂಡಿದೆ.

ಬೆಂಗಳೂರಿನ ಎಸ್‌ ಮೀನಾ ಸೇರಿದಂತೆ 13 ಮಂದಿ ಹಾಗೂ ಕರ್ನಾಟಕ ಇಡಬ್ಲುಎಸ್‌ 1,512 ಸಂಘಟನೆ ಪ್ರತ್ಯೇಕವಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ನೇತೃತ್ವದ ವಿಭಾಗೀಯ ಪೀಠವು ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

ಹೈಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿದರೂ ಮೇವರಿಕ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ ಕೆಲಸವನ್ನು ಪೂರ್ಣಗೊಳಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಲಹೆ/ಮಾರ್ಗದರ್ಶನ ಕೋರಲಾಗಿದೆ. 2022ರ ಡಿಸೆಂಬರ್‌ 20ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸರ್ಕಾರದ ಪ್ರತಿಕ್ರಿಯೆಯನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು” ಎಂದರು.

ಮೇವರಿಕ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ಸಂಬಂಧಿತ ಪ್ರದೇಶವನ್ನು ವಾಣಿಜ್ಯ ರೂಪದಲ್ಲಿ ಅಭಿವೃದ್ಧಿಪಡಿಸಲು ಸಂಬಂಧಿತ ಇಲಾಖೆಗಳು ಅನುಮತಿ ನೀಡದ ಹೊರತು, ಯೋಜನೆಯ ಇಡಬ್ಲುಎಸ್‌ ವಸತಿ ಸಮುಚ್ಚಯದ ಭಾಗವನ್ನು ಮಾತ್ರ ಪೂರ್ಣಗೊಳಿಸಲು ಕಾರ್ಯಸಾಧ್ಯವಾಗುವುದಿಲ್ಲ. ಮೇವರಿಕ್‌ ಸಂಸ್ಥೆಯು ಏಳು ಎಕರೆ ಪ್ರದೇಶದಲ್ಲಿ 1,512 ಇಡಬ್ಲುಎಸ್‌ ವಸತಿ ಸಮುಚ್ಚಯಗಳನ್ನು ಅಭಿವೃದ್ಧಿಪಡಿಸಬೇಕಿದೆ” ಎಂದರು.

ಒಂದು ಹಂತದಲ್ಲಿ ಪೀಠವು, ಒಪ್ಪಂದದ ಪ್ರಕಾರ ವಾಣಿಜ್ಯ ಕಾರ್ಯಾಚರಣೆಗಾಗಿ ಕಾಯ್ದಿರಿಸಿದ ಪ್ರದೇಶವನ್ನು ಬಳಸಲು ಮೇವರಿಕ್‌ಗೆ ಯಾವ ಕಾರಣಕ್ಕಾಗಿ ಅವಕಾಶ ನೀಡಲಾಗಿಲ್ಲ ಎಂದು ಎಂದು ಅಧಿಕಾರಿಗಳಿಗೆ ಪೀಠವು ಪ್ರಶ್ನಿಸಿತು. ಇದೇ ಸಂದರ್ಭದಲ್ಲಿ ಪ್ರಕರಣಕ್ಕೆ ಪರಿಹಾರ ಹುಡುಕಲು ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸುವ ಇರಾದೆಯನ್ನು ಪೀಠವು ವ್ಯಕ್ತಪಡಿಸಿತು.

ಬಿಬಿಎಂಪಿ ವಕೀಲ ಶ್ರೀನಿಧಿ ಅವರ ಕೋರಿಕೆಯ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಮುಂದೂಡಲಾಗುತ್ತಿದ್ದು, ಮುಂದೆ ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಅಲ್ಲದೇ, ವಿಚಾರಣೆಯಲ್ಲಿ ಪೀಠದ ಮುಂದೆ ಹಾಜರಾಗಿದ್ದ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಜಿ ಕುಮಾರ್‌ ನಾಯಕ್‌, ಮೇವರಿಕ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಉದಯ್‌ ಗರುಡಾಚಾರ್‌ ಅವರನ್ನು ಮುಂದಿನ ವಿಚಾರಣೆಯಲ್ಲೂ ಭಾಗಿಯಾಗುವಂತೆ ಪೀಠವು ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com