ದಕ್ಷಿಣ ಕನ್ನಡದ ಮಸೀದಿಯೊಳಗೆ 'ಜೈ ಶ್ರೀರಾಮ್' ಘೋಷಣೆ: ಆರೋಪಿಗಳು ಪತ್ತೆಯಾದದ್ದು ಹೇಗೆ ಎಂದು ಕೇಳಿದ ಸುಪ್ರೀಂ ಕೋರ್ಟ್

ಆರೋಪಿಗಳ ಗುರುತು ಖಾತ್ರಿ ಪಡಿಸಿಕೊಳ್ಳುವ ಮುನ್ನ ಸಿಸಿಟಿವಿ ಇಲ್ಲವೇ ಇನ್ನಾವುದೇ ಪುರಾವೆಗಳನ್ನು ಪರಿಶೀಲಿಸಲಾಗಿದೆಯೇ ಎಂದು ಪ್ರಶ್ನಿಸಿದ ಪೀಠ.
Lord Ram statue
Lord Ram statue
Published on

ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿ ಆವರಣಕ್ಕೆ ನುಗ್ಗಿ 'ಜೈ ಶ್ರೀರಾಮ್' ಘೋಷಣೆ ಕೂಗಿದ ಆರೋಪಿಗಳ ಗುರುತು ಪತ್ತೆ ಹಚ್ಚಿದ್ದು ಹೇಗೆ ಎಂಬ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಆರೋಪಿಗಳ ಗುರುತು ಖಾತ್ರಿಪಡಿಸಿಕೊಳ್ಳುವ ಮುನ್ನ ಸಿಸಿಟಿವಿ ಇಲ್ಲವೇ ಇನ್ನಾವುದೆ ಪುರಾವೆಗಳನ್ನು ಪರಿಶೀಲಿಸಲಾಗಿದೆಯೇ ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಪ್ರಶ್ನಿಸಿತು.

"ಪ್ರತಿವಾದಿಗಳನ್ನು ಹೇಗೆ ಪತ್ತೆ ಹಚ್ಚಲಾಯಿತು? ನೀವು ಸಿಸಿಟಿವಿ ನೋಡಿ ಆರೋಪಿಗಳನ್ನು ಪಕ್ಷಕಾರರನ್ನಾಗಿ ಮಾಡಿದ್ದೀರಾ?" ಎಂದು ನ್ಯಾಯಾಲಯ ದೂರುದಾರರ ಪರ ವಕೀಲರನ್ನು ಕೇಳಿತು.  

ಮಸೀದಿಯೊಳಗೆ ʼಜೈ ಶ್ರೀರಾಮ್ʼ ಎಂದು ಕೂಗಿದರೆ ಅದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಅಂತಿಮವಾಗಿ ದೂರುದಾರರು ಸಲ್ಲಿಸಿದ ಮೇಲ್ಮನವಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ನೀಡುವಂತೆ ಅದು ನಿರ್ದೇಶಿಸಿತು. ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಇನ್ನೂ ಮೇಲ್ಮನವಿ ಸಲ್ಲಿಸಿಲ್ಲ. ಎರಡು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿದೆ.

Also Read
"ಮಸೀದಿಯೊಳಗೆ 'ಜೈ ಶ್ರೀ ರಾಮ್' ಎಂದು ಕೂಗುವುದು ಅಪರಾಧವೇ?" ನಿರ್ಧರಿಸಲಿದೆ ಸುಪ್ರೀಂ ಕೋರ್ಟ್

ದಕ್ಷಿಣ ಕನ್ನಡ ಜಿಲ್ಲೆಯ ಐತ್ತೂರು ಗ್ರಾಮದ ಕಡಬ- ಮರ್ದಾಳ ರಸ್ತೆಯಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿ ಆವರಣಕ್ಕೆ ನುಗ್ಗಿದ್ದ ಕೀರ್ತನ್ ಕುಮಾರ್ ಮತ್ತು ಸಚಿನ್ ಕುಮಾರ್  ʼಜೈ ಶ್ರೀ ರಾಮ್ʼ ಎಂದು ಕೂಗಿದ್ದರು ಹಾಗೂ ಬ್ಯಾರಿಗಳನ್ನು (ಮುಸ್ಲಿಮರು) ಶಾಂತಿಯಿಂದ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂಬುದಾಗಿ ಆರೋಪಿಸಲಾಗಿತ್ತು.

ಐಪಿಸಿ ಸೆಕ್ಷನ್‌ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯಗಳು), 447 (ಅತಿಕ್ರಮಣ) ಮತ್ತು 506 (ಕ್ರಿಮಿನಲ್‌ ಬೆದರಿಕೆ) ಆರೋಪಕ್ಕೆ ಸಂಬಂಧಿಸಿದಂತೆ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ತಮ್ಮ ವಿರುದ್ಧದ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಬಳಿಕ ಅವರಿಬ್ಬರೂ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Also Read
ಮಸೀದಿ ಆವರಣದಲ್ಲಿ ಜೈ ಶ್ರೀರಾಮ್‌ ಘೋಷಣೆ ಆರೋಪ: ಇಬ್ಬರ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಿದ ಹೈಕೋರ್ಟ್‌

ಸೆ. 13ರಂದು ನೀಡಿದ್ದ ತೀರ್ಪಿನಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಇಬ್ಬರ ವಿರುದ್ಧದ ಪ್ರಕರಣ ರದ್ದುಗೊಳಿಸಿದ್ದರು. “ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 295 ಎ ( ಧರ್ಮ, ಧಾರ್ಮಿಕ ಭಾವನೆ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ ಎಂದು ಅರ್ಥವಾಗುತ್ತಿಲ್ಲ. ಜೊತೆಗೆ ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹೀಗಿರುವಾಗ ಅರ್ಜಿದಾರರ ವಿರುದ್ಧ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ” ಎಂದಿದ್ದರು.

ಪ್ರಕರಣದಲ್ಲಿ ಆಪಾದಿತ ಕೃತ್ಯ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಮಹೇಂದ್ರ ಸಿಂಗ್ ಧೋನಿ ಮತ್ತು ಯರ್ರಗುಂಟ್ಲ ಶ್ಯಾಮಸುಂದರ್ (2017) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ್ದ ಪೀಠವು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರದ ಹೋರತಾಗಿ ಯಾವುದೇ ಪ್ರಕರಣವು ಭಾರತೀಯ ದಂಡ ಸಂಹಿತೆ ಸೆಕ್ಷನ್ 295 ಎ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದಿತ್ತು. ಇದನ್ನು ದೂರುದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

Kannada Bar & Bench
kannada.barandbench.com